ಹಿಮಾಲಯದಲ್ಲಿ ಮಾತ್ರ ಕಾಣಬರುವ 36 ವರ್ಷಗಳಿಗೊಮ್ಮೆ ಅರಳುವ ಅಪರೂಪದ ‘ನಾಗಪುಷ್ಪ’ ಹೂವು ಈ ವರ್ಷ ಅರಳಿದೆ ಎನ್ನುವ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

3 ದಶಕಗಳಿಗೊಮ್ಮೆ ಅರಳುವ ಈ ಅಪರೂಪದ ನಾಗಪುಷ್ಪ ಹೂವು ಹಿಮಾಲಯದ ಮಾನಸ ಸರೋವರದಲ್ಲಿ ಮುಂಜಾನೆ 3:30ಕ್ಕೆ ಅರಳಿದೆ ಎಂದು ಒಕ್ಕಣೆ ಬರೆದು, ಎದ್ದು ನಿಂತ ಹಾವಿನ ಹೆಡೆಯ ರೀತಿ ಕಾಣುವ ಬಿಳಿ ಮತ್ತು ತಿಳಿ ಗುಲಾಬಿ ಬಣ್ಣದ ಫೋಟೋವನ್ನು ಅಪ್‌ಲೋಡ್‌ ಮಾಡಲಾಗಿದ್ದು, ಸದ್ಯ ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಆದರೆ ನಿಜಕ್ಕೂ ಇದು ನಾಗಪುಷ್ಪವೇ? ಅಥವಾ 36 ವರ್ಷಗಳಿಗೊಮ್ಮೆ ಅರಳುವ ಹೂವು ಹೌದೇ ಎಂದು ಪರಿಶೀಲಿಸಿದಾಗ ಇದು ಸುಳ್ಳು ಸುದ್ದಿ, ವೈರಲ್‌ ಆಗಿರುವ ಫೋಟೋದಲ್ಲಿರುವುದು ಹೂವೇ ಅಲ್ಲ, ಸಮುದ್ರದಾಳದಲ್ಲಿ ವಾಸಿಸುವ ಜೀವಿ ಎಂದು ತಿಳಿದುಬಂದಿದೆ. ಅಲ್ಲದೆ 2013ರಿಂದಲೂ ಈ ಫೋಟೋ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ವಾಸ್ತವವಾಗಿ ಇದೊಂದು ಹೂವಲ್ಲ. ಸಮುದ್ರದ ಆಳದಲ್ಲಿ ಕಂಡುಬರುವ ಅಕಶೇರುಕ ಜೀವಿ. ಇದನ್ನು ‘ಸೀ ಪೆನ್‌’ ಎಂದು ಕರೆಯಲಾಗುತ್ತದೆ. ಇವುಗಳು ಮೃದು ಹವಳದ ರೀತಿಯೇ ಇರುತ್ತವೆ. ಅಪಾಯದ ಸಂದರ್ಭದಲ್ಲಿ ಸ್ವಯಂಪ್ರೇರಿತವಾಗಿ ಕುಗ್ಗುವ ಗುಣವನ್ನು ಹೊಂದಿರುತ್ತವೆ. ಅಲ್ಲದೆ ವೈರಲ್‌ ಆಗಿರುವ ಸಂದೇಶದಲ್ಲಿ ‘ನಾಗಪುಷ್ಪ’ ಎಂಬ ಬಗ್ಗೆ ಬೇರೆ ಬೇರೆ ರೀತಿಯಲ್ಲಿ ಬರೆಯಲಾಗಿದೆ. ಒಟ್ಟಾರೆ ನಾಗಪುಷ್ಪ ಎಂದು ವೈರಲ್‌ ಆಗಿರುವ ಸುದ್ದಿ ಸುಳ್ಳು ಎಂಬುದು ಸ್ಪಷ್ಟ.

- ವೈರಲ್ ಚೆಕ್