ನರೇಂದ್ರ ಮೋದಿ ಯುಎಇಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಅಲ್ಲಿನ ಮುಸ್ಲಿಮರು ಧರಿಸುವ ರುಮಾಲನ್ನು ಧರಿಸಿದ್ದರು ಎನ್ನುವ ಸಂದೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ವೈರಲ್‌ ಆಗಿರುವ ಚಿತ್ರದಲ್ಲಿ ಅಬುಧಾಬಿಗೆ ಮೋದಿ ಭೇಟಿ ನೀಡಿದ ಬಳಿಕ ಅಬುಧಾಬಿ ಎಕ್ಸಿಕ್ಯೂಟಿವ್‌ ಅಫೈರ್‌ ಅಥಾರಿಟಿ ಚೈರ್‌ಮನ್‌ ಅವರೊಂದಿಗೆ ನಡೆದು ಬರುತ್ತಿರುವ ಫೋಟೋದಲ್ಲಿ ಮೋದಿ ದುಬೈನ ಖಾನ್‌ರಂತೆ ತಲೆಗೆ ರುಮಾಲು ಧರಿಸಿದ್ದಾರೆ.

ಇದನ್ನು ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡಿ, ‘ದುಬೈನಲ್ಲಿ ಗೌರವಾನ್ವಿತ ನರೇಂದ್ರ ಮೋದಿ ಅವರ ಹೊಸ ಅವತಾರ. ಅವರು ಸಂಸ್ಕೃತಿಗೆ ತಕ್ಕಂತೆ ಬದಲಾಗುತ್ತಾರೆ. ಆದರೆ ಸಾಮಾನ್ಯ ಜನರಾದ ನಮಗೆ ಈ ಹಿಂದು ಮುಸ್ಲಿಂ ಕಾರ್ಡ್‌ ಬಗ್ಗೆ ಅರ್ಥವಾಗುವುದಿಲ್ಲ. ಜನನಾಯಕರು ಏನನ್ನು ಬೇಕಾದರೂ ಮಾಡಬಲ್ಲರು. ಜೈಹಿಂದ್‌’ ಎಂದು ಒಕ್ಕಣೆ ಬರೆದು ಶೇರ್‌ ಮಾಡಲಾಗುತ್ತಿದೆ. ಇದು ಭಾರಿ ವೈರಲ್‌ ಆಗುತ್ತಿದೆ.

ಆದರೆ ಈ ಫೋಟೋ ಹಿಂದಿನ ಸತ್ಯಾಸತ್ಯ ಪರಿಶೀಲಿಸಿದಾದ ಇದು ಫೋಟೋಶಾಪ್‌ ತಂತ್ರಜ್ಞಾನ ಬಳಸಿ ಎಡಿಟ್‌ ಮಾಡಿರುವ ಫೋಟೋ ಎಂದು ತಿಳಿದುಬಂದಿದೆ. ರಿವರ್ಸ್‌ ಎಮೇಜ್‌ನಲ್ಲಿ ಪರಿಶೀಲಿಸಿದಾಗ ಪ್ರಧಾನಿ ಮೋದಿ ಅವರ ಅಧಿಕೃತ ಟ್ವೀಟರ್‌ ಖಾತೆಯಲ್ಲೇ ಮೂಲ ಚಿತ್ರ ಲಭ್ಯವಾಗಿದ್ದು, ಅದರಲ್ಲಿ ನರೇಂದ್ರ ಮೋದಿ ತಲೆಗೆ ಯಾವುದೇ ರುಮಾಲು ಧರಿಸಿರುವುದಿಲ್ಲ. ಅದು ಹಲವಾರು ಮಾಧ್ಯಮಗಳಲ್ಲೂ ಪ್ರಕಟವಾಗಿದೆ.

ಕಳೆದ ವಾರ ಪ್ರಧಾನಿ ನರೇಂದ್ರ ಮೋದಿ ಯುಎಇಗೆ ಭೇಟಿ ನೀಡಿದ್ದರು. ಆಗ ಅದು ಅತ್ಯುನ್ನತ ನಾಗರಿಕ ಗೌರವವಾದ ‘ಆರ್ಡರ್‌ ಆಫ್‌ ಝಾಯೇದ್‌’ ಪುರಸ್ಕಾರ ನೀಡಿ ಗೌರವಿಸಿತ್ತು. ಯುಎಇ ಸಂಸ್ಥಾಪಕ ಪಿತಾಮಹ ಶೇಖ್‌ ಝಾಯೇದ್‌ ಬಿನ್‌ ಸುಲ್ತಾನ್‌ ಅಲ್‌ ನಹ್ಮಾನ್‌ ಅವರ ಹೆಸರಿನಲ್ಲಿ ಸ್ಥಾಪಿಸಲಾಗಿರುವ ಪುರಸ್ಕಾರ ಇದು.

- ವೈರಲ್ ಚೆಕ್