ಪ್ರಧಾನಿ ನರೇಂದ್ರ ಮೋದಿ ದೇಶದ ಸಮಸ್ತ ಜನರನ್ನು ಉದ್ದೇಶಿಸಿ ಬರೆದಿದ್ದಾರೆ ಎನ್ನಲಾದ ಪತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಅದರಲ್ಲಿ ಮುಂಬರುವ ದೀಪಾವಳಿಗೆ ದೇಶದ ಪ್ರತಿಯೊಬ್ಬ ನಾಗರಿಕರೂ ಅನ್ಯ ದೇಶಗಳು ಉತ್ಪಾದಿಸಿದ ವಸ್ತುಗಳನ್ನು ಖರೀದಿಸದೇ ದೇಶದಲ್ಲಿಯೇ ಉತ್ಪಾದನೆಯಾದ ವಸ್ತುಗಳನ್ನು ಖರೀದಿಸುವಂತೆ ಕೇಳಿಕೊಂಡಿದ್ದಾರೆ ಎಂದಿದೆ.

ಪತ್ರದ ಕೊನೆಯಲ್ಲಿ ಪ್ರಧಾನಿ ಮೋದಿ ಅವರ ಹಸ್ತಾಕ್ಷರವಿದೆ. ಸದ್ಯ ಈ ಸಂದೇಶ ಸೋಷಿಯಲ್‌ ಮೀಡಿಯಾಗಳಲ್ಲಿ ವೈರಲ್‌ ಆಗುತ್ತಿದೆ. ಸ್ವದೇಶೀ ವಸ್ತುಗಳಿಗೆ ಮತ್ತು ಸ್ವದೇಶಿ ಉದ್ಯಮಿಗಳಿಗೆ ಆದ್ಯತೆ ನೀಡಿ ದೇಶದ ಅಭಿವೃದ್ಧಿಗೆ ಮೋದಿ ಶತಪ್ರಯತ್ನ ಮಾಡುತ್ತಿದ್ದಾರೆ ಎಂದು ನೆಟ್ಟಿಗರು ಕೊಂಡಾಡಿದ್ದಾರೆ.

ಆದರೆ ನಿಜಕ್ಕೂ ಮೋದಿ ಅವರೇ ಈ ಪತ್ರ ಬರೆದು ದೇಶದ ನಾಗರಿಕರಿಗೆ ಸಂದೇಶ ನೀಡಿದ್ದರೇ ಎಂದು ಪರಿಶೀಲಿಸಿದಾಗ ಈ ಸುದ್ದಿ ಸುಳ್ಳು ಎಂಬದಕ್ಕೆ ಹಲವು ಸಾಕ್ಷ್ಯಗಳು ಲಭ್ಯವಾಗಿವೆ. 2016ರಲ್ಲಿಯೂ ಇದೇ ಪತ್ರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಬಳಿಕ ಪ್ರಧಾನಮಂತ್ರಿ ಅವರ ಅಧಿಕೃತ ಟ್ವೀಟರ್‌ ಖಾತೆ ಮೂಲಕ ಪ್ರಧಾನಿ ಕಾರ್ಯಾಲಯ ಇದೊಂದು ನಕಲಿ ಪತ್ರವೆಂದು ಸ್ಪಷ್ಟನೆ ನೀಡಿತ್ತು.

ಅಲ್ಲದೆ ಈಗ ವೈರಲ್‌ ಆಗಿರುವ ಪತ್ರದಲ್ಲಿ ಬಳಸಲಾದ ಲೈನ್‌ ಸ್ಪೇಸ್‌ ಮತ್ತು ಅಲೈನ್‌ಮೆಂಟ್‌ ಸಾಮಾನ್ಯವಾಗಿ ಪ್ರಧಾನಮಂತ್ರಿ ಕಳಿಸುವ ಪತ್ರಗಳಿಗಿಂತ ಭಿನ್ನವಾಗಿದೆ. ಹಾಗೆಯೇ ನರೇಂದ್ರ ಮೋದಿ ಹಸ್ತಾಕ್ಷವು ಅಂತರ್ಜಾಲದಲ್ಲಿ ಲಭ್ಯವಿದೆ. ಅದನ್ನೇ ತೆಗೆದು ಸೂಪರ್‌ ಇಂಪೋಸ್‌ ಮಾಡಲಾಗಿದೆ. ಅಲ್ಲಿಗೆ ದೀಪಾವಳಿಗೆ ಸ್ವದೇಶಿ ವಸ್ತುಗಳನ್ನೇ ಖರೀದಿ ಮಾಡಿ ಎಂದು ಮೋದಿ ಪತ್ರ ಬರೆದಿದ್ದು ಸುಳ್ಳು ಸುದ್ದಿ.

- ವೈರಲ್ ಚೆಕ್