ಆರ್ಥಿಕ ಕುಸಿತದ ಬಗ್ಗೆ ವರದಿಯಾಗುತ್ತಿರುವ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರೊಂದಿಗೆ ಮಾಜಿ ಪ್ರಧಾನಿ ಮನಮೋಹನ ಸಿಂಗ್‌ ಅವರ ಬಳಿ ಸಲಹೆ ಕೇಳಲು ಸಿಂಗ್‌ ನಿವಾಸಕ್ಕೆ ಹೋಗಿದ್ದರು ಎನ್ನುವ ಸಂದೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ವಿಡಿಯೋದಲ್ಲಿ ಪ್ರಧಾನಿ ನರೇಂದ್ರ ಮೋದಿ ಸಕಲ ಭದ್ರತೆಯೊಂದಿಗೆ ಬಂದು ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಅವರಿಗೆ ಹೂಗುಚ್ಛ ನೀಡಿ ಒಳ ಹೋಗುತ್ತಾರೆ. ಆದರೆ ನಿಜಕ್ಕೂ ಪ್ರಧಾನಿ ನರೇಂದ್ರ ಮೋದಿ ಆರ್ಥಿಕ ಸ್ಥಿತಿ ಸುಧಾರಣೆ ಕುರಿತಾಗಿ ಸಿಂಗ್‌ ಅವರ ಬಳಿ ಸಲಹೆ ಕೇಳಲು ಹೋಗಿದ್ದರೇ ಎಂದು ಪರಿಶೀಲಿಸಿದಾಗ ಇದೊಂದು ಸುಳ್ಳು ಸುದ್ದಿ ಎಂದು ತಿಳಿದುಬಂದಿದೆ. ಬೂಮ್‌ಲೈವ್‌ ‘ಮೋದಿ ಮೀಟ್ಸ್‌ ಮನಮೋಹನ ಸಿಂಗ್‌’ ಎಂಬ ಕೀ ವರ್ಡ್ಸ್ ಬಳಸಿ ಹುಡುಕಾಟ ನಡೆಸಿದಾಗ, 2014ರ ವಿಡಿಯೋವೊಂದು ಲಭ್ಯವಾಗಿದೆ.

 

ಪ್ರಧಾನಿ ನರೇಂದ್ರ ಮೋದಿ 2014ರ ಸಾರ್ವತ್ರಿಕ ಚುನಾವಣೆಯಲ್ಲಿ ಗೆದ್ದ ಬಳಿಕ ಸಿಂಗ್‌ ಅವರನ್ನು ಭೇಟಿ ಮಾಡಿದ್ದರು. ಈ ವಿಡಿಯೋವನ್ನು ಬಳಸಿಕೊಂಡು ಪ್ರಧಾನಿ ಮೋದಿ, ಸಿಂಗ್‌ ಅವರ ಬಳಿ ಸಲಹೆ ಕೇಳಲು ಹೋಗಿದ್ದಾರೆ ಎಂದು ಸುಳ್ಳು ಸುದ್ದಿ ಹರಡಲಾಗುತ್ತಿದೆ.

ಹಾಗೆಯೇ ಮೂಲ ವಿಡಿಯೋದಾಲ್ಲಾಗಲೀ, ವೈರಲ್‌ ಆಗಿರುವ ವಿಡಿಯೋದಲ್ಲಾಗಲೀ ಪ್ರಧಾನಿ ಮೋದಿ ಅವರೊಟ್ಟಿಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಇಲ್ಲ. ಆದರೆ ಪ್ರಸಕ್ತ ಸನ್ನಿವೇಶಕ್ಕೆ ಸರಿಹೊಂದುವಂತೆ ಸೀತಾರಾಮನ್‌ ಅವರ ಹೆಸರನ್ನು ಬಳಸಿಕೊಳ್ಳಲಾಗಿದೆ.

ಇತ್ತೀಚೆಗೆ ಆರ್ಥಿಕ ಹಿಂಜರಿತಕ್ಕೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಸರ್ವಾಂಗೀಣ ಕಳಪೆ ನಿರ್ಧಾರಗಳೇ ಕಾರಣ ಎಂದು ಮಾಜಿ ಪ್ರಧಾನಿ ಮನಮೋಹನ ಸಿಂಗ್‌ ತೀವ್ರ ವಾಗ್ದಾಳಿ ನಡೆಸಿದ್ದರು.

- ವೈರಲ್ ಚೆಕ್