ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ರಾಜ್ಯದ ಮಹಿಳೆಯರಿಗೆ ಮೆಟ್ರೋ ಮತ್ತು ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಅವಕಾಶ ನೀಡಿ ಯೋಜನೆ ಜಾರಿಗೆ ತಂದಿದ್ದನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಟೀಕಿಸಿದ್ದಾರೆ ಎಂಬ ಸಂದೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ನಿರ್ಮಲಾ ಸೀತಾರಾಮನ್‌ ಹೆಸರಿನ ಫೇಸ್‌ಬುಕ್‌ ಪೇಜ್‌ವೊಂದು, ಈ ಫೋಟೋವನ್ನು ಪೋಸ್ಟ್‌ ಮಾಡಿ, ‘ಒಬ್ಬ ದಿನಗೂಲಿ ನೌಕರ ತನ್ನ ಮೆಟ್ರೋ ಪ್ರಯಾಣ ದರವನ್ನು ಪಾವತಿಸುತ್ತಿರುವಾಗ, ಶ್ರೀಮಂತ ಮಹಿಳೆಯೊಬ್ಬರಿಗೆ ಇದರಿಂದ ವಿನಾಯಿತಿ ದೊರಕುತ್ತಿದೆ. ಇದ್ಯಾವ ತರದ ಯೋಜನೆ? ಅರವಿಂದ ಕೇಜ್ರಿವಾಲ್‌ ನಿಮ್ಮ ಮೂರ್ಖತನಕ್ಕೆ ಒಂದು ಮಿತಿ ಇಲ್ಲವೇ? ಚುನಾವಣೆ ಜಯಗಳಿಸಲೆಂದೇ ಈ ನಿಮ್ಮ ಬಿಟ್ಟಿಯೋಜನೆ?’ ಎಂದು ಒಕ್ಕಣೆ ಬರೆಯಲಾಗಿದೆ. ಈ ಪೋಸ್ಟ್‌ಗೆ ಸುಮಾರು 14 ಸಾವಿರ ಜನರು ಲೈಕ್‌ ಮಾಡಿದ್ದಾರೆ. ಮತ್ತು 4 ಸಾವಿರ ಕಾಮೆಂಟ್‌ಗಳು ವ್ಯಕ್ತವಾಗಿವೆ.

ಆದರೆ ನಿಜಕ್ಕೂ ನಿರ್ಮಲಾ ಸೀತಾರಾಮನ್‌ ಕೇಜ್ರಿವಾಲ್‌ ಅವರ ಫ್ರೀ ರೈಡ್‌ ಯೋಜನೆಯನ್ನು ಟೀಕಿಸಿದ್ದರೇ ಎಂದು ಪರಿಶೀಲಿಸಿದಾಗ ಈ ಫೇಸ್‌ಬುಕ್‌ ಪೇಜ್‌ ವಿತ್ತ ಸಚಿವರ ಅಧಿಕೃತ ಫೇಸ್‌ಬುಕ್‌ ಪೇಜ್‌ ಅಲ್ಲ, ಇದೊಂದು ನಕಲಿ ಖಾತೆ ಎಂದು ತಿಳಿದುಬಂದಿದೆ. ಅಧಿಕೃತ ಖಾತೆಗೂ ವೈರಲ್‌ ಆಗಿರುವ ಖಾತೆಗೂ ಸಾಕಷ್ಟುವ್ಯತ್ಯಾಸಗಳಿರುವುದು ಗೋಚರವಾಗುತ್ತದೆ. ಸೀತಾರಾಮನ್‌ ಎಂಬ ಸರ್‌ನೇಮ್‌ ಅನ್ನು ತಪ್ಪಾಗಿ ಬರೆಯಲಾಗಿದೆ.

- ವೈರಲ್ ಚೆಕ್