ಡಾ. ಮನಮೋಹನ ಸಿಂಗ್‌ ಪ್ರಧಾನಿಯಾಗಿದ್ದಾಗ ಅವರಿಗೆ ಸೋನಿಯಾ ಗಾಂಧಿ ಮತ್ತು ರಾಹುಲ್‌ ಗಾಂಧಿ ಯಾವುದಕ್ಕೂ ಸ್ವಾತಂತ್ರ್ಯ ನೀಡುತ್ತಿರಲಿಲ್ಲ ಎಂಬ ಟೀಕೆ ಜನಜನಿತವಾಗಿತ್ತು. ಈಗ ಮಾಜಿ ಪ್ರಧಾನಿಯಾದ ಮೇಲೂ ಅವರಿಗೆ ಗಾಂಧಿ ಕುಟುಂಬದವರು ಸ್ವಾತಂತ್ರ್ಯ ನೀಡುತ್ತಿಲ್ಲ, ಮೊನ್ನೆ ಮನಮೋಹನ ಸಿಂಗ್‌ ಅವರ ಹುಟ್ಟುಹಬ್ಬದ ದಿನ ಅವರಿಗೆ ಕೇಕ್‌ ಕಟ್‌ ಮಾಡುವುದಕ್ಕೂ ಬಿಡದೆ ರಾಹುಲ್‌ ಗಾಂಧಿ ತಾವೇ ಕಟ್‌ ಮಾಡಿದರು ಎಂಬ ವಿಡಿಯೋವೊಂದು ಇದೀಗ ವೈರಲ್‌ ಆಗಿದೆ.

ಸೆ.26ರಂದು ಮನಮೋಹನ ಸಿಂಗ್‌ ಅವರ ಹುಟ್ಟುಹಬ್ಬವಿತ್ತು. ಅಂದು ರಿಶಿ ಬೆಗ್ರೆ ಎಂಬುವರು ಸೋಷಿಯಲ್‌ ಮೀಡಿಯಾದಲ್ಲಿ ಒಂದು ವಿಡಿಯೋ ಪೋಸ್ಟ್‌ ಮಾಡಿದ್ದಾರೆ. ಅದರಲ್ಲಿ ಮನಮೋಹನ ಸಿಂಗ್‌ರ ಮುಂದಿರುವ ಕೇಕನ್ನು ಮೊದಲಿಗೆ ಸಿಂಗ್‌ ಅವರ ಕೈಹಿಡಿದು ರಾಹುಲ್‌ ಕತ್ತರಿಸಲು ಯತ್ನಿಸುತ್ತಾರೆ.

 

ನಂತರ ಸಿಂಗ್‌ ಅವರಿಂದ ತಾವೇ ಚಾಕು ತೆಗೆದುಕೊಂಡು ಕೇಕ್‌ ಕತ್ತರಿಸುತ್ತಾರೆ. ‘ಮನಮೋಹನ ಸಿಂಗ್‌ ಅವರಿಗೆ ತಮ್ಮದೇ ಕೇಕ್‌ ಕತ್ತರಿಸುವ ಸ್ವಾತಂತ್ರ್ಯವೂ ಇಲ್ಲ’ ಎಂದು ಬೆಗ್ರೆ ಇದಕ್ಕೆ ಟಿಪ್ಪಣಿ ಬರೆದಿದ್ದಾರೆ. ಈ ವಿಡಿಯೋಕ್ಕೆ 7000ಕ್ಕೂ ಹೆಚ್ಚು ಲೈಕ್‌ಗಳು ಬಂದಿವೆ.

ಆದರೆ, ವಾಸ್ತವದಲ್ಲಿ ಇದು ಮನಮೋಹನ ಸಿಂಗ್‌ ಅವರ ಹುಟ್ಟುಹಬ್ಬದ ವಿಡಿಯೋವೇ ಅಲ್ಲ. 2018ರ ಡಿಸೆಂಬರ್‌ 28ರಂದು ಕಾಂಗ್ರೆಸ್‌ ಪಕ್ಷದ ಸಂಸ್ಥಾಪನೆ ದಿನದ ವಿಡಿಯೋ. ಕಳೆದ ವರ್ಷ ಸ್ವತಃ ಕಾಂಗ್ರೆಸ್‌ ಪಕ್ಷದ ವೆಬ್‌ಸೈಟಿನಲ್ಲೇ ಈ ವಿಡಿಯೋ ಪೋಸ್ಟ್‌ ಮಾಡಲಾಗಿತ್ತು. ವಿಚಿತ್ರವೆಂದರೆ ಬೆಗ್ರೆ ಅವರು 2018ರಲ್ಲೂ ಈ ವಿಡಿಯೋ ಟ್ವೀಟ್‌ ಮಾಡಿದ್ದರು. ಈಗ ಸುಳ್ಳು ಕ್ಯಾಪ್ಷನ್‌ ಬರೆದು ಮತ್ತೆ ಟ್ವೀಟ್‌ ಮಾಡಿದ್ದಾರೆ.

 - ವೈರಲ್ ಚೆಕ್