‘ಈ ಬಂಗಲೆಗಳನ್ನು ಒಮ್ಮೆ ನೋಡಿ, ಇವು ಗುಲಾಬ್‌ ನಬಿ ಆಜಾದ್‌, ಓಮರ್‌ ಅಬ್ದುಲ್ಲಾ, ಫಾರೂಕ್‌ ಅಬ್ದುಲ್ಲಾ, ಮೆಹಬೂಬ ಮುಫ್ತಿ ಅವರ ಸರ್ಕಾರಿ ಬಂಗಲೆಗಳಿವು. ಇವುಗಳ ಎಲ್ಲಾ ಖರ್ಚನ್ನೂ ಸರ್ಕಾರವೇ ಭರಿಸುತ್ತಿದೆ. ಸಂವಿಧಾನದಲ್ಲಿದ್ದ ಆರ್ಟಿಕಲ್‌ 370 ಮತ್ತು 35ಎ ಯನ್ನು ರದ್ದು ಮಾಡಿರುವುದಕ್ಕೆ ಇವರೆಲ್ಲಾ ಏಕೆ ವಿರೋಧ ವ್ಯಕ್ತಪಡಿಸಿದರೆಂದು ಈಗ ಅರ್ಥವಾಗುತ್ತದೆ’ ಎಂದು ಒಕ್ಕಣೆ ಬರೆದ ಸಂದೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಈ ಸಂದೇಶದೊಂದಿಗೆ 4 ಫೋಟೋಗಳನ್ನು ಪೋಸ್ಟ್‌ ಮಾಡಲಾಗಿದೆ. ಆದರೆ ನಿಜಕ್ಕೂ ಇವು ಕಾಶ್ಮೀರಿ ರಾಜಕೀಯ ನಾಯಕರ ಬಂಗಲೆಗಳೇ ಎಂದು ಪರಿಶೀಲನೆಗೆ ಮುಂದಾದಾಗ ಇದೊಂದು ಸುಳ್ಳುಸುದ್ದಿ ಎಂದು ತಿಳಿದುಬಂದಿದೆ.

ರಿವರ್ಸ್‌ ಇಮೇಜ್‌ನಲ್ಲಿ ಹುಡುಕಹೊರಟಾಗ ಮೊದನೇ ಚಿತ್ರ ಶ್ರೀನಗರದ ಗುಪ್ಕಾರ್‌ ರೋಡ್‌ನಲ್ಲಿರುವ ಓಮರ್‌ ಅಬ್ದುಲ್ಲಾ ನಿವಾಸ. ಅದು ಅವರು ಜಮ್ಮು-ಕಾಶೀರ ಮುಖ್ಯಮಂತ್ರಿಯಾಗಿದ್ದಾಗ ಬಳಸುತ್ತಿದ್ದ ಮನೆ. ಇನ್ನು ಎರಡನೆಯ ಚಿತ್ರ ಶ್ರೀನಗರದ ವೈಭವೋಪೇತ ಹೋಟೆಲ್‌. 3ನೇ ಚಿತ್ರ ಶ್ರೀನಗರದ ಲಲಿತ್‌ ಗ್ರಾಂಡ್‌ ಪ್ಯಾಲೇಸ್‌ನದ್ದು. ಇನ್ನು ನಾಲ್ಕನೇ ಚಿತ್ರವೂ ಶ್ರೀನಗರದ ಲಲಿತ್‌ ಗ್ರಾಂಡ್‌ ಪ್ಯಾಲೇಸ್‌ನದ್ದು.

ಒಟ್ಟಾರೆ ಶ್ರೀನಗರದ ವೈಭವೋಪೇತ ಹೋಟೆಲ್‌ಗಳ ಫೋಟೋವನ್ನು ಪೋಸ್ಟ್‌ ಮಾಡಿ, ಓಮರ್‌ ಅಬ್ದುಲ್ಲಾ, ಮೆಹಬೂಬ ಮುಫ್ತಿ ಮತ್ತು ಗುಲಾಬ್‌ ನಬಿ ಆಜಾದ್‌ ಅವರ ಸರ್ಕಾರಿ ಭಂಗಲೆ ಎಂದು ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆ.