ರಾಮಾಯಣದಲ್ಲಿ ಉಲ್ಲೇಖವಾಗಿರುವ ಜಟಾಯು ಪಕ್ಷಿಯು ಕೇರಳದಲ್ಲಿ ಪ್ರತ್ಯಕ್ಷವಾಗಿದೆ ಎಂಬ ಸಂದೇಶವೊಂದರ ಜೊತೆಗೆ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ನಿಜನಾ ಈ ಸುದ್ದಿ? ಏನಿದರ ಸತ್ಯಾಸತ್ಯತೆ?
ರಾಮಾಯಣದಲ್ಲಿ ಉಲ್ಲೇಖವಾಗಿರುವ ಜಟಾಯು ಪಕ್ಷಿಯು ಕೇರಳದಲ್ಲಿ ಪ್ರತ್ಯಕ್ಷವಾಗಿದೆ ಎಂಬ ಸಂದೇಶವೊಂದರ ಜೊತೆಗೆ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ವಿಡಿಯೋದಲ್ಲಿ ದೈತ್ಯ ಪಕ್ಷಿಯೊಂದು ಅಗಲವಾದ ರೆಕ್ಕೆಗಳನ್ನು ಬಿಚ್ಚಿ ಒಂದು ಸುತ್ತು ತಿರುಗಿ ಹಾರಿಹೋಗುವ ದೃಶ್ಯವಿದೆ.
ಸೇಂತಿಲ್ ಅಂದವನ್ ಎಂಬುವರು ಈ ವಿಡಿಯೋವನ್ನು ಟ್ವೀಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಜುಲೈ 27ರಂದು ಪೋಸ್ಟ್ ಮಾಡಿರುವ ಈ ವಿಡಿಯೋವು 370 ಬಾರಿ ರೀಟ್ವೀಟ್ ಆಗಿದೆ. ಕೇವಲ ಟ್ವೀಟರ್‌ನಲ್ಲಿ ಮಾತ್ರವಲ್ಲದೆ ಫೇಸ್‌ಬುಕ್‌ನಲ್ಲಿಯೂ ಈ ವಿಡಿಯೋ ವೈರಲ್ ಆಗಿದೆ.
ರಾಮಾಯಣದಲ್ಲಿ ಸೀತೆಯನ್ನು ರಾವಣನು ಅಪಹರಿಸುವ ಸಂದರ್ಭದಲ್ಲಿ ಜಟಾಯುವು ರಾವಣನಿಗೆ ತಡೆಯೊಡ್ಡಿತು. ಆಗ ರಾವಣನು ಅದರ ರೆಕ್ಕೆಯನ್ನು ಕತ್ತರಿಸಿ ಮುಂದಕ್ಕೆ ಸಾಗಿದನು ಎಂದು ಉಲ್ಲೇಖವಾಗಿದೆ. ಅದು ಕೇರಳದ ಕೊಲ್ಲಂ ಜಿಲ್ಲೆಯ ಚದಾಯಮಂಗಳಂನಲ್ಲಿ ಕೊನೆಯುಸಿರೆಳೆಯಿತು ಎಂದು ನಂಬಲಾಗಿದೆ. ವೈರಲ್ ಆಗಿರುವ ಸಂದೇಶದಲ್ಲಿ ಈ ಸ್ಥಳದಲ್ಲಿಯೇ ಜಟಾಯು ಪ್ರತ್ಯಕ್ಷವಾಯಿತು ಎಂದು ಹೇಳಲಾಗಿದೆ.
ಆದರೆ ನಿಜಕ್ಕೂ ಇದು ಪುರಾಣದಲ್ಲಿ ಉಲ್ಲೇಖವಾಗಿರುವ ಜಟಾಯುವೇ ಎಂದು ಪರಿಶೀಲಿಸಿದಾಗ ಇದು ಕಾಂಡೋರ್ ಪಕ್ಷಿ ಎಂದು ತಿಳಿದುಬಂದಿದೆ. ಕಾಂಡೋರ್ ರಣಹದ್ದುವಿನ ಒಂದು ವಿಧ. ದಕ್ಷಿಣ ಅಮೆರಿಕದಲ್ಲಿ ಇದು ಕಂಡು ಬರುತ್ತದೆ. ಇವುಗಳ ರೆಕ್ಕೆಯು 3.2 ಮೀಟರ್ ಉದ್ದವಿರುತ್ತದೆ. ಅಲ್ಲದೆ ವೈರಲ್ ಆಗಿರುವ ವಿಡಿಯೋವು ಹೊಸತಲ್ಲ, 2014ರದ್ದು. ಈ ವಿಡಿಯೋದಲ್ಲಿರುವ ಕಾಂಡೋರ್ ಹೆಸರು ಸಯಾನಿ. ವಿಷ ಆಹಾರ ಸೇವಿಸಿದ ರೀತಿಯಲ್ಲಿ ಅರ್ಜೆಂಟೈನಾದಲ್ಲಿ ಪತ್ತೆಯಾಗಿತ್ತು. ನಂತರ ಅದನ್ನು ರಕ್ಷಿಸಿ ಅರಣ್ಯಕ್ಕೆ ಬಿಡಲಾಗಿತ್ತು.
