ಮೋದಿ ವಿದೇಶಗಳೊಂದಿಗೆ ಸ್ನೇಹ ಸಂಪಾದಿಸಿದ ಪರಿಣಾಮ ಇಸ್ರೇಲ್‌  ಗಂಗಾ ನದಿಯ ತ್ಯಾಜ್ಯವನ್ನು ತೆಗೆದು ಸ್ವಚ್ಛ ಮಾಡುವ ಯಂತ್ರವನ್ನು ಕೊಡುಗೆಯಾಗಿ ನೀಡಿದೆ ಎಂಬ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ನಿಜನಾ ಈ ಸುದ್ದಿ? ಏನಿದರ ಸತ್ಯಾಸತ್ಯತೆ? 

ಯಂತ್ರವೊಂದು ನೀರಿನಲ್ಲಿರುವ ತ್ಯಾಜ್ಯವನ್ನು ಬೇರ್ಪಡಿಸುತ್ತಿರುವ ವಿಡಿಯೋ ಪೋಸ್ಟ್‌ ಮಾಡಿ, ‘ಇಸ್ರೇಲ್‌ ಭಾರತದಕ್ಕೆ ಗಂಗಾ ನದಿ ಶುದ್ಧೀಕರಣಕ್ಕೆ ಯಂತ್ರವೊಂದನ್ನು ಉಡುಗೊರೆಯಾಗಿ ನೀಡಿದೆ. ಮೋದಿ ಸರ್ಕಾರದ ಸ್ನೇಹದ ಪ್ರತೀಕವಾಗಿ ಇಸ್ರೇಲ್‌ ಈ ಗಿಫ್ಟ್‌ ನೀಡಿದೆ. ಇದೀಗ ಗೋದಾವರಿಯಲ್ಲಿದೆ’ ಎಂದು ಒಕ್ಕಣೆ ಬರೆಯಲಾಗಿದೆ.

ಸೋಷಿಯಲ್‌ ಮೀಡಿಯಾದಲ್ಲಿ ಈ ಕುರಿತ ವಿಡಿಯೋ ವೈರಲ್‌ ಆಗಿದೆ. ಆದರೆ ಇದರೊಂದಿಗೆ ಲಗತ್ತಿಸಲಾದ ವಿಡಿಯೋಗಳು ಭಿನ್ನ ಭಿನ್ನವಾಗಿವೆ. ಹಾಗಾದರೆ ಈ ಸುದ್ದಿ ನಿಜವೇ ಎಂದು ಸುದ್ದಿ ಮಾಧ್ಯಮವೊಂದು ಪರಿಶೀಲಿಸಿದಾಗ ಇದು ಸುಳ್ಳುಸುದ್ದಿಯಾಗಿದ್ದು, 2018ರಿಂದಲೇ ಜಾಲತಾಣಗಳಲ್ಲಿ ಹರಿದಾಡುತ್ತಿದೆ ಎಂದು ತಿಳಿದುಬಂದಿದೆ.

ವೈರಲ್‌ ಆಗಿರುವ ಸಂದೇಶದಲ್ಲಿ 3 ವಿಡಿಯೋಗಳಿವೆ. ಅದರಲ್ಲಿ ಒಂದು ಯಂತ್ರ ಮಾತ್ರ ಭಾರತದ್ದು. ರಿವರ್ಸ್‌ ಇಮೇಜ್‌ನಲ್ಲಿ ಹುಡುಕಹೊರಟಾಗ, ಉಳಿದ ಎರಡು ನದಿ ಶುದ್ಧೀಕರಣ ಯಂತ್ರಗಳು ಮೇರಿಲ್ಯಾಂಡ್‌ ಮತ್ತು ಅಮೆರಿಕದ್ದು ಎಂದು ತಿಳಿದು ಬಂದಿದೆ.

ಹಾಗೆಯೇ ಇನ್ನೊಂದು ಭಾರತದ್ದು. ಆದರೆ ಅದನ್ನು ಇಸ್ರೇಲ್‌ ಭಾರತಕ್ಕೆ ಉಡುಗೊರೆಯಾಗಿ ನೀಡಿಲ್ಲ. 2015ರಲ್ಲಿ ಕುಂಭ ಮೇಳ ನಡೆದ ನಂತರ ಮಹಾರಾಷ್ಟ್ರ ಸರ್ಕಾರವು ಈ ಯಂತ್ರದ ಬಳಸಿ ಗೋದಾವರಿ ನದಿಯನ್ನು ಸ್ವಚ್ಛ ಮಾಡಿತ್ತು. ಆ ವಿಡಿಯೋವನ್ನು ಯುಟ್ಯೂಬ್‌ನಲ್ಲಿ ಅಪ್ಲೋಡ್‌ ಮಾಡಲಾಗಿದೆ. ಸದ್ಯ ಇವೇ ವಿಡಿಯೋಗಳನ್ನು ಬಳಸಿಕೊಂಡು ಸುಳ್ಳುಸುದ್ದಿ ಹರಡಲಾಗುತ್ತಿದೆ.

- ವೈರಲ್ ಚೆಕ್