ಫ್ಲಿಪ್‌ಕಾರ್ಟ್‌ ಆನ್‌ಲೈನ್‌ ಮಾಲ್‌ ಭಾರಿ ರಿಯಾಯಿತಿ ಘೋಷಿಸಿದೆ ಎಂಬ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಅದರಲ್ಲಿ ಜುಲೈ 4ರಿಂದ 18ರ ವರೆಗೆ ಫ್ಲಿಪ್‌ಕಾರ್ಟ್‌ 90% ರಿಯಾಯಿತಿ ಘೋಷಿಸಿದೆ.

25,000 ರು.ನ ಮೊಬೈಲನ್ನು ಕೇವಲ 29 ರು.ಗೆ, 35000 ರು. ಎಚ್‌ಡಿ ಟೀವಿಯನ್ನು ಕೇವಲ 159 ರು.ಗೆ ಮಾರಾಟ ಮಾಡಲಾಗುತ್ತಿದೆ ಎಂದು ಹೇಳಲಾಗಿದೆ. ಇವುಗಳನ್ನು ಕೊಳ್ಳಬೇಕೆಂದಲ್ಲಿ ಈ ಲಿಂಕ್‌ ಕ್ಲಿಕ್‌ ಮಾಡಿ ಎಂದು ವೆಬ್‌ಸೈಟ್‌ ವಿಳಾಸವೊಂದನ್ನು ಲಗತ್ತಿಸಲಾಗಿದೆ.

ಈ ವೆಬ್‌ಸೈಟ್‌ ವಿಳಾಸದ ಮೇಲೆ ಕ್ಲಿಕ್‌ ಮಾಡಿದಾಗ ಆಕರ್ಷಕ ಡಿಸ್ಕೌಂಟ್‌ನಲ್ಲಿ ವಸ್ತುಗಳಿವೆ ಎಂದು ಅವುಗಳ ಮೂಲ ದರ ಮತ್ತು ರಿಯಾಯಿತಿ ದರವನ್ನು ಪ್ರಕಟಿಸಲಾಗಿದೆ. ಒಮ್ಮೆ ಒಂದು ವಸ್ತುವಿನ ಮೇಲೆ ಕ್ಲಿಕ್‌ ಮಾಡಿದರೆ ಅದು ಗ್ರಾಹಕರು ಹೆಸರು, ಫೋನ್‌ ನಂಬರ್‌ ಮತ್ತಿತರ ವಿಳಾಸ ಭರ್ತಿ ಮಾಡುವಂತೆ ಕೇಳುತ್ತದೆ.

ಮುಂದಿನ ಹಂತದಲ್ಲಿ ಗ್ರಾಹಕರು ತಮ್ಮ ಆರ್ಡರ್‌ ಖಚಿತಪಡಿಸಿದಾಗ ಈ ಸಂದೇಶವನ್ನು ಕನಿಷ್ಠ 10 ಗ್ರೂಪ್‌ಗಳಿಗೆ ಕಳಿಸುವುದು ಕಡ್ಡಾಯ ಎನ್ನುವ ಅಲರ್ಟ್‌ ಬರುತ್ತದೆ. ಅಲ್ಲಿಗೆ ಇದೊಂದು ನಕಲಿ ಸುದ್ದಿ ಎನ್ನುವುದು ಸ್ಪಷ್ಟ. ಅಲ್ಲದೆ ಇದು ನಕಲಿ ಎನ್ನುವುದಕ್ಕೆ ಹಲವು ಸಾಕ್ಷ್ಯಗಳೂ ಇವೆ.

ಮೊದಲನೆಯದಾಗಿ ವೈರಲ್‌ ಆಗಿರುವ ಸಂದೇಶದಲ್ಲಿರುವ ಫ್ಲಿಪ್‌ಕಾರ್ಟ್‌ ಲೋಗೋ ನೈಜ ಲೋಗೋ ಅಲ್ಲ. ಅಲ್ಲದೆ ಇದರಲ್ಲಿ ನೀಡಿರುವ ವೆಬ್‌ಸೈಟ್‌ ವಿಳಾಸವೂ ಅಧಿಕೃತ ಫ್ಲಿಪ್‌ಕಾರ್ಟ್‌ ವಿಳಾಸ ಅಲ್ಲ. ಹೀಗಾಗಿ ಇದೊಂದು ಸುಳ್ಳು ಸುದ್ದಿ. ಜನರು ಇಂತಹವುಗಳ ಬಗ್ಗೆ ಎಚ್ಚರ ವಹಿಸಬೇಕು.

- ವೈರಲ್ ಚೆಕ್