ನವದೆಹಲಿ[ಜೂ.27]: ಭಾರತದಲ್ಲಿ ವ್ಯಕ್ತಿಯೊಬ್ಬರು ನಡು ರಸ್ತೆಯಲ್ಲೇ ನಮಾಜು ಮಾಡಿದ್ದಾರೆ ಎನ್ನುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಪುಷ್ಪೇಂದ್ರ ಕುಲಶ್ರೇಷ್ಠ ಎಂಬುವವರು ಈ ವಿಡಿಯೋವನ್ನು ಟ್ವೀಟರ್‌ನಲ್ಲಿ ಪೋಸ್ಟ್‌ ಮಾಡಿ, ‘ಈ ವಿಡಿಯೋವನ್ನು ಸೂಕ್ಷ್ಮವಾಗಿ ನೋಡಿ. ಇವರು ಗಲಭೆ ಎಬ್ಬಿಸುವ ಉದ್ದೇಶದಿಂದ ನಮಾಜು ಮಾಡುತ್ತಿಲ್ಲ’ ಎಂದು ಒಕ್ಕಣೆ ಬರೆದಿದ್ದಾರೆ.

ವಿಡಿಯೋದಲ್ಲಿ ವ್ಯಕ್ತಿಯೊಬ್ಬರು ನಡು ರಸ್ತೆಯಲ್ಲಿ ನಮಾಜ್‌ ಮಾಡುವ ದೃಶ್ಯವಿದೆ. ಇದು 2800 ಬಾರಿ ರಿಟ್ವೀಟ್‌ ಆಗಿದೆ ಮತ್ತು 4400 ಲೈಕ್ಸ್‌ ಪಡೆದಿದೆ. ಹಲವು ಜನರು ಇದು ಭಾರತದ್ದೇ ವಿಡಿಯೋ ಎಂದು ಶೇರ್‌ ಮಾಡಿದ್ದಾರೆ.

ಆದರೆ ಈ ವಿಡಿಯೋದ ಮೂಲವನ್ನು ಆಲ್ಟ್‌ ನ್ಯೂಸ್‌ ಹುಡುಕಿದ್ದು, ಇದು ಮಲೇಷಿಯಾದ ವಿಡಿಯೋ ಎಂದು ತಿಳಿದುಬಂದಿದೆ. ವಿಡಿಯೋದಲ್ಲಿ ಕಾಣುವ ಬಿಲ್‌ಬೋರ್ಡ್‌ಗಳ ಮೇಲೆ 2 ಫೋನ್‌ ನಂಬರ್‌ಗಳಿವೆ. ಅವು ಮಲೇಷಿಯಾದ ಬ್ಯುಸಿನೆಸ್‌ ವೆಬ್‌ಸೈಟ್‌ Emhub.comನ ಫೋನ್‌ ನಂಬರ್‌ ಆಗಿವೆ. ಈ ವಿಡಿಯೋ 2018ರಿಂದಲೂ ಸೋಷಿಯಲ್‌ ಮೀಡಿಯಾಗಳಲ್ಲಿ ಹರಿದಾಡುತ್ತಿದೆ. ಅಲ್ಲದೆ ವಿಡಿಯೋದ ತುಣುಕುನ್ನು ಪರಿಶೀಲಿಸಿದಾಗ ಒಂದೆಡೆ ಸಣ್ಣ ಗುಡಿಲು,ಮತ್ತೊಂದೆಡೆ ಬಿಲ್‌ ಬೋರ್ಡ್ ಹಾಗೂ ಜಾಹೀರಾತು ಫಲಕಗಳು ಕಾಣಿಸುತ್ತವೆ.

ಗೂಗಲ್‌ನಲ್ಲಿ ಈ ಜಾಡು ಹಿಡಿದು ಹುಡುಕಹೊರಟಾಗ ಸ್ಪಷ್ಟವಾಗಿ ಗೋಚರಿಸುವ ಫೋಟೋ ಲಭ್ಯವಾಗಿದೆ. ಆಗ ಅದು ಮಲೇಷಿಯಾದ ಲಾಂಗ್‌ ವ್ಯಾಲಿಯ ವಿಡಿಯೋ ಎಂದು ತಿಳಿದುಬಂದಿದೆ.