ನವದೆಹಲಿ[ಸೆ.14]: ರೋಮನ್‌ ಮ್ಯಾಕ್ಸೆಸ್‌ ವಿಜೇತ ಪತ್ರಕರ್ತ ರವೀಶ್‌ ಕುಮಾರ್‌ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮೇಲ್ವರ್ಗದ್ದು ಎಂದು ಆರೋಪಿಸಿ ಹೇಳಿಕೆ ನೀಡಿದ್ದಾರೆ ಎಂಬ ಹೇಳಿಕೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ.

ವೈರಲ್‌ ಆಗಿರುವ ಹೇಳಿಕೆ ಹೀಗಿದೆ; ‘ಇಸ್ರೋ ಸಂಸ್ಥೆ ಬ್ರಾಹ್ಮಣರ ಪರ ಮತ್ತು ಅಲ್ಪಸಂಖ್ಯಾತರ ವಿರುದ್ಧವಾದುದು. ಹಾಗಾಗಿಯೇ ಚಂದ್ರನ ಕಕ್ಷೆಗೆ ಕಳುಹಿಸಿರುವ ಲ್ಯಾಂಡರ್‌ಗೆ ಉಸ್ಮಾನ್‌, ಅಬ್ದುಲ್‌, ಪೀಟರ್‌ ಎಂದಿಡುವ ಬದಲಿಗೆ ವಿಕ್ರಮ್‌ ಎಂದು ಹೆಸರಿಟ್ಟಿದೆ. ಭೂಮಿಯ ಮೇಲೆ ಮನುಷ್ಯರು ಹಸಿವಿನಿಂದ ಸಾಯುತ್ತಿರುವಾಗ, ಸಾವಿರ ಕೋಟಿ ಖರ್ಚು ಮಾಡಿ ಚಂದ್ರನ ದಕ್ಷಿಣ ಧ್ರುವದಲ್ಲಿ ಸೆಲ್ಫಿ ತೆಗೆದುಕೊಳ್ಳುವುದರಿಂದ ಸಾಧಿಸುವುದಾದರೂ ಏನನ್ನು’ ಎಂದು ಹೇಳಲಾಗಿದೆ. ಸದ್ಯ ಈ ಹೇಳಿಕೆಯು ವಾಟ್ಸ್‌ಆ್ಯಪ್‌, ಫೇಸ್‌ಬುಕ್‌, ಟ್ವೀಟರ್‌ನಲ್ಲಿ ವೈರಲ್‌ ಆಗುತ್ತಿದೆ.

ಆದರೆ ನಿಜಕ್ಕೂ ಇಸ್ರೋ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಬಗ್ಗೆ ಪತ್ರಕರ್ತ ರವೀಶ್‌ ಕುಮಾರ್‌ ಹೀಗೆ ಹೇಳಿದ್ದು ನಿಜವೇ ಎಂದು ಪರಿಶೀಲಿಸಿದಾಗ ಇದೊಂದು ಸುಳ್ಳು ಸುದ್ದಿ, ರವೀಶ್‌ ಕುಮಾರ್‌ ಹೆಸರಿನಲ್ಲಿ ಹೇಳಿಕೆ ಸೃಷ್ಟಿಸಿ ಸುಳ್ಳು ಸುದ್ದಿ ಹರಡಲಾಗುತ್ತಿದೆ ಎಂದು ತಿಳಿದುಬಂದಿದೆ.

ವೈರಲ್ ಚೆಕ್, ಎಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಒಂದು ವೇಳೆ ರವೀಶ್‌ ಕುಮಾರ್‌ಹಾಗೆ ಹೇಳಿದ್ದರೆ ಮುಖ್ಯವಾಹಿನಿಯ ಮಾಧ್ಯಮಗಳಲ್ಲಿ ಅದು ವರದಿಯಾಗುತ್ತಿತ್ತು. ಆದರೆ ಮಾಧ್ಯಮಗಳಲ್ಲಿ ಈ ಬಗ್ಗೆ ಯಾವುದೇ ವರದಿಯಾಗಿಲ್ಲ. ಜೊತೆಗೆ ಆಲ್ಟ್‌ನ್ಯೂಸ್‌ ಸುದ್ದಿ ಸಂಸ್ಥೆಯು ಸ್ವತಃ ರವೀಶ್‌ ಕುಮಾರ್‌ ಅವರನ್ನೇ ಸಂಪರ್ಕಿಸಿ ಸ್ಪಷ್ಟನೆ ಪಡೆದಿದ್ದು ಅವರು, ‘ನಾನು ಈ ರೀತಿಯ ಹೇಳಿಕೆ ನೀಡಿಲ್ಲ. ಕೆಲವರು ನನ್ನ ಫೋಟೋ ಬಳಸಿಕೊಂಡು ಸುಳ್ಳುಸ್ದುದಿ ಹರಡುತ್ತಿದ್ದಾರೆ’ ಎಂದಿದ್ದಾರೆ.