ತೆಳ್ಳಗೆ ಬೆಳ್ಳಗಿರುವ ದೇಹ ನಮ್ಮದಾಗಬೇಕು ಎನ್ನವುದು ಈಗಿನ ಕಾಲ ಹುಡುಗಿಯರ ದೊಡ್ಡ ಕನಸು. ಇದನ್ನೇ ಬಂಡವಾಳವಾಗಿಸಿಕೊಂಡು ಅ ಹಲವಾರು ಕಂಪನಿಗಳು ಒಂದೇ ತಿಂಗಳಲ್ಲಿ ಬೊಜ್ಜು ಕರಗಿ ಸಣ್ಣಗಾಗುವಿರಿ ಎಂದು ಆಸೆ ತೋರಿಸಿ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡುತ್ತವೆ. ಆದರೆ ಸದ್ಯ ದೇಶದ ಪ್ರತಿಷ್ಠಿತ ಆಸ್ಪತ್ರೆಯಾದ ಏಮ್ಸ್‌ನಲ್ಲಿರುವ ವೈದ್ಯರೊಬ್ಬರು ಬೊಜ್ಜು ಕರಗಿಸಿ ಸಣ್ಣಗಾಗುವ ಮಾಂತ್ರಿಕ ಮಾತ್ರೆಯೊಂದನ್ನು ಕಂಡುಹಿಡಿದಿದ್ದಾರೆ ಎನ್ನುವ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ.

ಅದರಲ್ಲಿ ಡಯೆಟ್‌ ಮಾಡದೆ, ವ್ಯಾಯಾಮ ಮಾಡದೆ ದಿನಕ್ಕೆ 1 ಕೆ.ಜಿ ತೂಕ ಕಳೆದುಕೊಳ್ಳಬಹುದು ಎಂದು ಹೇಳಲಾಗಿದೆ. ಹಾಗೆಯೇ ಪ್ರತಿಷ್ಠಿತ ಏಮ್ಸ್‌ ಆಸ್ಪತ್ರೆಯ 33 ವರ್ಷದ ವೈದ್ಯ ರಮೇಶ್‌ ಭಾರ್ಗವ ಎಂಬುವವರು ಇದುವರೆಗೂ ಈ ಬಗ್ಗೆ ಹಲವಾರು ಸಂಶೋಧನೆ ಮಾಡಿ ಈಗ ಇಂಥದ್ದೊಂದು ಮ್ಯಾಜಿಕ್‌ ಮಾತ್ರೆಯನ್ನು ಕಂಡುಹಿಡಿದಿದ್ದಾರೆ ಎಂದು ಹೇಳಲಾಗಿದೆ.

ಆದರೆ ನಿಜಕ್ಕೂ ಏಮ್ಸ್‌ ಆಸ್ಪತ್ರೆ ವೈದ್ಯರು ದಿನಕ್ಕೆ 1 ಕೆ.ಜಿ ತೂಕ ಕಡಿಮೆ ಮಾಡುವ ಮಾತ್ರೆ ಕಂಡುಹಿಡಿದಿದ್ದಾರೆಯೇ ಎಂದು ಇಂಡಿಯಾ ಟುಡೇ ವಾಹಿನಿ ಪರಿಶೀಲಿಸಿದಾಗ ಇದೊಂದು ಸುಳ್ಳುಸುದ್ದಿ ಎಂದು ತಿಳಿದುಬಂದಿದೆ. ಏಮ್ಸ್‌ ಹೆಸರಿನಲ್ಲಿ ಸುಳ್ಳುಸುದ್ದಿ ಹರಡಲಾಗುತ್ತಿದೆ. ಹಾಗೆಯೇ ಏಮ್ಸ್‌ ಆಸ್ಪತ್ರೆಯಲ್ಲು ರಮೇಶ್‌ ಭಾರ್ಗವ ಎಂಬ ಹೆಸರಿನ ವೈದ್ಯರಿಲ್ಲ. ವೈರಲ್‌ ಸಂದೇಶದೊಂದಿಗಿರುವ ವ್ಯಕ್ತಿ ಡಾಕ್ಟರ್‌ ಅಲ್ಲ, ಅವರೊಬ್ಬ ಮಾಡೆಲ್‌. ಹಲವಾರು ಜಾಹೀರಾತುಗಳಲ್ಲಿ ನಟಿಸಿದ್ದಾರೆ.

- ವೈರಲ್ ಚೆಕ್