ಬೆಂಗಳೂರು(ಜು.27): ಅತ್ಯಾಚಾರ ಆರೋಪದಲ್ಲಿ ಜೈಲುಪಾಲಾಗಿರುವ ಸ್ವಯಂಘೋಷಿತ ದೇವಮಾನವ, ಗುರ್ಮಿತ್ ರಾಮ್ ರಹೀಮ್ ಸಿಂಗ್ ಬಳಸುತ್ತಿದ್ದ ಹೆಲಿಕಾಪ್ಟರ್ ಅನ್ನೇ ಪ್ರಧಾನಿ ಮೋದಿಯೂ ಬಳಿಸಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

2014ರ ಲೋಕಸಭೆ ಚುನಾವಣೆ ಪ್ರಚಾರದ ವೇಳೆ ಪ್ರಧಾನಿ ಮೋದಿ, ಗುರ್ಮಿತ್ ಬಳಸುತ್ತಿದ್ದ ಹೆಲಿಕಾಪ್ಟರ್ ಅನ್ನೇ ಬಳಿಸಿದ್ದಾರೆ ಎಂಬ ಸುದ್ದಿ ಫೇಸ್’ಬುಕ್ ಸೇರಿದಂತೆ ಇತರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಅತ್ಯಾಚಾರಿ ಬಳಸಿದ್ದ ಹೆಲಿಕಾಪ್ಟರ್ ಬಳಸಿರುವ ಮೋದಿ ‘ಬೇಟಿ ಬಚಾವೋ’ ಬೇಟಿ ಪಡಾವೋ’ ಕುರಿತು ಮಾತನಾಡುವುದು ಹಾಸ್ಯಾಸ್ಪದ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ.

ಆದರೆ ಈ ಕುರಿತಾದ ಸತ್ಯಾಸತ್ಯತೆ ಬೇರೆ ಇದ್ದು, ಅಸಲಿಗೆ ರಾಮ್ ರಹೀಮ್ ವಿಚಾರಣೆ ಸಂದರ್ಭದಲ್ಲಿ ಹಿಂಸಾಚಾರ ಭುಗಿಲೆದ್ದ ಪರಿಣಾಮ, ಹರಿಯಾಣ ಸರ್ಕಾರ ಆತನಿಗಾಗಿ ಖಾಸಗಿ ಸಂಸ್ಥೆಯೊಂದರಿಂದ AW139 ಹೆಸರಿನ ಹೆಲಿಕಾಪ್ಟರ್ ಬಾಡಿಗೆ ಪಡೆದಿತ್ತು.

ಅದರಂತೆ ಪ್ರಧಾನಿ ಮೋದಿ ಅವರ ಚುನಾವಣಾ ಪ್ರಚಾರಕ್ಕಾಗಿ ಬಿಜೆಪಿ ಕೂಡ ಬೇರೊಂದು ಖಾಸಗಿ ಸಂಸ್ಥೆಯಿಂದ AW139 ಹೆಸರಿನ ಹೆಲಿಕಾಫ್ಟರ್ ಬಾಡಿಗೆ ಪಡೆದಿತ್ತು. AW139 ನಿರ್ದಿಷ್ಟ ಹೆಲಿಕಾಪ್ಟರ್’ನ ನೋಂದಣಿ ಸಂಖ್ಯೆಯಾಗಿರದೇ, ಹೆಲಿಕಾಪ್ಟರ್ ಮಾಡೆಲ್ ಹೆಸರಾಗಿದೆ ಎಂದು ಎರಡೂ ಕಂಪನಿಗಳು ಸ್ಪಷ್ಟಪಡಿಸಿವೆ.