ಪ್ರಧಾನಿ ನರೇಂದ್ರ ಮೋದಿ ಜಿಡಿಪಿ ಬಗ್ಗೆ ಚರ್ಚಿಸುವ ಸಲುವಾಗಿ ಮಾಜಿ ಪ್ರಧಾನಿ ಮನಮೋಹನ ಸಿಂಗ್ ಅವರನ್ನು ಅವರ ಮನೆಗೇ ಹೋಗಿ ಭೇಟಿ ಮಾಡಿದ್ದಾರೆ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.ಇದು ನಿಜಾನಾ? ಇಲ್ಲಿದೆ ನೋಡಿ ವಾಸ್ತವ
ನವದೆಹಲಿ[ಜು.03]: ಪ್ರಧಾನಿ ನರೇಂದ್ರ ಮೋದಿ ಜಿಡಿಪಿ ಬಗ್ಗೆ ಚರ್ಚಿಸುವ ಸಲುವಾಗಿ ಮಾಜಿ ಪ್ರಧಾನಿ ಮನಮೋಹನ ಸಿಂಗ್ ಅವರನ್ನು ಅವರ ಮನೆಗೇ ಹೋಗಿ ಭೇಟಿ ಮಾಡಿದ್ದಾರೆ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ‘ಮೌನಿ ಪ್ರಧಾನಿ ಎಂದು ಜರಿದವರು ಈಗ ಅವರ ಬಳಿಯೇ ಸಲಹೆ ಕೇಳಲು ಹೋಗುತ್ತಿದ್ದಾರೆ. ಯಾರು ಏನೆಂದು ಈಗ ಅರ್ಥವಾಗುತ್ತಿದೆಯೇ’ ಎಂದು ಒಕ್ಕಣೆ ಬರೆದು ಈ ವಿಡಿಯೋವನ್ನು ಶೇರ್ ಮಾಡಲಾಗುತ್ತಿದೆ.
45 ಸೆಕೆಂಡ್‌ಗಳಿರುವ ವಿಡಿಯೋದಲ್ಲಿ ಪ್ರಧಾನಿ ಮೋದಿ ಭದ್ರತೆಯೊಂದಿಗೆ ಕಾರಿನಲ್ಲಿ ಬಂದು ಇಳಿಯುತ್ತಾರೆ. ಮನಮೋಹನ್ ಸಿಂಗ್ ಮತ್ತು ಅವರ ಪತ್ನಿ ಅವರನ್ನು ಸ್ವಾಗತಿಸಿ ಒಳಗೆ ಕರೆದೊಯ್ಯುತ್ತಾರೆ. ಇದನ್ನು ಪೋಸ್ಟ್ ಮಾಡಿ ‘ಸಿಂಗ್ ಈಸ್ ಕಿಂಗ್’ ಎಂದು ಬರೆಯಲಾಗುತ್ತಿದೆ. ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಕರ್ನಾಟಕ ರಾಜ್ಯ ಕಾಂಗ್ರೆಸ್ ವಕ್ತಾರೆ ಮತ್ತು ಮಹಿಳಾ ಕಾಂಗ್ರೆಸ್ ಸೋಷಿಯಲ್ ಮೀಡಿಯಾ ಕೋ-ಆರ್ಡಿನೇಟರ್ ಲಾವಣ್ಯಾ ಬಲ್ಲಾಳ್ ಈ ವಿಡಿಯೋವನ್ನು ಟ್ವೀಟರ್‌ನಲ್ಲಿಪೋಸ್ಟ್ ಮಾಡಿ, ‘ಸಿಂಗ್ ಆಲ್‌ವೇಸ್ ಜಂಟಲ್ ಮ್ಯಾನ್’ ಎಂದು ಬರೆದುಕೊಂಡಿದ್ದಾರೆ.
ಆದರೆ ನಿಜಕ್ಕೂ ನರೇಂದ್ರ ಮೋದಿ ಇತ್ತೀಚೆಗೆ ಸಿಂಗ್ ಅವರನ್ನು ಭೇಟಿಯಾಗಿ ಜಿಡಿಪಿ ಬಗ್ಗೆ ಚರ್ಚೆ ಮಾಡಿದ್ದರೇ ಎಂದು ಪರಿಶೀಲಿಸಿದಾಗ, ಇದು 2014ರ ವಿಡಿಯೋ ಎಂದು ತಿಳಿದುಬಂದಿದೆ. 2014ರಲ್ಲಿ ಮೋದಿ ಪ್ರಧಾನಿಯಾದ ಬಳಿಕ ಸೌಜನ್ಯಕ್ಕಾಗಿ ಮೋತಿಲಾಲ್ ನೆಹರು ಪ್ಯಾಲೇಸ್‌ನಲ್ಲಿ ಭೇಟಿಯಾಗಿದ್ದರು. ಆ ವಿಡಿಯೋವನ್ನೇ ಈಗ ತಪ್ಪಾಗಿ ಅರ್ಥೈಸಲಾಗುತ್ತಿದೆ.
