ಮುಂಬೈ[ಸೆ.11]: ಭಾರತದ ಮಹತ್ವಾಕಾಂಕ್ಷಿ ಚಂದ್ರಯಾನ-2 ನಿರೀಕ್ಷಿತ ಫಲಿತಾಂಶ ನೀಡಲಿಲ್ಲ. ಇದರ ಬೆನ್ನಲ್ಲೇ ಚಂದ್ರಯಾನ-3ಗೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಸಿದ್ಧವಾಗುತ್ತಿದೆ. ಇಸ್ರೋನ ಈ ಯೋಜನೆಗೆ ಬಾಲಿವುಡ್‌ ನಟ ಅಕ್ಷಯ್‌ ಕುಮಾರ್‌ ಭಾರೀ ನೆರವು ನೀಡುತ್ತಿದ್ದಾರೆ ಎನ್ನುವ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ವೈರಲ್ ಚೆಕ್, ಎಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವೈರಲ್‌ ಆಗಿರುವ ಸಂದೇಶದಲ್ಲಿ ಹೀಗಿದೆ; ‘ಚಂದ್ರಯಾನ-2ನಲ್ಲಿ ಭಾರತಕ್ಕೆ ಕೊಂಚ ಹಿನ್ನಡೆಯಾಗಿದೆ. ಆದರೆ ಚಂದ್ರಯಾನ-3ಗೆ ಇಸ್ರೋ ಸಿದ್ಧವಾಗಿದೆ. ಈ ಸಂದರ್ಭದಲ್ಲಿ ನಟ ಅಕ್ಷಯ್‌ ಕುಮಾರ ಇತ್ತೀಚೆಗೆ ತಾವು ಅಭಿನಯಿಸಿದ್ದ ‘ಮಿಷನ್‌ ಮಂಗಳ್‌’ನಲ್ಲಿ ತಮಗೆ ಸಿಕ್ಕ ಅಷ್ಟೂಸಂಭಾವನೆಯನ್ನು ಈ ಯೋಜನೆಗಾಗಿ ಮೀಸಲಿಡುವುದಾಗಿ ಘೋಷಿಸಿದ್ದಾರೆ. ಎಲ್ಲಿ ಸಲ್ಮಾನ್‌, ಅಮೀರ್‌, ಶಾರುಖ್‌ ಖಾನ್‌. ಇವರೆಲ್ಲಾ ದ್ರೋಹಿಗಳು. ಅವರು ಪಾಕಿಸ್ತಾನಕ್ಕೆ ಹಣ ನೀಡುತ್ತಾರೆ. ನಿಮಗೇಕೆ ಇದು ಅರ್ಥವಾಗುತ್ತಿಲ್ಲ? ಈ ಪೋಸ್ಟ್‌ ಇಷ್ಟವಾದರೆ ರೀಟ್ವಿಟ್‌ ಮಾಡಿ’ ಎಂದು ಬರೆಯಲಾಗಿದೆ.

ಬಳಿಕ ಇದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ. ಆದರೆ ನಿಜಕ್ಕೂ ‘ಮಿಷನ್‌ ಮಂಗಳ್‌’ ಚಿತ್ರದ ಅಷ್ಟೂಸಂಭಾವನೆಯನ್ನು ಅಕ್ಷಯ್‌ ಕುಮಾರ್‌ ಚಂದ್ರಯಾನ-3ಗೆ ಮೀಸಲಿಡುತ್ತಿದ್ದಾರೆಯೇ ಎಂದು ಪರಿಶೀಲಿಸಿದಾಗ ಇದೊಂದು ಸುಳ್ಳು ಸುದ್ದಿ ಎಂದು ಸ್ಪಷ್ಟವಾಗಿದೆ. ಸುದ್ದಿಸಂಸ್ಥೆಯೊಂದು ನಟ ಅಕ್ಷಯ್‌ ಕುಮಾರ್‌ ಅವರ ನಿಕಟವರ್ತಿಗಳ ಬಳಿ ಸ್ಪಷ್ಟನೆ ಪಡೆದಿದ್ದು, ಅವರೂ ಇದು ಸುದ್ದಿ ಸುಳ್ಳೆಂದು ಸ್ಪಷ್ಟಪಡಿಸಿದ್ದಾರೆ.

ಹಾಗೆಯೇ ಮಿಷನ್‌ ಮಂಗಳ್‌ ನಿರ್ಮಾಪಕ ಮತ್ತು ನಿದೇರ್ಶಕ ಆರ್‌.ಬಾಲ್ಕಿ ಅವರನ್ನು ಸಂಪರ್ಕಿಸಿದಾಗ ಅವರು, ‘ಇಂಥ ಸುಳ್ಳು ಸುದ್ದಿಗಳು ಎಲ್ಲಿ ಹುಟ್ಟುತ್ತವೆ ನನಗಂತೂ ತಿಳಿಯದು. ಅಕ್ಷಯ್‌ ಕುಮಾರ್‌ ಈ ಬಗ್ಗೆ ಘೋಷಿಸಿದ್ದು ನಾನೆಲ್ಲೂ ಘೋಷಿಸಿಲ್ಲ. ಇದೊಂದು ಸುಳ್ಳು ಸುದ್ದಿ’ ಎಂದಿದ್ದಾರೆ.