ಸರ್ಕಾರದಿಂದ ಮಂಜೂರಾದ ಮನೆಯನ್ನು ಕಟ್ಟಿಸಿಕೊಳ್ಳಲು ಸಾಧ್ಯವೇ ಇಲ್ಲ ಎಂಬಂತಹ ಪರಿಸ್ಥಿತಿ ಇದ್ದಾಗ ರಾಜ್ಯದ ಯಾವುದ್ಯಾವುದೋ ಮೂಲೆಯಿಂದ ಹರಿದುಬಂದ ನೆರವು ತಾಲೂಕಿನ ಗಾಜನೂರಿನ ವೆಳ್ಳಿಯಮ್ಮನ ಮನೆಯನ್ನು ಕಟ್ಟಿ ನಿಲ್ಲಿಸಿತು. ಶುಕ್ರವಾರ ‘ವೆಳ್ಳಿಯಮ್ಮ ನಿಲಯ’ದ ಗೃಹ ಪ್ರವೇಶವನ್ನು ಗಾಜನೂರು ಗ್ರಾಮಸ್ಥರೇ ನಿಂತು ನೆರವೇರಿಸಿದರು.

ಶಿವಮೊಗ್ಗ(ನ.18) ಒಂದು ಸಾಮಾಜಿಕ ಪ್ರಯೋಗ ಯಶಸ್ವಿಯಾದ ಸಂತಸ ಎಲ್ಲರ ಮುಖದಲ್ಲಿತ್ತು. ಮನೆ ಕುಸಿದು ಬಿದ್ದು, ಸರ್ಕಾರದಿಂದ ಮಂಜೂರಾದ ಮನೆಯನ್ನು ಕಟ್ಟಿಸಿಕೊಳ್ಳಲು ಸಾಧ್ಯವೇ ಇಲ್ಲ ಎಂಬಂತಹ ಪರಿಸ್ಥಿತಿ ಇದ್ದಾಗ ರಾಜ್ಯದ ಯಾವುದ್ಯಾವುದೋ ಮೂಲೆಯಿಂದ ಹರಿದುಬಂದ ನೆರವು ತಾಲೂಕಿನ ಗಾಜನೂರಿನ ವೆಳ್ಳಿಯಮ್ಮನ ಮನೆಯನ್ನು ಕಟ್ಟಿ ನಿಲ್ಲಿಸಿತು. ಶುಕ್ರವಾರ ‘ವೆಳ್ಳಿಯಮ್ಮ ನಿಲಯ’ದ ಗೃಹ ಪ್ರವೇಶವನ್ನು ಗಾಜನೂರು ಗ್ರಾಮಸ್ಥರೇ ನಿಂತು ನೆರವೇರಿಸಿದರು. ಅವರೇ ಅಡುಗೆಯವರು, ಅವರೇ ಪೂಜೆ ಮಾಡುವವರು, ಸ್ವಚ್ಛ ಮಾಡಿದವರೆಲ್ಲರೂ ಅವರೇ ಆಗಿದ್ದರು.

ಸ್ಟೌ ಮೇಲಿಟ್ಟು ಕಾಯಿಸಿದ ಹಾಲು ಉಕ್ಕುತ್ತಿದ್ದಂತೆ ಎಲ್ಲರ ಶ್ರಮ ಸಾರ್ಥಕವಾಗಿತ್ತು. ವೆಳ್ಳಿಯಮ್ಮ ಹಾಗೂ ಅವರ ಮೊಮ್ಮಗ ಮಾತ್ರ ವಾಸಿಸುತ್ತಿದ್ದ ಹಳೆಯ ಮನೆ ಕೆಲ ತಿಂಗಳ ಹಿಂದೆ ಕುಸಿದು ಬಿದ್ದಿತ್ತು. ಅವರಿಗೆ 2015-16ನೇ ಸಾಲಿನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಗ್ರಾಮೀಣ ವಸತಿ ಯೋಜನೆ ಅಡಿ ಮಂಜೂರಾಗಿದ್ದ ಮನೆಯನ್ನು ಕಟ್ಟಿಕೊಳ್ಳಬೇಕೆಂದರೆ ಕೈಯಲ್ಲಿ ಒಂದು ಪೈಸೆ ಸಹ ಇರಲಿಲ್ಲ. ಅಡಿಪಾಯ ಹಾಕದೇ ಮೊದಲ ಕಂತನ್ನು ಇಲಾಖೆ ಬಿಡುಗಡೆ ಮಾಡುವಂತಿರಲಿಲ್ಲ. ಮನೆ ವಾಪಸ್ ಹೋಗುವ ಪ್ರಸಂಗ ಬಂದೊದಗಿತ್ತು.

ಅದೇ ಗ್ರಾಮದ ಡಾ. ಕಿರಣ್ ಗಾಜನೂರು ಅವರು ವೆಳ್ಳಿಯಮ್ಮನಿಗೆ ನೆರವಾಗುವ ಉದ್ದೇಶದಿಂದ ಫೇಸ್'ಬುಕ್‌ನಲ್ಲಿ ಪರಿಸ್ಥಿತಿ ವಿವರಿಸಿ, ಅಡಿಪಾಯಕ್ಕೆ ಬೇಕಾಗುವ ಬಡ್ಡಿರಹಿತವಾಗಿ ಹಣವನ್ನು ನೀಡಿದರೆ ಮನೆ ಪೂರ್ಣವಾದ ನಂತರ ವಾಪಸ್ ನೀಡಲಾಗುವುದು. ಆದರೆ ಯಾರೂ ಸಹ 5000 ರು.ಕ್ಕಿಂತ ಹೆಚ್ಚು ನೆರವು ಕೊಡುವಂತಿಲ್ಲ ಎಂದು ಕೋರಿಕೆ ಮಂಡಿಸಿದರು. ಅವರ ಕೋರಿಕೆಗೆ ರಾಜ್ಯದ ಹಲವರಿಂದ ಸ್ಪಂದನೆ ಬಂದಿತ್ತು.

ಮುಖ್ಯಮಂತ್ರಿಯವರ ಮಾಧ್ಯಮ ಸಲಹೆಗಾರ ದಿನೇಶ್ ಅಮೀನಮಟ್ಟು, ಕನ್ನಡದ ಖ್ಯಾತ ಚಲನಚಿತ್ರ ಹಾಗೂ ಕಿರುತೆರೆ ನಿರ್ದೇಶಕರು, ‘ಕನ್ನಡಪ್ರಭ’ ಅಂಕಣಕಾರ ರಾಗಿದ್ದ ಲೇಖಕರೊಬ್ಬರು, (ಇವರಿಬ್ಬರೂ ಹೆಸರು ಪ್ರಕಟಿಸದಂತೆ ಕೋರಿದ್ದಾರೆ), ಕಲಾವಿದೆ ಸಂಜ್ಯೋತಿ, ಮಮತಾ ಅರಸಿಕೆರೆ, ಸಾಮಾಜಿಕ ಹೋರಾಟಗಾರರಾದ ಕೆ.ಎಸ್. ವಿಮಲಾ, ಕೆ.ನೀಲಾ, ಲೇಖಕರಾದ ಕಲೀ ಮುಲ್ಲಾ, ಚಲಂ ಹಾಡ್ಲಹಳ್ಳಿ,ವಿಕಾಸ್ ಸೊಪ್ಪಿನ, ಮೇನಕಾ ಸುರೇಶ್, ಸುನೀಲ್ ಕುಮಾರ್, ಶೋಭಾ ಗಂಗಾಧರ್, ವಕೀಲ ಪ್ರಾಣೇಶ್ ಭರತನೂರು ಸೇರಿದಂತೆ ತಲಾ 16 ಮಂದಿ ಗರಿಷ್ಠ 5 ಸಾವಿರದಂತೆ ಒಟ್ಟು 80,000ವನ್ನು ವೆಳ್ಳಿಯಮ್ಮನ ಮನೆಯ ಅಡಿಪಾಯದ ಖರ್ಚಿಗೆಂದು ಕೊಟ್ಟರು. ಈ ಹಣದಲ್ಲಿ ಮನೆ ನಿರ್ಮಾಣ ಆರಂಭವಾಯಿತು.

ಅಡಿಪಾಯ ಮುಗಿದ ನಂತರ ಮೂರು ಕಂತಿನಲ್ಲಿ ತಲಾ 37,000 ಸರ್ಕಾರದಿಂದ ಬಿಡುಗಡೆಯೂ ಆಯಿತು. ಗ್ರಾಪಂ ಸದಸ್ಯ ನಾಗರಾಜ್ ಬಡ್ಡಿರಹಿತ ಸಾಲವಾಗಿ 50,000 ನೀಡಿದರು. ಗಾಜನೂರು ಗ್ರಾಮ ಪಂಚಾಯಿತಿ ಸದಸ್ಯೆ ರತ್ನಮ್ಮ ರಾಜಣ್ಣ, ಪಿಡಿಒ ಕೃಷ್ಣಮೂರ್ತಿ, ಕಂಪ್ಯೂಟರ್ ಆಪರೇಟರ್ ಸಚಿನ್‌'ಕುಮಾರ್ ಒಂದಿಷ್ಟೂ ಲೋಪಕ್ಕೆ ಅವಕಾಶ ಕೊಡದೆ ವೆಳ್ಳಿಯಮ್ಮನ ಮನೆಯ ದಾಖಲೆ ಗಳನ್ನು ಕಾಲಕಾಲಕ್ಕೆ ಸಿದ್ಧಪಡಿಸಿ ಅನುದಾನ ಬಿಡುಗಡೆಯಾಗಲು ನೆರವಾದರು. ಲೈನ್‌'ಮನ್ ಮಲ್ಲಿಕಾರ್ಜುನ್ ವಿದ್ಯುತ್ ಸಂಪರ್ಕ ಕಲ್ಪಿಸಿದರು. ಗುತ್ತಿಗೆದಾರರಾದ ಕರಿಬಸವಯ್ಯಹಾಗೂ ಮುರಳಿ ಅತ್ಯಂತ ಕಡಿಮೆ ವೆಚ್ಚದಲ್ಲಿ ವಿದ್ಯುದೀಕರಣ ಕೆಲಸ ಮಾಡಿಕೊಟ್ಟರು.

ಇವರೆಲ್ಲರ ನೆರವಿನಿಂದ ಮೂರು ತಿಂಗಳಲ್ಲಿ ಮನೆ ಸಿದ್ಧವಾಯಿತು. ಈಗ ಕೊನೆಯ ಕಂತಿನಲ್ಲಿ ವೆಳ್ಳಿಯಮ್ಮನಿಗೆ 80,000 ರು. ಬರಲಿದೆ. ಗೃಹ ಪ್ರವೇಶಕ್ಕೆಂದು ಖರ್ಚಾದ ಒಟ್ಟು ಮೊತ್ತ 2,60,000 ರು. ಸರ್ಕಾರದಿಂದ ಬಂದಿರುವ ಹಣವನ್ನೆಲ್ಲಾ ಸೇರಿ ಹೆಚ್ಚುವರಿಗೆ 20,000 ವೆಚ್ಚ ವೆಳ್ಳಿಯಮ್ಮನ ಮೇಲಿದೆ. ಅದನ್ನೀಗ ವೆಳ್ಳಿಯಮ್ಮ ಯೋಚಿಸುತ್ತಿಲ್ಲ. ಮೂರು ತಿಂಗಳ ಹಿಂದೆ ಮನೆ ಬಿದ್ದಾಗ ಬೀದಿಯಲ್ಲಿ ಬಿದ್ದಿದ್ದ ಅವರು ಈಗ ಮೊಮ್ಮಗನೊಂದಿಗೆ ಹೊಸ ಮನೆಯಲ್ಲಿ ವಾಸಿಸುವ ಖುಷಿಯಲ್ಲಿದ್ದಾರೆ.

ವರದಿ : ಹೊನ್ನಾಳಿ ಚಂದ್ರಶೇಖರ್‌, ಕನ್ನಡಪ್ರಭ