ವಾಷಿಂಗ್ಟನ್‌[ನ.18]: ವಿಶ್ವದ ಅತಿ ಜನಪ್ರಿಯ ಆನ್‌ಲೈನ್‌ ಸಾಮಾಜಿಕ ಜಾಲತಾಣಗಳ ಪೈಕಿ ಒಂದಾದ ಫೇಸ್‌ಬುಕ್‌ನ ಅಧ್ಯಕ್ಷ ಸ್ಥಾನಕ್ಕೆ ಅದರ ಸಂಸ್ಥಾಪಕ ಮಾರ್ಕ್ ಜುಕರ್‌ಬರ್ಗ್‌ ರಾಜೀನಾಮೆ ನೀಡಬೇಕು ಎಂದು ಕಂಪನಿಯ ಷೇರುದಾರರು ಬಹಿರಂಗವಾಗಿಯೇ ಆಗ್ರಹ ಮಾಡಿದ್ದಾರೆ.

ಕಂಪನಿ ವಿರುದ್ಧ ಕೇಳಿಬಂದ ಅಪಸ್ವರಗಳನ್ನು ಮಟ್ಟಹಾಕಲು, ಜುಕರ್‌ಬರ್ಗ್‌ ಸಾರ್ವಜನಿಕ ಸಂಪರ್ಕ ಏಜೆನ್ಸಿಗಳ ನೆರವು ಪಡೆದಿದ್ದರು ಎಂಬ ಇತ್ತೀಚಿನ ಮಾಧ್ಯಮಗಳ ವರದಿಗಳನ್ನು ಗಂಭೀರವಾಗಿ ಪರಿಗಣಿಸಿರುವ ಕಂಪನಿಯ ದೊಡ್ಡ ಷೇರುದಾರರು, ಕಂಪನಿಯ ಅಧ್ಯಕ್ಷ ಹುದ್ದೆಯಿಂದ ಕೆಳಗಿಳಿಯಿರಿ. ಸಿಇಒ ಹುದ್ದೆ ಮತ್ತು ಅಧ್ಯಕ್ಷ ಹುದ್ದೆ ಎರಡನ್ನೂ ಬೇರೆ ಬೇರೆ ವ್ಯಕ್ತಿಗಳು ನಿರ್ವಹಿಸಿದರೆ ಕಂಪನಿಯಲ್ಲಿ ಹೆಚ್ಚು ಪಾರದರ್ಶಕತೆ ಸಾಧ್ಯ ಎಂದು ಹೇಳಿದ್ದಾರೆ. ಇನ್ನು ಫೇಸ್‌ಬುಕ್‌ನಲ್ಲಿ ಶೇ.8.5ರಷ್ಟುಷೇರು ಪಾಲು ಹೊಂದಿರುವ ಟ್ರಿಲಿಯಂ ಅಸೆಟ್‌ ಮ್ಯಾನೇಜ್‌ಮೆಂಟ್‌ ಕಂಪನಿಯ ಉಪಾಧ್ಯಕ್ಷ ಜೊನಾಸ್‌ ಕ್ರೋನ್‌ ಅವರಂತೂ ನೇರವಾಗಿ ಜುಕರ್‌ಬರ್ಗ್‌ಗೆ ಕರೆ ಮಾಡಿ ರಾಜೀನಾಮೆಗೆ ಆಗ್ರಹಿಸಿದ್ದಾರೆ.

ಫೇಸ್‌ಬುಕ್‌ ಬಳಕೆದಾರರ ಮಾಹಿತಿ ಸೋರಿಕೆ, ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ರಷ್ಯಾ ಹಸ್ತಕ್ಷೇಪ ತಡೆಯಲು ವಿಫಲವಾಗಿದ್ದಕ್ಕೆ ಕೇಳಿಬಂದ ಆರೋಪಗಳನ್ನು ಮಟ್ಟಹಾಕಲು ಜುಕರ್‌ಬರ್ಗ್‌ ನಾನಾ ಅಡ್ಡದಾರಿ ಬಳಸಿದ್ದರು ಎಂದು ಇತ್ತೀಚೆಗೆ ನ್ಯೂಯಾರ್ಕ ಟೈಮ್ಸ್‌ ವರದಿ ಮಾಡಿತ್ತು.