ಪ್ಯಾರಿಸ್[ಮೇ.17]: ಸಾಮಾಜಿಕ ಸ್ವಾಸ್ಥ್ಯ ಕೆಡಿಸುವ ಕೋಟ್ಯಂತರ ನಕಲಿ ಖಾತೆಗಳು ಸಾಮಾಜಿಕ ಜಾಲತಾಣಗಳಲ್ಲಿ ನಿರಂತರ ಕಾರ್ಯಾಚರಿಸುತ್ತಿವೆ. ಫೇಸ್‌'ಬುಕ್ 2018ರ ಮೊದಲ ಮೂರು ತಿಂಗಳಲ್ಲಿ ಇಂಥ 58.3 ಕೋಟಿ ನಕಲಿ ಖಾತೆಗಳನ್ನು ಗುರುತಿಸಿ ರದ್ದುಗೊಳಿಸಿದೆ. 

ಸಮುದಾಯದ ಗುಣಮಟ್ಟಗಳಿಗೆ ವಿರುದ್ಧವಾಗಿ ಲೈಂಗಿಕ ಅಥವಾ ಹಿಂಸಾತ್ಮಕ ಚಿತ್ರಗಳು, ಭಯೋತ್ಪಾದನಾ ಅಪಪ್ರಚಾರ ಅಥವಾ ದ್ವೇಷ ಭಾಷಣದಂಥ ವಿಷಯಗಳನ್ನು ಪ್ರಚಾರ ಮಾಡುವ ಖಾತೆಗಳನ್ನು ರದ್ದುಗೊಳಿಸಲಾಗಿದೆ. ಕೇಂಬ್ರಿಜ್ ಅನಾಲಿಟಿಕಾ ದತ್ತಾಂಶಗಳ ಖಾಸಗಿತನ ಹಗರಣದ ಬಳಿಕ ಪ್ರತಿ ದಿನ ಲಕ್ಷಾಂತರ ನಕಲಿ ಖಾತೆ ತೆರೆಯುವ ಪ್ರಯತ್ನಗಳನ್ನು ತಡೆಯಲಾಗಿದೆ ಎಂದು ಫೇಸ್‌ಬುಕ್ ಹೇಳಿದೆ.

ಇದೇ ವೇಳೆ 83.7 ಕೋಟಿ ಪೋಸ್ಟ್‌ಗಳನ್ನು ಸ್ಪಾಮ್ ಎಂದು ಗುರುತಿಸಿ ಅವುಗಳನ್ನು ತೆಗೆಯಲಾಗಿತ್ತು. ಲೈಂಗಿಕ ಅಥವಾ ಹಿಂಸಾತ್ಮಕ ಚಿತ್ರಗಳು, ದ್ವೇಷ ಭಾಷಣದ 3 ಕೋಟಿ ಪೋಸ್ಟ್‌ಗಳಿಗೆ ಎಚ್ಚರಿಕೆಯನ್ನು ನೀಡಲಾಗಿತ್ತು.