ಶಿವಮೊಗ್ಗ(ನ.14): ಫೇಸ್​ಬುಕ್​ನಲ್ಲಿ ಪರಿಚಯ, ಪ್ರೀತಿ, ಪ್ರೇಮ, ಪ್ರಣಯ ಯುವತಿಯೊಬ್ಬಳ ಜೀವಕ್ಕೇ ಎರವಾಗಿದೆ. ಶಿವಮೊಗ್ಗದ ರಂಜಿತಾ ಎಂಬ ಯುವತಿ, ಫೇಸ್​'ಬುಕ್ ಪ್ರೀತಿಗೆ ಬಲಿಯಾಗಿದ್ದಾಳೆ.

ಅಪ್ಪ ಅಮ್ಮನ ಪ್ರೀತಿಯ ಏಕೈಕ ಮಗಳಾಗಿದ್ದ ರಂಜಿತಾಗೆ, ಫೇ'ಸ್‍ಬುಕ್‍ನ'ಲ್ಲಿ ಸಿದ್ಧಾರ್ಥ ಎಂಬ ಯುವಕನ ಜೊತೆ ಪರಿಚಯವಾಗಿ ಕ್ರಮೇಣ ಇದು ಪ್ರೀತಿಗೆ ತಿರುಗಿತ್ತು. ಪ್ರೀತಿಯ ನಾಟಕವಾಡಿದ ಸಿದ್ದಾರ್ಥ, ಬಲವಂತವಾಗಿ ರಂಜಿತಾಳ ನಗ್ನ ಚಿತ್ರ ತೆಗೆದು, ಅದನ್ನು ತನ್ನ ಸಂಬಂಧಿ ವಿನಯ್​ ಜೊತೆ ಶೇರ್ ಮಾಡಿಕೊಂಡಿದ್ದ. ಆದರೆ ವಿನಯ್ ಇದನ್ನಿಟ್ಟುಕೊಂಡು ರಂಜಿತಾಳನ್ನು ಬ್ಲಾಕ್'​ಮೇಲ್ ಮಾಡಲು ಶುರು ಮಾಡಿದ.  ನಾನು ಹೇಳಿದಂತೆ ಕೇಳದಿದ್ದರೆ ನಗ್ನ ಚಿತ್ರಗಳನ್ನ ಫೇಸ್‍'ಬುಕ್‍ಗೆ ಅಪ್‍'ಲೋಡ್ ಮಾಡುತ್ತೇನೆ ಎಂದು ಬೆದರಿಸಿದ್ದ. ಹೀಗಾಗಿ ರಂಜಿತಾ, ಫೋಟೋ ಡಿಲೀಟ್ ಮಾಡುವಂತೆ ವಿನಯ್​ನನ್ನು ಅಂಗಲಾಚಿದ್ದಳು.

ವಿನಯ್ ಮೊಬೈಲ್​'ನಲ್ಲಿದ್ದ ಫೋಟೋ ಡಿಲೀಟ್ ಮಾಡಿಸುವುದಾಗಿ ಹೇಳಿದ ವಿನಯ್ ಗೆಳೆಯ ನಾಗರಾಜ್, ರಂಜಿತಾಳನ್ನು ಧರ್ಮಸ್ಥಳದಲ್ಲಿ ಮದುವೆಯೂ ಆದ. ಆದರೆ, ಧರ್ಮಸ್ಥಳದಲ್ಲಿ ತಾಳಿ ಕಟ್ಟಿದ  ಬಳಿಕ ಅತ್ಯಾಚಾರ ಎಸಗಿ ಕೈಕೊಟ್ಟ. ಇದೆಲ್ಲದರ ಪರಿಣಾಮ, ರಂಜಿತಾ ಗರ್ಭಿಣಿಯಾದಳು. ಇಷ್ಟಾದರೂ ರಂಜಿತಾ ಮಾತ್ರ ಮಗುವಿಗೆ ಜನ್ಮ ನೀಡುವುದಾಗಿ ಹಠ ಹಿಡಿದಿದ್ದು, ಉಡುಪಿಯ ಮಣಿಪಾಲ್ ಆಸ್ಪತ್ರೆಯಲ್ಲಿ ಹೆರಿಗೆಯೂ ಆಯ್ತು. ಆದರೆ ಆರೋಗ್ಯ ಹದಗೆಟ್ಟು, ರಂಜಿತಾ ಮೃತಪಟ್ಟಿದ್ದಾಳೆ.

ಈ ವಿಚಾರವಾಗಿ ರಂಜಿತಾ ಪೋಷಕರು ದೂರು ದಾಖಲಿಸಿದ್ದು, ಫೇಸ್​ಬುಕ್​ನಲ್ಲಿ ಪರಿಚಯ ಮಾಡಿಕೊಂಡು ಮೋಸ ಮಾಡಿದ ಸಿದ್ಧಾರ್ಥ, ಆತನ ಸಂಬಂಧಿ ವಿನಯ್, ವಿನಯ್​ನ ಗೆಳೆಯ ನಾಗರಾಜ್ ಹಾಗೂ ನಾಗರಾಜ್​ಗೆ ಸಹಕಾರ ನೀಡಿದ ಕಿರಣ್ ಎಂಬುವವರನ್ನು ಬಂಧಿಸಲಾಗಿದೆ. ಆದರೆ ಈಗ ರಂಜಿತಾಳ ಪುಟ್ಟ ಕಂದ ಮಾತ್ರ ಅನಾಥವಾಗಿದೆ.