Asianet Suvarna News Asianet Suvarna News

ಫೆಬ್ರವರಿಯಿಂದ ನಿಮ್ಮ ಮುಖವೇ ವಿಮಾನದ ಬೋರ್ಡಿಂಗ್‌ ಪಾಸ್‌

ಬೆಂಗಳೂರು, ದೆಹಲಿ, ಮುಂಬೈ, ಹೈದರಾಬಾದ್‌ನಂತಹ ಸಾರ್ವಜನಿಕ- ಖಾಸಗಿ ಸಹಭಾಗಿತ್ವದ ಹಾಗೂ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ಅಭಿವೃದ್ಧಿಪಡಿಸಿರುವ ವಾರಾಣಸಿ, ವಿಜಯವಾಡ, ಪುಣೆ, ಕೋಲ್ಕತಾ ವಿಮಾನ ನಿಲ್ದಾಣಗಳಲ್ಲಿ ಫೆಬ್ರವರಿಯಿಂದ ಪ್ರಯಾಣಿಕರ ಮುಖವೇ ಬೋರ್ಡಿಂಗ್ ಪಾಸ್ ಆಗಲಿದೆ.

Face could be your boarding pass in airports
Author
Bengaluru, First Published Oct 5, 2018, 10:03 AM IST

ನವದೆಹಲಿ: ಬೆಂಗಳೂರು ಸೇರಿದಂತೆ ದೇಶದ ಆಯ್ದ ವಿಮಾನ ನಿಲ್ದಾಣಗಳಲ್ಲಿ ದೇಶದೊಳಗಿನ ಪ್ರಯಾಣಕ್ಕೆ ಬೋರ್ಡಿಂಗ್‌ ಪಾಸ್‌ ಹಾಗೂ ಗುರುತಿನ ಪುರಾವೆಗೆ ಮುಂದಿನ ಫೆಬ್ರವರಿಯಿಂದ ಮುಕ್ತಿ ದೊರೆಯುವ ಸಾಧ್ಯತೆ ಇದೆ. ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರಿಗೆ ಕಾಗದರಹಿತ ಪ್ರವೇಶ ಕಲ್ಪಿಸಲು ‘ಡಿಜಿಯಾತ್ರಾ’ ಯೋಜನೆಯಡಿ ಕೇಂದ್ರ ಸರ್ಕಾರ ಮುಖಚಹರೆಯನ್ನೇ ಬಯೋಮೆಟ್ರಿಕ್‌ ಗುರುತಾಗಿ ಬಳಸಿಕೊಳ್ಳಲು ಉದ್ದೇಶಿಸಿದೆ.

ಬೆಂಗಳೂರು, ದೆಹಲಿ, ಮುಂಬೈ, ಹೈದರಾಬಾದ್‌ನಂತಹ ಸಾರ್ವಜನಿಕ- ಖಾಸಗಿ ಸಹಭಾಗಿತ್ವದ ಹಾಗೂ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ಅಭಿವೃದ್ಧಿಪಡಿಸಿರುವ ವಾರಾಣಸಿ, ವಿಜಯವಾಡ, ಪುಣೆ, ಕೋಲ್ಕತಾ ವಿಮಾನ ನಿಲ್ದಾಣಗಳಲ್ಲಿ ಫೆಬ್ರವರಿಯಿಂದ ಈ ಸೇವೆ ಲಭ್ಯವಾಗುವ ನಿರೀಕ್ಷೆ ಇದೆ. ನಂತರ ದೇಶಾದ್ಯಂತ ಇದನ್ನು ವಿಸ್ತರಿಸಲಾಗುತ್ತದೆ. ಹಾಗಂತ ಇದು ಕಡ್ಡಾಯವೇನಲ್ಲ. ಆಸಕ್ತ ಪ್ರಯಾಣಿಕರು ಬಳಸಿಕೊಳ್ಳಬಹುದು.

ಬೆಂಗಳೂರು ಏರ್‌ಪೋರ್ಟಲ್ಲಿ ಹೊಸ ವ್ಯವಸ್ಥೆ

ಬೋರ್ಡಿಂಗ್‌ ಪಾಸ್‌, ಗುರುತಿನ ಪುರಾವೆ ಒಯ್ಯುವ ರಗಳೆ ಬೇಡ ಎನ್ನುವ ಪ್ರಯಾಣಿಕರು ವಿಮಾನಯಾನ ಸಚಿವಾಲಯದ ವೆಬ್‌ಸೈಟ್‌ನಲ್ಲಿ ಗುರುತಿನ ದಾಖಲೆ ನೀಡಿ ನೋಂದಾಯಿಸಿಕೊಳ್ಳಬೇಕು. ಆನಂತರ ಮೊದಲ ಬಾರಿಗೆ ವಿಮಾನ ನಿಲ್ದಾಣಕ್ಕೆ ತೆರಳಿದಾಗ ಮುಖಚಹರೆ ಸಂಗ್ರಹಿಸಲಾಗುತ್ತದೆ. ಅದಾದ ಬಳಿಕ ಪ್ರಯಾಣ ಮಾಡಿದರೆ, ಪ್ರಯಾಣಿಕರ ಮುಖವೇ ಗುರುತಿನ ಪುರಾವೆ ಹಾಗೂ ಟಿಕೆಟ್‌ ಆಗಿರುತ್ತದೆ. ಪ್ರಯಾಣಿಕರ ಮುಖಚಹರೆಯನ್ನು ಅತ್ಯಂತ ಸುರಕ್ಷಿತ ವಿಧಾನದಲ್ಲಿ ಸಂಗ್ರಹಿಸಿಡಲಾಗುತ್ತದೆ. ದೇಶಾದ್ಯಂತ ಎಲ್ಲ ಏರ್‌ಪೋರ್ಟ್‌ಗಳಲ್ಲೂ ಇದು ಉಪಯೋಗವಾಗುತ್ತದೆ.

ಮುಖಕ್ಕೆ ಕೊಂಚ ಗಾಯವಾಗಿ ಬ್ಯಾಂಡೇಜ್‌ ಸುತ್ತಿಕೊಂಡಿದ್ದರೂ, ಮುಖ ಚಹರೆಯನ್ನು ಯಂತ್ರಗಳು ಗುರುತು ಹಿಡಿಯಲಿವೆ. ಪ್ರತಿ ಐದು ವರ್ಷಕ್ಕೊಮ್ಮೆ ಚಹರೆಯ ಪರಿಷ್ಕೃತ ಚಿತ್ರವನ್ನು ಸಂಗ್ರಹಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮುಖಚಹರೆ ಆಧರಿತ ಬೋರ್ಡಿಂಗ್‌ ಪಾಸ್‌ಗೆ ತಾಂತ್ರಿಕ ಸೇವೆ ಒದಗಿಸಲು ಖಾಸಗಿ ಕಂಪನಿ ಜತೆ ಕಳೆದ ತಿಂಗಳಷ್ಟೇ ಬೆಂಗಳೂರು ವಿಮಾನ ನಿಲ್ದಾಣ ಒಪ್ಪಂದ ಮಾಡಿಕೊಂಡಿತ್ತು.

Follow Us:
Download App:
  • android
  • ios