Asianet Suvarna News Asianet Suvarna News

ಶಾಸಕರ ಅನರ್ಹತೆಗೆ ತಜ್ಞರು ಏನಂತಾರೆ?

ಶಾಸಕರ ಅನರ್ಹತೆಗೆ ತಜ್ಞರು ಹೇಳಿದ್ದೇನು?| ಸ್ಪೀಕರ್‌ ನಿರ್ಧಾರ ಸಂವಿಧಾನಬಾಹಿರ: ಆಚಾರ್ಯ| ಸ್ಪೀಕರ್‌ ನಿರ್ಧಾರ ಕಾನೂನುಬದ್ಧ: ಪೊನ್ನಣ್ಣ| ನಿರ್ಧಾರಕ್ಕೆ ಹಾರನಹಳ್ಳಿ, ಧನಂಜಯ್‌ ಟೀಕೆ

Experts Opinion Over Karnataka Rebel MLAs Disqualification
Author
Bangalore, First Published Jul 29, 2019, 9:21 AM IST

ಬೆಂಗಳೂರು[ಜು.29]: ಕೆಲವು ದಿನಗಳ ಹಿಂದಷ್ಟೇ ಮೂವರು ಅತೃಪ್ತ ಶಾಸಕರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಿ ಸ್ಪೀಕರ್‌ ಕೆ.ಆರ್‌. ರಮೇಶ್‌ ಕುಮಾರ್‌ ನೀಡಿದ ಆದೇಶ ಕಾನೂನಾತ್ಮಕ ದೋಷಗಳಿಂದ ಕೂಡಿದೆ ಎಂದು ಟೀಕೆಗೊಳಗಾದ ಬೆನ್ನಲ್ಲೇ, ಭಾನುವಾರ ಮತ್ತೆ ಕಾಂಗ್ರೆಸ್‌-ಜೆಡಿಎಸ್‌ನ 14 ಶಾಸಕರನ್ನು ಅನರ್ಹಗೊಳಿಸಿರುವುದು ಕಾನೂನು ತಜ್ಞರ ಪರ- ವಿರೋಧ ಅಭಿಪ್ರಾಯಕ್ಕೆ ಎಡೆ ಮಾಡಿಕೊಟ್ಟಿದೆ.

ಮಧ್ಯಂತರ ಆದೇಶದ ಉಲ್ಲಂಘನೆ

ಸ್ಪೀಕರ್‌ ಅವರು 14 ಅತೃಪ್ತ ಶಾಸಕರನ್ನು ಅನರ್ಹಗೊಳಿಸಿರುವುದು ಕಾನೂನು ಹಾಗೂ ಸಂವಿಧಾನಬಾಹಿರ ಕ್ರಮ. ಇದು ಸುಪ್ರೀಂಕೋರ್ಟ್‌ನ ಮಧ್ಯಂತರ ಆದೇಶ ಮತ್ತು ಸಹಜ ನ್ಯಾಯದ ಉಲ್ಲಂಘನೆ. ಅತೃಪ್ತರ ರಾಜೀನಾಮೆ ವಿಚಾರವನ್ನು ಮಾತ್ರ ತೀರ್ಮಾನಿಸಲು ಸುಪ್ರೀಂಕೋರ್ಟ್‌ ಹೇಳಿದರೆ, ಸ್ಪೀಕರ್‌ ಅನರ್ಹತೆ ಮಾಡಿದ್ದಾರೆ. ವಿಪ್‌ ಉಲ್ಲಂಘಿಸಿದ್ದರಿಂದ ಅನರ್ಹ ಮಾಡಲಾಗಿದೆ ಎಂದು ಸ್ಪೀಕರ್‌ ಹೇಳುತ್ತಾರೆ. ಆದರೆ, ಸದನಕ್ಕೆ ಬರುವಂತೆ ಯಾರೂ ಸಹ ಅತೃಪ್ತರಿಗೆ ಒತ್ತಾಯ ಮಾಡುವಂತಿಲ್ಲ ಎಂದು ಸುಪ್ರಿಂ ಕೋರ್ಟ್‌ ಸ್ಪಷ್ಟಪಡಿಸಿತ್ತು. ವಿಪ್‌ ಅಂದರೆ ಸದನಕ್ಕೆ ಬರುವಂತೆ ಒತ್ತಾಯಪಡಿಸುವುದೇ ಆಗಿದೆ. ಕಾನೂನು ಪ್ರಕಾರ ಸ್ಪೀಕರ್‌ ಅವರು ಅತೃಪ್ತರಿಗೆ ನೋಟಿಸ್‌ ನೀಡಿ ಉತ್ತರಿಸಲು ಕನಿಷ್ಠ ಏಳು ದಿನವಾದರೂ ಸಮಯ ನೀಡಬೇಕಿತ್ತು. ರಾಜೀನಾಮೆ ಬಗ್ಗೆ ಅತೃಪ್ತರಿಗೆ ನೋಟಿಸ್‌ ನೀಡಲಾಗಿದೆಯೇ ಹೊರತು ಅನರ್ಹತೆ ದೂರಿನಲ್ಲಿ ನೋಟಿಸ್‌ ನೀಡಿ ಉತ್ತರಿಸಲು ಕಾಲಾವಕಾಶ ನೀಡಿಲ್ಲ. ಮೂರು ದಿನ ಸಮಯ ನೀಡಿ ತರಾತುರಿಯಲ್ಲಿ ಅನರ್ಹತೆ ಆದೇಶ ಮಾಡಿದ್ದಾರೆ. ಇನ್ನೂ ರಾಜೀನಾಮೆ ಬಗ್ಗೆ ಚಕಾರವೆತ್ತಿಲ್ಲ. ಇನ್ನೊಂದು ವಿಷಯವೆಂದರೆ, ಹಾಲಿ ಸರ್ಕಾರ (15ನೇ ವಿಧಾನಸಭೆ) ಅವಧಿಯಲ್ಲಿ ಚುನಾವಣೆಗೆ ಸ್ಪರ್ಧಿಸುವಂತಿಲ್ಲ ಎಂದು ಹೇಳಿರುವುದು ಸಹ ಕಾನೂನುಬಾಹಿರ ಕ್ರಮ. ಸ್ಪೀಕರ್‌ ಅವರ ಪ್ರತಿ ನಡೆ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಪಕ್ಷಗಳಿಗೆ ನೆರವಾಗುವಂತಿದ್ದು, ನಿಷ್ಪಕ್ಷಪಾತವಾಗಿಲ್ಲ.

-ಬಿ.ವಿ. ಆಚಾರ್ಯ, ಮಾಜಿ ಅಡ್ವೋಕೇಟ್‌ ಜನರಲ್‌

ಸ್ಪೀಕರ್‌ ಸಂಪೂರ್ಣ ಸ್ವತಂತ್ರರು

ಅನರ್ಹತೆ ವಿಚಾರದಲ್ಲಿ ಸುಪ್ರೀಂಕೊರ್ಟ್‌ ತಡೆಯಾಜ್ಞೆ ನೀಡಿಲ್ಲ. ಸ್ಪೀಕರ್‌ ಅವರು ರಾಜೀನಾಮೆ ಅಂಗೀಕರಿಸಲು ವಿಳಂಬ ಮಾಡುತ್ತಿದ್ದಾರೆ ಎಂದು ಅತೃಪ್ತರು ಸುಪ್ರೀಂಕೋರ್ಟ್‌ ಮೊರೆ ಹೋಗಿದ್ದರೇ ಹೊರತು ಅನರ್ಹತೆ ಮಾಡದಂತೆ ಸೂಚಿಸಲು ಕೋರಿರಲಿಲ್ಲ. ರಾಜೀನಾಮೆ ಹಾಗೂ ಅನರ್ಹತೆ ವಿಚಾರ ಸ್ಪೀಕರ್‌ ಅವರ ಅಧಿಕಾರ ವ್ಯಾಪ್ತಿಗೆ ಬರಲಿದ್ದು, ಅವರು ನಿರ್ಧರಿಸಲು ಸಂಪೂರ್ಣ ಸ್ವತಂತ್ರರು ಎಂದು ಸುಪ್ರೀಂಕೊರ್ಟ್‌ ಹೇಳಿತ್ತಲ್ಲದೆ, ಸ್ಪೀಕರ್‌ ನಿರ್ಣಯದ ನಂತರ ಪ್ರಕರಣದಲ್ಲಿ ತಾನು ಮುಂದುವರಿಯುವುದಾಗಿ ಸ್ಪಷ್ಟಪಡಿಸಿತ್ತು. ಪಕ್ಷ ನೀಡಿದ್ದ ವಿಪ್‌ ಅನ್ನು ಅತೃಪ್ತರು ಉಲ್ಲಂಘಿಸಿದ್ದರಿಂದ ಪಕ್ಷ ಅವರಿಗೆ ಕ್ಷಮೆ ನೀಡಿರಲಿಲ್ಲ. ವಿಚಾರಣೆಗೆ ಹಾಜರಾಗಲು ಸ್ಪೀಕರ್‌ ನೀಡಿದ ನೋಟಿಸ್‌ ಅನ್ನು ಅತೃಪ್ತರು ಪಾಲಿಸಿಲ್ಲ. ಇಂತಹ ಸನ್ನಿವೇಶದಲ್ಲಿ ಅನರ್ಹತೆ ಮಾಡಬಾರದು ಎನ್ನುವ ವಾದ ಸರಿಯಲ್ಲ. ಅತೃಪ್ತರು ರಾಜೀನಾಮೆ ನೀಡಿದ ಹಾಗೂ ನಂತರ ಅವರು ನಡೆದುಕೊಂಡ ಎಲ್ಲಾ ಸನ್ನಿವೇಶಗಳನ್ನು ಗಮನಿಸಿದರೆ ಅವರು ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದಾರೆ ಎಂಬುದು ಸ್ಪಷ್ಟವಾಗುತ್ತದೆ. ಅನರ್ಹತೆ ಮಾಡಲು ಇದೊಂದು ಕಾರಣ ಸಾಕು. ಸಂವಿಧಾನಿಕ ಹುದ್ದೆ ಹೊಂದಿರುವ ಸ್ಪೀಕರ್‌ ಅವರು ನೀಡಿದ ಆದೇಶವು ಸರಿ ಇರುತ್ತದೆ ಎಂದು ಮೊದಲು ಭಾವಿಸಬೇಕು. ನಂತರ ತೀರ್ಪಿನಲ್ಲಿ ಲೋಪದೋಷಗಳನ್ನು ಕೋರ್ಟ್‌ ಗಮನಕ್ಕೆ ತರಬೇಕು. ಕೋರ್ಟ್‌ ಆ ಬಗ್ಗೆ ತೀರ್ಮಾನ ತೆಗೆದುಕೊಳ್ಳಬೇಕಿದೆ

- ಎ.ಎಸ್‌.ಪೊನ್ನಣ್ಣ, ಹಿರಿಯ ವಕೀಲರು

ಅನರ್ಹಗೊಳಿಸಬಹುದು ಅಷ್ಟೇ

ಸ್ಪೀಕರ್‌ ಅವರು ಅತೃಪ್ತ ಶಾಸಕರಿಗೆ ಜು.18ರಂದು ನೋಟಿಸ್‌ ನೀಡಿ, 23ರಂದು ವಿಚಾರಣೆಗೆ ಹಾಜರಾಗಲು ಸೂಚಿಸಿದ್ದರು. ಅವರದೇ ನಿಯಮಗಳ ಪ್ರಕಾರವೇ ನೋಟಿಸ್‌ಗೆ ಉತ್ತರಿಸಲು ಕನಿಷ್ಠ ಏಳು ದಿನ ಕಾಲಾವಕಾಶ ನೀಡಬೇಕು. ಅದರಂತೆಯೇ ನೋಟಿಸ್‌ಗೆ ಉತ್ತರಿಸಲು ಶಾಸಕರು ಕಾಲಾವಕಾಶ ಕೇಳಿದ್ದರು. ಅದನ್ನು ಪರಿಶೀಲಿಸುವುದಾಗಿಯೂ ಸ್ಪೀಕರ್‌ ಹೇಳಿದ್ದರು. ಅಲ್ಲದೇ 14 ಶಾಸಕರ ನೋಟಿಸ್‌ ಅನ್ನು ಶಾಸಕರ ಮನೆಗೆ ಅಂಟಿಸಿ ಹೋಗಿದ್ದಾರೆ. ಶಾಸಕರು ಮುಂಬೈನಲ್ಲಿರುವುದರಿಂದ ನೋಟಿಸ್‌ ಸರಿಯಾಗಿ ತಲುಪಿಲ್ಲ. ಮತ್ತೆ ಕಾಲಾವಕಾಶ ಕೊಡಲ್ಲ ಎಂದೂ ಸ್ಪಷ್ಟಪಡಿಸಿಲ್ಲ. ಶಾಸಕರ ಹೇಳಿಕೆ ಪಡೆಯದೇ, ಕಾಲಾವಕಾಶ ನೀಡಡೆ, ಕರೆದು ವಿಚಾರಣೆ ನಡೆಸದೆ ಏಕಪಕ್ಷೀಯವಾಗಿ ಅನರ್ಹತೆ ಆದೇಶ ಮಾಡಿರುವುದು ಸರಿಯಲ್ಲ. ಹಾಗೆಯೇ, ರಾಜೀನಾಮೆ ವಿಚಾರಣೆಯನ್ನು ತೀರ್ಮಾನಿಸುವಂತೆ ಸುಪ್ರೀಂ ಕೋರ್ಟ್‌ ಸೂಚಿಸಿದ್ದರೂ ಅನರ್ಹತೆ ಮಾಡಿದ್ದಾರೆ. ಆ ಮೂಲಕ ಪರೋಕ್ಷವಾಗಿ ರಾಜೀನಾಮೆಯನ್ನು ತಿರಸ್ಕೃರಿಸಿದ್ದಾರೆ. ಶಾಸಕ ಸ್ಥಾನದಿಂದ ಅನರ್ಹಗೊಳಿಸಬಹುದು ಅಷ್ಟೇ. ಉಪ ಚುನಾವಣೆಯಲ್ಲಿ ಸ್ಪರ್ಧಿಸದಂತೆ ಹೇಳಲು ಕಾನೂನಿನಲ್ಲಿ ಅವಕಾಶವೇ ಇಲ್ಲ.

- ಅಶೋಕ್‌ ಹಾರನಹಳ್ಳಿ, ಮಾಜಿ ಅಡ್ವೋಕೇಟ್‌ ಜನರಲ್‌/ಹಿರಿಯ ವಕೀಲರು

ಪರಾಮರ್ಶೆ ಅನಿವಾರ್ಯವಾಗಿದೆ

ಶಾಸಕರನ್ನು ಅನರ್ಹತೆಗೊಳಿಸಲು ಅವಕಾಶವಿರುವ ಅವಧಿಯ ಬಗ್ಗೆ ನಮ್ಮ ಸಂವಿಧಾನವು ಹೇಳಿಲ್ಲ. ಆದರೆ, ಹಾಲಿ ವಿಧಾನಸಭೆಯ ಅವಧಿಯವರೆಗೆ (2023ರವರೆಗೆ) ಅನರ್ಹತೆಯು ಮುಂದುವರಿಯುವುದೆಂದು ಸ್ಪೀಕರ್‌ ಹೇಳಿರುವುದರಿಂದ ನ್ಯಾಯಾಲಯದ ಪರಾಮರ್ಶೆ ಅನಿವಾರ್ಯವಾಗಿದೆ. ಆದರೆ, ನ್ಯಾಯಾಲಯವು ತ್ವರಿತಗತಿಯಲ್ಲಿ ಈ ಪ್ರಕರಣವನ್ನು ಕೈಗೆತ್ತಿಕೊಳ್ಳುವುದಾಗಲಿ ಅಥವಾ ಅನರ್ಹತೆಯ ಆದೇಶಕ್ಕೆ ಮಧ್ಯಂತರ ತಡೆಯನ್ನು ನೀಡುವಂತಹ ಸಾಧ್ಯತೆ ಬಹಳ ಕಡಿಮೆ. ಅನರ್ಹಗೊಂಡಿರುವ ಶಾಸಕರ ರಾಜೀನಾಮೆಯನ್ನು ಸ್ಪೀಕರ್‌ ಅಂಗೀಕರಿಸಿದ್ದರೆ, ಹೇಗೆ ಈ ಶಾಸಕರು ಸದನದಿಂದ ಹೊರಗುಳಿಯುತ್ತಿದ್ದರೋ? ಹಾಗೆಯೇ ಈಗಲೂ ಸದನದಿಂದ ಹೊರಗುಳಿಯುವುದರಿಂದ, ಕೂಡಲೇ ನ್ಯಾಯಾಲಯವು ತಡೆ ಕೊಡುವಂತೆ ಅರ್ಜಿದಾರರು ಕೋರಲು ಸಮರ್ಥನೆ ಇರುವುದಿಲ್ಲ. ಇನ್ನು ಉಪ ಚುನಾವಣೆಯನ್ನು ಘೋಷಿಸಲು ಕಾಲಾವಕಾಶವಿರುವುದರಿಂದ, ಆ ಕಾರಣಕ್ಕಾಗಿ ಕೂಡಲೇ ತಡೆ ದೊರಕುವ ಸಾಧ್ಯತೆ ಇರುವುದಿಲ್ಲ. ಅಂತಿಮವಾಗಿ, ವಿರೋಧ ಪಕ್ಷ ಬಿಜೆಪಿಯು ರಚಿಸುವ ಸರ್ಕಾರದಲ್ಲಿ ಮಂತ್ರಿ ಸ್ಥಾನ ಗಿಟ್ಟಿಸಿಕೊಳ್ಳಲು ಅನರ್ಹತೆಯ ಆದೇಶಕ್ಕೆ ಕೂಡಲೇ ತಡೆ ಕೊಡುವಂತೆ ನಿರರ್ಥಕ ಮತ್ತು ಸಾರ್ವಜನಿಕ ಹಿತವಂಚಿತ ವಾದವನ್ನು ಮಾಡಿದರೂ, ನ್ಯಾಯಾಲಯವು ಅಂತಹ ವಾದವನ್ನು ಮಾನ್ಯ ಮಾಡಲು ಅವಕಾಶವಿರುವುದಿಲ್ಲ.

- ಕೆ.ವಿ.ಧನಂಜಯ್‌, ವಕೀಲರು, ಸುಪ್ರೀಂ ಕೋರ್ಟ್‌

Follow Us:
Download App:
  • android
  • ios