ಪ್ರವಾಸಿ ಭಾರತೀಯ ದಿವಸ್‌ನಲ್ಲಿ ಎರಡನೇ ದಿನ ಕಾಶ್ಮೀರದ ಮಳಿಗೆಯಲ್ಲಿ ಹೇ..ಟಚ್ ನಹೀ ಕರ‌್ನಾ..ಇಸ್ಕಾ ಫೋಟೋ ಖೀಂಚೋ..ಇಸ್ಕಾ ದಾಮ್ ಏಕ್ ಲಾಕ್ ಪಡ್ತಾ ಹೈ! (ಹೇ..ಇದನ್ನು ಮುಟ್ಟಬೇಡಿ..ಬೇಕಾದರೆ ಫೋಟೋ ತೆಗೆಯಿರಿ...ಇದರ ಬೆಲೆಯೇ 1 ಲಕ್ಷ ರು ಆಗುತ್ತೆ) ಎನ್ನುವ ಮಾತು ಕಿವಿಗೆ ಬೀಳುತ್ತಿತ್ತು. ಏನೆಂದು ನೋಡಿದರೆ ಒಂದು ಶಾಲ್! ಈ ಶಾಲಿನ ಬೆಲೆ ಒಂದು ಲಕ್ಷ! ಎಂದಾಗ ನಿಬ್ಬೆರಗಾಯಿತು.
ಬೆಂಗಳೂರು (ಜ.11): ಪ್ರವಾಸಿ ಭಾರತೀಯ ದಿವಸ್ನಲ್ಲಿ ಎರಡನೇ ದಿನ ಕಾಶ್ಮೀರದ ಮಳಿಗೆಯಲ್ಲಿ ಹೇ..ಟಚ್ ನಹೀ ಕರ್ನಾ..ಇಸ್ಕಾ ಫೋಟೋ ಖೀಂಚೋ..ಇಸ್ಕಾ ದಾಮ್ ಏಕ್ ಲಾಕ್ ಪಡ್ತಾ ಹೈ! (ಹೇ..ಇದನ್ನು ಮುಟ್ಟಬೇಡಿ..ಬೇಕಾದರೆ ಫೋಟೋ ತೆಗೆಯಿರಿ...ಇದರ ಬೆಲೆಯೇ 1 ಲಕ್ಷ ರು ಆಗುತ್ತೆ) ಎನ್ನುವ ಮಾತು ಕಿವಿಗೆ ಬೀಳುತ್ತಿತ್ತು. ಏನೆಂದು ನೋಡಿದರೆ ಒಂದು ಶಾಲ್! ಈ ಶಾಲಿನ ಬೆಲೆ ಒಂದು ಲಕ್ಷ! ಎಂದಾಗ ನಿಬ್ಬೆರಗಾಯಿತು.
ಶಾಲ್ನ ಬೆಲೆ ಒಂದು ಲಕ್ಷ ರು ಎಂದರೆ ನೀವು ನಂಬಲಾರಿರಿ. ಕಾಶ್ಮೀರದ ಅಪ್ಪಟ ಉಣ್ಣೆಯಿಂದ ತಯಾರು ಮಾಡಲಾದ ಪಶ್ಮೀನಾ ಶಾಲ್ನ ಬೆಲೆ 1ಲಕ್ಷ ರು ವರೆಗೆ ಇದೆ. ಇತ್ತೀಚೆಗೆ ಬೆಂಗಳೂರು ಹೊರವಲಯದ ಅಂತಾರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದಲ್ಲಿ ಆಯೋಜಿತವಾಗಿದ್ದ 14ನೇ ಪ್ರವಾಸಿ ಭಾರತೀಯ ದಿವಸ್ನ ಪ್ರದರ್ಶನಾಂಗಣದಲ್ಲಿ ಈ ಶಾಲ್ಗಳನ್ನು ಪ್ರದರ್ಶನಕ್ಕಿಡಲಾಗಿತ್ತು. ಕೊಳ್ಳುವವರು ಇಲ್ಲದಿದ್ದರೂ ಈ ಶಾಲ್ನ್ನು ಕಾಶ್ಮೀರದ ಮಳಿಗೆಯತ್ತ ಬಂದವರಿಗೆ ತೋರಿಸಿದಾಗ ಮೂಗಿನ ಮೇಲೆ ಬೆರಳಿಡುವಂತಾಗಿತ್ತು.
ಹೌದು ಕಾಶ್ಮೀರದ ವಿಶೇಷ ಉಣ್ಣೆಯಿಂದ ಮಾಡಿದ ಈ ಶಾಲ್ನ ಬೆಲೆ 1ಲಕ್ಷರು. ಇದನ್ನು ನೇಯ್ಗೆಗೆ ತಗುಲಿರುವುದು ಬರೋಬ್ಬರಿ 4 ವರ್ಷ ಎಂದರೆ ನಂಬಲೇ ಸಾಧ್ಯವಾಗುವುದಿಲ್ಲ.
ಪ್ರವಾಸಿ ಭಾರತೀಯ ದಿವಸ್ನ ಪ್ರದರ್ಶನಾಂಗಣದಲ್ಲಿ ಕಾಶ್ಮೀರದ ಕಲಾವಿದರು ಘಟಂ(ನೂಟ್) ನುಡಿಸುತ್ತಿದ್ದರೆ ಅದಕ್ಕೆ ತಕ್ಕುದಾಗಿ ಡೋಲಕ್ ಸದ್ದು ಕೇಳಿ ಬರುತ್ತಿತ್ತು. ಮತ್ತೊಂದು ಕಡೆ ಒಂದಿಬ್ಬರು ಎಂಬ್ರಾಯ್ಡರಿ ನೇಯ್ಗೆಯಲ್ಲಿ ತೊಡಗಿದ್ದರು. ಮತ್ತೊಬ್ಬರು ರೇಷ್ಮೆಯಂತೆ ನಯವಾದ ಭಾರವನ್ನೇ ಅರಿಯದಂತಿರುವ ಪಶ್ಮೈನಾ ಶಾಲುಗಳ ಮಾರಾಟದಲ್ಲಿ ನಿರತರಾಗಿದ್ದರು. ಪಶ್ಮೈನಾ ಶಾಲ್ಗಳ ಬೆಲೆಯೇನೂ ಕಡಿಮೆ ಇರಲಿಲ್ಲ. 2,000ರುನಿಂದ 1ಲಕ್ಷರು ವರೆಗಿನ ಶಾಲ್ ಅಲ್ಲಿತ್ತು. ಇದನ್ನು ದೂರದಿಂದಲೇ ತೋರಿಸುತ್ತಿದ್ದ ನೇಯ್ಗೆಗಾರ ಮುಷ್ತಾಕ್ ಅಹಮ್ಮದ್ ಬೇಗ್ ಇದರ ಬೇಲೆ 1 ಲಕ್ಷ ರು ಎಂದು ತಿಳಿಸುತ್ತಿದ್ದರು.
1ಲಕ್ಷದ ಶಾಲ್! ಏನು ವಿಶೇಷ
ಒಂದು ಲಕ್ಷದ ಪಶ್ಮೈನಾ (ಪರ್ಶಿಯನ್ನಿಂದ ಬಂದುದು) ಶಾಲ್ ವಿಶೇಷವೆಂದರೆ ಈ ಶಾಲ್ ವಿಶೇಷವಾದ ಉಣ್ಣೆಯಿಂದ ತಯಾರು ಮಾಡಲಾಗಿದೆ. ಕಾಶ್ಮೀರದ ಶೇ.100ರಷ್ಟು ಶುದ್ಧವಾದ ಉಣ್ಣೆಯಿಂದ ತಯಾರಾದ ಈ ಶಾಲ್ನಲ್ಲಿ ಮಾಡಲಾದ ಎಂಬ್ರಾಯ್ಡರಿಗೆ(ಕುಸುರಿ) ತಗುಲಿದ್ದು ನಾಲ್ಕು ವರ್ಷ.ಕಾಶ್ಮೀರಿ ಮಳಿಗೆಯಲ್ಲಿದ್ದ ನೇಯ್ಗೆಗಾರ ಮುಷ್ತಾಕ್ ಅಹಮ್ಮದ್ ಬೇಗ್ ಈ ಉಣ್ಣೆ ಅತ್ಯಂತ ಉತ್ಕೃಷ್ಟವಾದದ್ದು. -4ರಿದ -10-20ಡಿಗ್ರಿಯಲ್ಲಿ ಜೀವಿಸುವ ಮೇಕೆಗಳ(ಕಾಶ್ಮೀರದಲ್ಲಿ ಇವುಗಳನ್ನು ಚಂಗ್ತಂಗಿ ಎನ್ನುತ್ತಾರೆ) ಉಣ್ಣೆಯಿಂದ ಈ ಶಾಲು ತಯಾರಿಸಲಾಗುತ್ತದೆ. ಈ ಮೇಕೆಗಳನ್ನು ಅದೆಷ್ಟು ಜತನದಿಂದ ಕಾಪಾಡುತ್ತಾರೆಂದರೆ ಅವುಗಳಿಗೆ ಯಾವುದೇ ರೋಗ ರುಜಿನಗಳು ತಗುಲದಂತೆ ಹೆಪ್ಪುಗಟ್ಟುವ ಚಳಿಗೆ ಅವುಗಳ ಉಣ್ಣೆಗೆ ಏನೂ ಹಾನಿ ಆಗದಂತೆ ಕಾಪಾಡುತ್ತಾರೆ. ಶ್ರೇಷ್ಟ ದರ್ಜೆಯ ಹುಲ್ಲು ಮಾತ್ರವಲ್ಲ ಹುಲ್ಲಿನ ಬೇರುಗಳನ್ನು ಈ ಮೇಕೆಗಳಿಗೆ ತಿನ್ನಿಸುತ್ತಾರೆ. ಮೇಕೆಗಳನ್ನು ಮಂಚದ ಕೆಳಗೆ ಬೆಚ್ಚಗೆ ಮಲಗಿಸಿ ಮಂಚದ ಮೇಲೆ ಮನುಷ್ಯರು ಮಲಗುವುದರಿಂದ ಮನುಷ್ಯರ ಮೈಶಾಖ ಅವುಗಳಿಗೆ ತಗಲುತ್ತದೆ ಎನ್ನುತ್ತಾರೆ ಬೇಗ್. ಇಷ್ಟು ಜೋಪಾನದಿಂದ ಸಾಕಿದ ಮೇಕೆಗಳಿಂದಲೇ ಅತ್ಯಂತ ನಯವಾದ ಉತ್ಕೃಷ್ಟ ದರ್ಜೆಯ ಉಣ್ಣೆ ಸಿಗುತ್ತದೆ ಎನ್ನುವ ಅವರು ಈ ಉಣ್ಣೆಯನ್ನು ಬಳಸಿ ಶಾಲ್ ತಯಾರಿಸಿ ಅದರ ಮೇಲೆ ಎಂಬ್ರಾಯ್ಡರಿ ಹಾಕುತ್ತೇವೆಂದು ವಿವರಿಸುತ್ತಾರೆ.
ಕಾನಿ ಶಾಲ್!
ಕಾಶ್ಮೀರದ ಮತ್ತೊಂದು ವಿಶೇಷ ಅಲ್ಲಿನ ಕಾನಿ ಶಾಲ್ಗಳು.ಈ ಶಾಲ್ಗಳ ವಿಶೇಷವೆಂದರೆ ಇವುಗಳು ಮೊಗಲ್ ಕಾಲದಿಂದ ಪ್ರಸಿದ್ಧಿಗೆ ಬಂದಿರುವುದು. ಕಾನಿ ಎಂದರೆ ಈ ಶಾಲ್ಗಳನ್ನು ನೇಯ್ಗೆ ಮಡುವ ಉದ್ದವಾದ ಸೂಜಿಯಂತಿರುವ ಉಪಕರಣ. ಈ ಕಾನಿಯಿಂದ ನೇಯ್ಗೆ ಮಾಡುವುದೇ ಒಂದು ನಾಜೂಕಾದ ಕಲೆ. ಮಳಿಗೆಯಲ್ಲಿದ್ದ ಮತ್ತೊಬ್ಬ ನೇಯ್ಗೆಗಾರ ಮುಷ್ತಾಕ್ ಅಹಮ್ಮದ್ ಇದು ಕೇವಲ ನೇಯ್ಗೆ ಮಾತ್ರವಲ್ಲ ಡಿಸೈನಿಂಗ್(ವಿನ್ಯಾಸ) ಕೂಡ ಜತೆ ಜತೆಗೆ ಸಾಗುತ್ತದೆ ಎನ್ನುತ್ತಾ ನೇಯ್ಗೆ ಮಾಡಿ ತೋರಿಸುತ್ತಾರೆ.
ಕಾಶ್ಮೀರದ ಮಳಿಗೆಯಲ್ಲಿನ ಪಶ್ಮೀನಾ ಮತ್ತು ಕಾನಿ ಶಾಲ್ ಪ್ರವಾಸಿ ಭಾರತೀಯ ದಿವಸ್ನಲ್ಲಿ ಆಕರ್ಷಣೆಯ ಕೇಂದ್ರವಾಗಿತ್ತು. ಸಾಕಷ್ಟು ಸಂಖ್ಯೆಯಲ್ಲಿ ಪಶ್ಮೈನಾ, ಕಾನಿ ಶಾಲ್ಗಳ ಮಾರಾಟವೂ ಆಯಿತು.
ನಮಗೆ ಈ ಶಾಲ್ನ ಬೆಲೆ ಮುಖ್ಯ ಅಲ್ಲ. ಮಾರಾಟವೂ ಮುಖ್ಯವಲ್ಲ. ಆದರೆ ಪಶ್ಮೀನಾಶಾಲ್ನ ಕುರಿತು ಜನರಿಗೆ ತಿಳುವಳಿಕೆ ನೀಡಬೇಕು. ಅದರಲ್ಲೂ ಅನಿವಾಸಿ ಭಾರತೀಯರು ನಮ್ಮ ದೇಶದ ಶ್ರೀಮಂತ ಮತ್ತು ಅಷ್ಟೇ ಉತ್ಕೃಷ್ಟವಾದ ವಸ್ತುಗಳ ಕುರಿತು ಮಾಹಿತಿ ಹೊಂದಬೇಕು.
ಮುಷ್ತಾಕ್ ಅಹಮ್ಮದ್ ಬೇಗ್, ಪಸ್ಮೀನಾ ಶಾಲ್ ನೇಯ್ಗೆಗಾರ
-ವರದಿ: ಪ್ರಶಾಂತ್ ಕುಮಾರ್ ಎಂ.ಎನ್
ಚಿತ್ರಕೃಪೆ: ಎ. ವೀರಮಣಿ
