Asianet Suvarna News Asianet Suvarna News

ಬ್ಲಾಕ್ ಅಂಡ್ ವೈಟ್ ದಂಧೆಗೆ ಕ್ಯಾಶ್ ನಾಗ ಬಳಸಿದ ಸಿಮ್ ಗಳೆಷ್ಟು ಗೊತ್ತಾ? ಇಲ್ಲಿದೆ ಎಕ್ಸ್'ಕ್ಲೂಸಿವ್ ನ್ಯೂಸ್!

ಡೀಲ್‌ಗಾಗಿ ಹಲವರನ್ನು ಸಂಪರ್ಕಿಸುತ್ತಿದ್ದ ನಾಗ ಬೇರೆ-ಬೇರೆ ಸಿಮ್ ಕಾರ್ಡ್‌ಗಳನ್ನು ಬಳಕೆ ಮಾಡುತ್ತಿದ್ದ. ಒಂದು ಬಾರಿ ಡೀಲ್‌ಗೆ ಮೊಬೈಲ್ ಸಂಖ್ಯೆ ಬಳಸಿದರೆ ಮತ್ತೆ ಆ ನಂಬರ್ ಬಳಸುತ್ತಿರಲಿಲ್ಲ.

Exclusive News About RowdySheteer Naga
  • Facebook
  • Twitter
  • Whatsapp

ಬೆಂಗಳೂರು (ಏ.20): ಹಣದ ‘ಬ್ಲ್ಯಾಕ್ ಅಂಡ್ ವೈಟ್’ ದಂಧೆ ಪ್ರಕರಣದಲ್ಲಿ ಸಿಲುಕಿರುವ ರೌಡಿಶೀಟರ್ ಹಾಗೂ ಬೆಂಗಳೂರು ಮಹಾನಗರ ಪಾಲಿಕೆಯ ಮಾಜಿ ಸದಸ್ಯ ವಿ.ನಾಗರಾಜ ಅಲಿಯಾಸ್ ನಾಗ ಕಳೆದ ನವೆಂಬರ್‌ನಲ್ಲಿ ನೋಟು ಅಮಾನ್ಯೀಕರಣಗೊಂಡ ನಂತರ ಇದುವರೆಗೆ ಸುಮಾರು 500 ಸಿಮ್ ಕಾರ್ಡ್ ಹಾಗೂ ಅಷ್ಟೇ ಸಂಖ್ಯೆಯ ಮೊಬೈಲ್ ಬಳಸಿದ್ದಾನೆ ಎಂಬ ಕುತೂಹಲದ ಅಂಶ ತನಿಖೆ ವೇಳೆ ಬೆಳಕಿಗೆ ಬಂದಿದೆ.

ಆರೋಪಿ ನಾಗ ಒಂದು ಡೀಲ್‌ಗೆ ಬಳಸಿದ ಮೊಬೈಲ್ ಸಂಖ್ಯೆಯನ್ನು ಇನ್ನೊಂದು ಡೀಲ್‌ಗೆ ಬಳಸುತ್ತಿರಲಿಲ್ಲ. ಈಗಲೂ ಹಾಗೆಯೇ ನಡೆದುಕೊಳ್ಳುತ್ತಿದ್ದು, ತನಿಖೆಯ ಜಾಡು ಹಿಡಿದು ಆತನ ಬಂಧನಕ್ಕೆ ಶೋಧ ನಡೆಸುತ್ತಿರುವ ಪೊಲೀಸರಿಗೆ ಇದು ತಲೆನೋವಾಗಿ ಪರಿಣಮಿಸಿದೆ ಎಂದು ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸ್ ಅಧಿಕಾರಿಯೊಬ್ಬರು ‘ಕನ್ನಡಪ್ರಭ’ಕ್ಕೆ ಹೇಳಿದ್ದಾರೆ.

ಕೇಂದ್ರ ಸರ್ಕಾರ ನ.೮ರಂದು ಹಳೆಯ ೫೦೦, ೧೦೦೦ ಮುಖಬೆಲೆಯ ನೋಟುಗಳನ್ನು ರದ್ದುಪಡಿಸುತ್ತಿದ್ದಂತೆ ಕಪ್ಪು ಹಣ ಹೊಂದಿದ್ದವರು ತಮ್ಮ ಬಳಿ ಇದ್ದ ಕೋಟ್ಯಂತರ ರುಪಾಯಿ ಬದಲಾಯಿಸಿಕೊಳ್ಳಲು ಸಾಕಷ್ಟು ಪ್ರಯತ್ನಿಸಿದ್ದಾರೆ. ಈ ವೇಳೆ ಕಮಿಷನ್ ಆಧಾರದ ಮೇಲೆ ನಾಗ ನೋಟು ಬದಲಿಸಿಕೊಡುವ ದಂಧೆಗೆ ಇಳಿದಿದ್ದ. ಶೇ.೩೦ರಿಂದ ೪೦ರಷ್ಟು ಕಮಿಷನ್ ಆಧಾರದ ಮೇಲೆ ದಂಧೆಗೆ ಇಳಿದಿದ್ದ.

ಡೀಲ್‌ಗಾಗಿ ಹಲವರನ್ನು ಸಂಪರ್ಕಿಸುತ್ತಿದ್ದ ನಾಗ ಬೇರೆ-ಬೇರೆ ಸಿಮ್ ಕಾರ್ಡ್‌ಗಳನ್ನು ಬಳಕೆ ಮಾಡುತ್ತಿದ್ದ. ಒಂದು ಬಾರಿ ಡೀಲ್‌ಗೆ ಮೊಬೈಲ್ ಸಂಖ್ಯೆ ಬಳಸಿದರೆ ಮತ್ತೆ ಆ ನಂಬರ್ ಬಳಸುತ್ತಿರಲಿಲ್ಲ. ಅಷ್ಟೇ ಅಲ್ಲದೆ, ತನ್ನ ಜತೆಗಿರುವವರರ ಮೊಬೈಲ್ ಬಳಸುತ್ತಿದ್ದ. ಪೊಲೀಸರಿಗೆ ಸಿಕ್ಕಿ ಬೀಳುತ್ತೇನೆ ಎಂಬುದನ್ನು ಅರಿತಿದ್ದ ನಾಗ ಪೂರ್ವ ನಿಯೋಜಿತವಾಗಿ ಕೃತ್ಯ ಎಸಗುತ್ತಿದ್ದ. ಒಮ್ಮೆ ಬಳಸಿದ ಮೊಬೈಲ್ ಹಾಗೂ ಸಿಮ್‌ಕಾರ್ಡ್ ಬಳಸುತ್ತಿರಲಿಲ್ಲ ಎಂಬುದು ತನಿಖೆ ವೇಳೆ ಪತ್ತೆಯಾಗಿದೆ.

ಪತ್ನಿಯರ ಮೊಬೈಲ್ ಸಂಖ್ಯೆ ಕೂಡ ಚೇಂಜ್:

ನಾಗ ತನ್ನದಷ್ಟೇ ಅಲ್ಲದೆ, ತನ್ನ ಪತ್ನಿಯರ (ಮೂವರು ಪತ್ನಿಯರು ಎಂಬ ಮಾಹಿತಿಯಿದೆ) ಸಿಮ್ ಕಾರ್ಡ್ ಹಾಗೂ ಮೊಬೈಲನ್ನು ಕೂಡ ಇದೇ ರೀತಿ ಬದಲಾಯಿಸಿರುವುದು ಗೊತ್ತಾಗಿದೆ.

ಆತನ ಮನೆ ಮೇಲೆ ಪೊಲೀಸರು ದಾಳಿ ಮಾಡಿದ ಮೇಲೆ ಬೇರೆಯವರ ಮೊಬೈಲ್‌ಗಳನ್ನು ಹಾಗೂ ರಸ್ತೆ ಬದಿಯಲ್ಲಿರುವ ಸ್ಥಿರ ದೂರವಾಣಿಯನ್ನು ಬಳಸುತ್ತಿದ್ದಾನೆ. ಇದಲ್ಲದೆ, ರಸ್ತೆ ಬದಿ ಹೋಗುವ ಅಪರಿಚಿತರ ಬಳಿ ಮನವಿ ಮಾಡಿ ಅವರ ಮೊಬೈಲ್‌ನಿಂದ ತನಗೆ ಬೇಕಾದವರನ್ನು ಸಂಪರ್ಕಿಸುತ್ತಿದ್ದಾನೆ. ಈ ಮೊಬೈಲ್ ಸಂಖ್ಯೆಗಳ ಜಾಡು ಹಿಡಿದು ಹೋದರೆ ಅದು ಬೇರೊಬ್ಬರ ಮೊಬೈಲ್ ಆಗಿರುತ್ತದೆ. ಹೀಗಾಗಿ ಆತನನ್ನು ಬಂಧಿಸುವುದು ಕಷ್ಟವಾಗಿದೆ ಎನ್ನಲಾಗಿದೆ.

ಇನ್ನು ನಾಗ ಎಲ್ಲೂ ಕೂಡ ಒಂದು ನಿರ್ದಿಷ್ಟ ಜಾಗದಲ್ಲಿ ಅಡಗಿಲ್ಲ. ವಾಹನವೊಂದರಲ್ಲಿ ಸುತ್ತಾಡುತ್ತಿದ್ದಾನೆ. ಅವನು ಆಪ್ತರನ್ನು ಸಂಪರ್ಕಿಸಿದ ಮೊಬೈಲ್ ಸಂಪರ್ಕ ಪರಿಶೀಲನೆ ನಡೆಸಿದರೆ ಒಮ್ಮೆ ತಮಿಳುನಾಡು, ಇನ್ನೊಮ್ಮೆ ಕೇರಳವನ್ನು ತೋರಿಸುತ್ತದೆ. ತನ್ನ ಮನೆ ಮೇಲೆ ಪೊಲೀಸ್ ದಾಳಿ ನಡೆಸಿದಾಗಿನಿಂದ ಹೀಗೆ ಮಾಡುತ್ತಿದ್ದಾನೆ ಎನ್ನಲಾಗಿದೆ. 

ಇನ್ನು ನಾಗನ ಪತ್ತೆಗೆ ಆತನ ಪತ್ನಿ ಲಕ್ಷ್ಮೀ ಸರಿಯಾಗಿ ಪೊಲೀಸರ ತನಿಖೆಗೆ ಸ್ಪಂದಿಸುತ್ತಿಲ್ಲ. ತನ್ನ ಪತಿ ಬೆಂಗಳೂರಿನಲ್ಲಿಯೇ ಇದ್ದಾನೆ. ಮನೆಗೆ ಬಂದು ಹೋಗುತ್ತಿದ್ದಾನೆ ಎಂದೆಲ್ಲ ಮಾಧ್ಯಮಗಳ ಬಳಿ ಹೇಳಿಕೆ ಕೊಡುತ್ತಿದ್ದಾಳೆ. ಇದು ಸುಳ್ಳು, ತನಿಖಾಧಿಕಾರಿಗಳು ಮತ್ತು ಸಾರ್ವಜನಿಕರ ಗಮನೆ ಬೇರೆಡೆ ಸೆಳೆಯುತ್ತಿದ್ದಾಳೆ ಎಂದು ಪೊಲೀಸರು ಹೇಳಿದ್ದಾರೆ. 

ಮಾ.೧೮ರಂದು ಉದ್ಯಮಿ ಉಮೇಶ್ ಹಾಗೂ ಅವರ ಸ್ನೇಹಿತರನ್ನು ಅಪಹರಿಸಿದ್ದ ನಾಗ, ಉದ್ಯಮಿ ಬಳಿಯಿದ್ದ ರದ್ದಾದ ಹಳೆಯ ೫೦೦, ೧೦೦೦ ಮುಖಬೆಲೆಯ ₹೫೦ ಲಕ್ಷ ಹಣ ದರೋಡೆ ಮಾಡಿದ್ದ. ಉದ್ಯಮಿ ನೀಡಿದ ದೂರಿನ ಮೇರೆಗೆ ಶ್ರೀರಾಂಪುರದಲ್ಲಿರುವ ನಾಗನ ಮನೆ ಮೇಲೆ ದಾಳಿ ನಡೆಸಿದಾಗ ರದ್ದಾದ ಹಳೆಯ ₹ ೧೪.೮೦ ಕೋಟಿ ನಗದು ಹಾಗೂ ಮಾರಕಾಸ್ತ್ರಗಳನ್ನು ಪೊಲೀಸರು ಜಪ್ತಿ ಮಾಡಿದ್ದರು. ಈ ವೇಳೆ ಹಲವು ಭೂ ದಾಖಲೆಗಳು ಪೊಲೀಸರಿಗೆ ಸಿಕ್ಕಿದ್ದವು.

ಪತ್ತೆಗೆ ತಂಡಗಳ ರಚನೆ

ಆರೋಪಿ ಬಂಧನಕ್ಕೆ ಸಿಸಿಬಿ ಪೊಲೀಸರ ಒಂದು ತಂಡ, ಉತ್ತರ ವಿಭಾಗ, ಪೂರ್ವ ವಿಭಾಗದ ಅಪರಾಧ ದಳ, ಹೆಣ್ಣೂರು ಹಾಗೂ ಶ್ರೀರಾಂಪುರ ಠಾಣೆಯಲ್ಲಿ ತಂಡಗಳನ್ನು ರಚಿಸಲಾಗಿದೆ. ಈ ತಂಡಗಳು ಆರೋಪಿ ಬಂಧನಕ್ಕೆ ಬಲೆ ಬೀಸಿದ್ದು, ಆತನ ಚಲನವಲನಗಳ ಮೇಲೆ ನಿಗಾವಹಿಸಿವೆ ಎಂದು ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

Follow Us:
Download App:
  • android
  • ios