ಗ್ರಾಮ ಪಂಚಾಯಿತಿಗಳಿಗೆ ಸರ್ಕಾರದಿಂದ ನಡೆಯಲಿದೆ 150 ಅಂಕದ ಪರೀಕ್ಷೆ

Examination For Village Panchayat
Highlights

ಜನವರಿ ಆರಂಭವಾಗುತ್ತಿದ್ದಂತೆ ನಿಧಾನವಾಗಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಬಿಸಿ ಆರಂಭ, ಮಾರ್ಚ್, ಏಪ್ರಿಲ್‌ನಲ್ಲಿ ಎದುರಾಗುವ ಪರೀಕ್ಷೆ ಎದುರಿಸಲು ಸಜ್ಜಾಗುವ ಕಾಲ. ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದವರಿಗೆ ಬಹುಮಾನ, ಗೌರವ, ಸನ್ಮಾನ ಕಟ್ಟಿಟ್ಟ ಬುತ್ತಿ. ಇಂತಹುದೇ ಅವಕಾಶವನ್ನು ಇದೀಗ ಗ್ರಾಮ ಪಂಚಾಯತಿಗಳಿಗೂ ನೀಡಲು ಆರ್‌ಡಿಪಿಆರ್ ಇಲಾಖೆ ಮುಂದಾಗಿದೆ.

ಬೆಂಗಳೂರು (ಜ.11): ಜನವರಿ ಆರಂಭವಾಗುತ್ತಿದ್ದಂತೆ ನಿಧಾನವಾಗಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಬಿಸಿ ಆರಂಭ, ಮಾರ್ಚ್, ಏಪ್ರಿಲ್‌ನಲ್ಲಿ ಎದುರಾಗುವ ಪರೀಕ್ಷೆ ಎದುರಿಸಲು ಸಜ್ಜಾಗುವ ಕಾಲ. ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದವರಿಗೆ ಬಹುಮಾನ, ಗೌರವ, ಸನ್ಮಾನ ಕಟ್ಟಿಟ್ಟ ಬುತ್ತಿ. ಇಂತಹುದೇ ಅವಕಾಶವನ್ನು ಇದೀಗ ಗ್ರಾಮ ಪಂಚಾಯತಿಗಳಿಗೂ ನೀಡಲು ಆರ್‌ಡಿಪಿಆರ್ ಇಲಾಖೆ ಮುಂದಾಗಿದೆ.

ವಿದ್ಯಾರ್ಥಿಗಳ ಮಾದರಿಯಲ್ಲಿ ಪ್ರಶ್ನೆಗೆ ಉತ್ತರಿಸುವ, ಹೆಚ್ಚು ಅಂಕ ಪಡೆದವರಿಗೆ ನಗದು ಬಹುಮಾನ ಪಡೆಯುವ ಅಪೂರ್ವ ಅವಕಾಶ ಗ್ರಾಮ ಪಂಚಾಯಿತಿಗಳಿಗೆ ಈ ವರ್ಷದಿಂದ ಬಂದಿದೆ.

ಕಡ್ಡಾಯವಾಗಿ ಎಲ್ಲ ಗ್ರಾಮ ಪಂಚಾಯಿತಿಗಳು ಪ್ರಶ್ನೆಗಳಿಗೆ ಉತ್ತರ ಬರೆಯಲೇ ಬೇಕು, ಒಟ್ಟು 150 ಅಂಕಗಳನ್ನು ನಿಗದಿ ಮಾಡಲಾಗಿದ್ದು, ಚೆನ್ನಾಗಿ ಉತ್ತರ ಬರೆದ ಗ್ರಾಮ ಪಂಚಾಯಿತಿಗಳಿಗೆ ಬರೋಬ್ಬರಿ 10 ಲಕ್ಷ ರು. ಬಹುಮಾನವನ್ನು ಸರ್ಕಾರ ನೀಡಲಿದೆ!

‘ನಮ್ಮ ಗ್ರಾಮ, ನಮ್ಮ ಯೋಜನೆ’ಯನ್ನು 2016-17ನೇ ಸಾಲಿನಲ್ಲಿ ಅತ್ಯುತ್ತಮವಾಗಿ ಜಾರಿಗೆ ತಂದಿರುವ 100 ಗ್ರಾಮ ಪಂಚಾಯಿತಿಗಳನ್ನು ಗುರುತಿಸಿ ಅವುಗಳಿಗೆ ಪ್ರೋತ್ಸಾಹ ಧನವಾಗಿ ತಲಾ 10 ಲಕ್ಷ ರು. ನೀಡಲಿದೆ.

ಪರೀಕ್ಷೆ ನಡೆಯೋದು ಹೀಗೆ: ಒಟ್ಟು ಎರಡು ಮಾದರಿ ಪ್ರಶ್ನೆಗಳು ಇರುತ್ತವೆ. ಮೊದಲನೆ ಮಾದರಿ 100 ಅಂಕ ಹಾಗೂ ಎರಡನೆ ಮಾದರಿ 50 ಅಂಕಗಳನ್ನು ಹೊಂದಿರುತ್ತದೆ. 100 ಅಂಕಗಳ ‘ಉತ್ತಮ ದೂರದೃಷ್ಟಿ ಯೋಜನೆ’ ಅಡಿಯಲ್ಲಿ ಆಯಾ ಪ್ರಶ್ನೆಗಳಿಗೆ ಗರಿಷ್ಠ ಅಂಕಗಳನ್ನು ನಿಗದಿ ಪಡಿಸಲಾಗಿರುತ್ತದೆ. ಈ ಪ್ರಶ್ನೆಗಳಿಗೆ ಉತ್ತರಿಸುವ ಮತ್ತು ಪೂರಕವಾಗಿ ಅಗತ್ಯ ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ. ದಾಖಲೆಗಳು ಇದ್ದಲ್ಲಿ ಮಾತ್ರ ಪ್ರಶ್ನಾವಳಿಗಳಿಗೆ ಟಿಕ್ ಮಾಡಿ ತುಂಬಬೇಕು. 100 ಅಂಕಗಳ ವಿಭಾಗದಲ್ಲಿ ಒಟ್ಟು 27 ಮುಖ್ಯ ಪ್ರಶ್ನೆ ಮತ್ತು ಉಪ ಪ್ರಶ್ನೆಗಳು ಇರುತ್ತವೆ.

ಉದಾಹರಣೆಗೆ ‘ನಮ್ಮ ಗ್ರಾಮ ನಮ್ಮ ಯೋಜನೆ ಕುರಿತು ತರಬೇತಿಯನ್ನು ಯಾರು ಪಡೆದಿದ್ದಾರೆ ಎಂಬುದನ್ನು ತಿಳಿಸಬೇಕು. ಪ್ರಶ್ನೆ ಪತ್ರಿಕೆಯಲ್ಲಿ ಟಿಕ್ ಮಾಡಿ ಇದಕ್ಕೆ ಪೂರಕವಾದ ಮಾಹಿತಿಯನ್ನು ನೀಡಬೇಕಾಗುತ್ತದೆ.

50 ಅಂಕಗಳ ಯೋಜನೆಯಲ್ಲಿನ ಚಟುವಟಿಕೆಗಳು/ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿದ್ದಲ್ಲಿ ಆ ಬಗ್ಗೆ ವಿವರಿಸಿ, ಅಗತ್ಯ ದಾಖಲೆಗಳನ್ನು ಸಲ್ಲಿಸಬೇಕು. ಪರೀಕ್ಷಾ ಪ್ರಕ್ರಿಯೆ: ಎಲ್ಲ ಗ್ರಾಮ ಪಂಚಾಯಿತಿಗಳು ಕಡ್ಡಾಯವಾಗಿ ಈ ‘ಪರೀಕ್ಷೆ’ ಎದುರಿಸಲೇಬೇಕು. ಪ್ರಶ್ನಾವಳಿ ಪಂಚತಂತ್ರ ತಂತ್ರಾಂಶದಲ್ಲಿ ಜನವರಿ 16ರಿಂದ 31ರವರೆಗೆ ಲಭ್ಯವಿರುತ್ತದೆ. ರಾಜ್ಯ ಮಟ್ಟದ ಸಮಿತಿಯು ಮಾ. 10ರೊಳಗೆ ಚರ್ಚಿಸಿ ಪಟ್ಟಿಯನ್ನು ಅಂತಿಮಗೊಳಿಸಲಿದೆ.

loader