ನವದೆಹಲಿ[ಆ.20]: ಕಳೆದ ಲೋಕಸಭೆಯ ಅವಧಿ ಮುಗಿದರೂ ಇನ್ನೂ ದೆಹಲಿಯ ಸರ್ಕಾರಿ ಬಂಗಲೆಗಳಲ್ಲಿ ವಾಸವಿದ್ದ 200ಕ್ಕೂ ಹೆಚ್ಚು ಸಂಸದರಿಗೆ ವಾರದೊಳಗೆ ಮನೆ ಖಾಲಿ ಮಾಡುವಂತೆ ಸಂಸದೀಯ ಸಮಿತಿಯೊಂದು ನೋಟಿಸ್‌ ಜಾರಿ ಮಾಡಿದೆ. ಅಲ್ಲದೆ ಇಂಥ ಮನೆಗಳಿಗೆ ಇನ್ನು ಮೂರು ದಿನಗಳಲ್ಲಿ ನೀರು, ವಿದ್ಯುತ್‌ ಮತ್ತು ಅಡುಗೆ ಅನಿಲ ಪೂರೈಕೆಯನ್ನೂ ಸ್ಥಗಿತಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದೆ.

ಹೀಗಾಗಿ ದಿಲ್ಲಿಯ ಐಷಾರಾಮಿ ಲ್ಯೂಟನ್ಸ್‌ ಪ್ರದೇಶದಲ್ಲಿ ಕಾನೂನು ಬಾಹಿರವಾಗಿ ತಂಗಿದ್ದ ಮಾಜಿಗಳು ಇದೀಗ ಅನಿವಾರ್ಯವಾಗಿ ಮನೆ ಖಾಲಿ ಮಾಡಬೇಕಾಗಿ ಬಂದಿದೆ.

ದಿಲ್ಲಿ ಸರ್ಕಾರಿ ಬಂಗ್ಲೆ ಬಿಡದ 200 ಮಾಜಿ ಸಂಸದರು!

ಮಾಜಿ ಲೋಕಸಭಾ ಸದಸ್ಯರು ಲೋಕಸಭೆ ವಿಸರ್ಜನೆಯಾದ 1 ತಿಂಗಳ ಅವಧಿಯಲ್ಲಿ ತಮಗೆ ನೀಡಲಾದ ಸರ್ಕಾರಿ ಬಂಗಲೆ ಖಾಲಿ ಮಾಡಬೇಕೆಂಬ ನಿಯಮವಿದೆ. ಆದರೆ, 16ನೇ ಲೋಕಸಭೆ ವಿಸರ್ಜನೆಯಾಗಿ 3 ತಿಂಗಳು ಕಳೆದರೂ, 2014ರಲ್ಲಿ ಸರ್ಕಾರ ನೀಡಿದ್ದ ಅಧಿಕೃತ ಬಂಗಲೆಗಳನ್ನು 200ಕ್ಕೂ ಹೆಚ್ಚು ಮಾಜಿ ಸಂಸದರು ಖಾಲಿ ಮಾಡದೆ, ಅಲ್ಲೇ ಠಿಕಾಣಿ ಹೂಡಿದ್ದಾರೆ. ಇದರಿಂದಾಗಿ ಲೋಕಸಭೆಗೆ ಆಯ್ಕೆಯಾದ ನೂತನ ಸಂಸದರಿಗೆ ಸರ್ಕಾರಿ ನಿವಾಸ ಕಲ್ಪಿಸುವುದು ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿದೆ.