ಬೆಂಗಳೂರು [ಜೂ.29] :  ಬರುವ ಜುಲೈ 11 ಅಥವಾ 12ರಂದು ಪರಿಶಿಷ್ಟಸಮುದಾಯದ ಬೃಹತ್‌ ಸಮಾವೇಶ ಆಯೋಜಿಸಿ, ಆ ಸಮಾವೇಶದಲ್ಲೇ ಜೆಡಿಎಸ್‌ನ ನೂತನ ರಾಜ್ಯಾಧ್ಯಕ್ಷರನ್ನು ಘೋಷಣೆ ಮಾಡಲು ಪಕ್ಷದ ವರಿಷ್ಠ ನಾಯಕ ಎಚ್‌.ಡಿ. ದೇವೇಗೌಡರು ನಿರ್ಧರಿಸಿದ್ದಾರೆ.

ಸಕಲೇಶಪುರ ಶಾಸಕ ಹಾಗೂ ಮಾಜಿ ಸಚಿವ ಎಚ್‌.ಕೆ. ಕುಮಾರಸ್ವಾಮಿ ಅವರ ಹೆಸರು ಅಧ್ಯಕ್ಷ ಸ್ಥಾನಕ್ಕೆ ಪ್ರಮುಖವಾಗಿ ಕೇಳಿಬಂದಿದ್ದು, ಅವರೊಂದಿಗೆ ಮಾಜಿ ಶಾಸಕ ತಿಮ್ಮರಾಯಪ್ಪ ಅವರ ಹೆಸರನ್ನೂ ದೇವೇಗೌಡರು ಪ್ರಸ್ತಾಪಿಸುವ ಮೂಲಕ ಕುತೂಹಲ ಮೂಡಿಸಿದ್ದಾರೆ.

ಶುಕ್ರವಾರ ಪಕ್ಷದ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರನ್ನು ಅಧ್ಯಕ್ಷರನ್ನಾಗಿಸಬೇಕು ಎಂಬುದರ ಬಗ್ಗೆ ಇದುವರೆಗೆ ಅಂತಿಮ ನಿರ್ಧಾರ ಕೈಗೊಂಡಿಲ್ಲ. ಪಕ್ಷದ ಮುಖಂಡರೊಂದಿಗೆ ಕುಳಿತು ಸಮಾಲೋಚನೆ ನಡೆಸಬೇಕಿದೆ. ಬರುವ ಜು.11 ಅಥವಾ 12ರಂದು ಪರಿಶಿಷ್ಟವರ್ಗದ ಸಮಾವೇಶ ನಡೆಸಿ ಅಲ್ಲಿಯೇ ಘೋಷಣೆ ಮಾಡಲಾಗುವುದು ಎಂದು ತಿಳಿಸಿದರು.

ಹಾಲಿ ಶಾಸಕ ಎಚ್‌.ಕೆ. ಕುಮಾರಸ್ವಾಮಿ ಅವರು ರಾಜ್ಯಾಧ್ಯಕ್ಷರಾಗುವರೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಪಕ್ಷದ ಮುಖಂಡರಾಗಿರುವ ತಿಮ್ಮರಾಯಪ್ಪ ಕೂಡ ಅರ್ಹರಿದ್ದಾರೆ. ಈ ಬಗ್ಗೆ ಯಾವುದೇ ತೀರ್ಮಾನ ಕೈಗೊಂಡಿಲ್ಲ ಎಂದರು.

ಈ ನಡುವೆ ಶಾಸಕ ಎಚ್‌.ಕೆ. ಕುಮಾರಸ್ವಾಮಿ ಅವರನ್ನು ತಮ್ಮ ನಿವಾಸಕ್ಕೆ ಕರೆಸಿಕೊಂಡಿದ್ದ ದೇವೇಗೌಡರು ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಚರ್ಚೆ ನಡೆಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇವೇಗೌಡರು ರಾಜ್ಯಾಧ್ಯಕ್ಷ ಸ್ಥಾನದ ಬಗ್ಗೆ ನನ್ನ ಬಳಿ ಕೂಡ ಸಮಾಲೋಚನೆ ನಡೆಸಿದರು. ರಾಜ್ಯಾಧ್ಯಕ್ಷ ಹುದ್ದೆ ಕೊಟ್ಟರೆ ಸಮರ್ಥವಾಗಿ ನಿಭಾಯಿಸುತ್ತೇನೆ. ಅಂತಿಮ ಆಯ್ಕೆ ದೇವೇಗೌಡರಿಗೆ ಬಿಟ್ಟದ್ದು ಎಂದು ಹೇಳಿದರು.