ಬೆಂಗಳೂರು[ಆ.26]: ಹಳೆ ಮೈಸೂರಿನಲ್ಲಿ ಅಸ್ತಿತ್ವ ಉಳಿಸಿಕೊಳ್ಳಲು ಹೆಣಗಾಡುತ್ತಿರುವ ಜೆಡಿಎಸ್‌ ನಾಯಕರು ಕಾಂಗ್ರೆಸ್‌ ನಾಯಕರನ್ನು ತೊಂದರೆಗೆ ಸಿಲುಕಿಸಲು ಸುಳ್ಳು ಹೇಳಿಕೆ ನೀಡುತ್ತಿದ್ದಾರೆ. ಸಿದ್ದರಾಮಯ್ಯ ಮೊದಲ ವೈರಿಯಾಗಿದ್ದರೆ ಕಾಂಗ್ರೆಸ್‌ನೊಂದಿಗೆ ಸಂಬಂಧ ಬೇಡ ಎಂದು ಎಚ್‌.ಡಿ. ಕುಮಾರಸ್ವಾಮಿ ಮೊದಲೇ ಹೇಳಬೇಕಿತ್ತು ಎಂದು ಮಾಜಿ ಸಚಿವ ಎನ್‌. ಚೆಲುವರಾಯಸ್ವಾಮಿ ತಿರುಗೇಟು ನೀಡಿದ್ದಾರೆ.

ಅಲ್ಲದೆ, ಜೆಡಿಎಸ್‌ ನಾಯಕರ ಸುಳ್ಳು ಆರೋಪಗಳಿಗೆ ಸಿದ್ದರಾಮಯ್ಯ ಅವರು ಮಾತ್ರ ಉತ್ತರ ನೀಡಿದರೆ ಸಾಕಾಗುವುದಿಲ್ಲ. ಕೂಡಲೇ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಅವರು ಹಿರಿಯ ನಾಯಕರ ಸಭೆ ಕರೆದು ಪ್ರತಿತಂತ್ರ ರೂಪಿಸಬೇಕು. ಇಲ್ಲದಿದ್ದರೆ ಜೆಡಿಎಸ್‌ನ ಈ ಸುಳ್ಳು ಹೇಳಿಕೆಗಳು ಹಳೆ ಮೈಸೂರು ಭಾಗದಲ್ಲಿ ವ್ಯತಿರಿಕ್ತ ಪರಿಣಾಮ ಬೀರುತ್ತವೆ ಎಂದೂ ಎಚ್ಚರಿಕೆ ನೀಡಿದ್ದಾರೆ.

HDK ನನ್ನ ಶತ್ರುವಿನಂತೆ ನೋಡಿದ್ದೇ ಸಮಸ್ಯೆಗೆ ಕಾರಣ : ಸಿದ್ದರಾಮಯ್ಯ

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದಿನಿಂದ ಚೂರಿ ಹಾಕುವುದು ಸಿದ್ದರಾಮಯ್ಯ ಅವರಿಗೆ ಗೊತ್ತಿಲ್ಲ. ಹಳೆ ಮೈಸೂರು ಭಾಗದಲ್ಲಿ ಕಳೆದುಹೋಗುತ್ತಿರುವ ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಜೆಡಿಎಸ್‌ ಇಂತಹ ಷಡ್ಯಂತ್ರಗಳನ್ನು ಮಾಡುತ್ತಿದೆ. ಜೆಡಿಎಸ್‌ ಹಳೆ ಮೈಸೂರು ಭಾಗದ 25 ಕ್ಷೇತ್ರಗಳಲ್ಲಿ ಬಿಜೆಪಿಯಿಂದ ದುರ್ಬಲ ಅಭ್ಯರ್ಥಿ ಹಾಕಿಸಿಕೊಂಡು ವಿಧಾನಸಭೆ ಚುನಾವಣೆಯಲ್ಲಿ ಗೆದ್ದಿತ್ತು. ಬಳಿಕ ಕಾಂಗ್ರೆಸ್‌ ಜತೆ ಸರ್ಕಾರ ರಚನೆ ಮಾಡಿತು. ಇದು ಬಿಜೆಪಿಗೆ ಮಾಡಿದ ಮೋಸ ಅಲ್ಲವೇ ಎಂದು ಅವರು ಪ್ರಶ್ನಿಸಿದರು.

ಜೆಡಿಎಸ್‌ನವರಿಗೆ ಯಾರ ಮೇಲೂ ನಂಬಿಕೆ ಇಲ್ಲ. ಹಾಗಾದರೆ 120 ಸೀಟು ಜೆಡಿಎಸ್‌ ಗೆಲ್ಲುವ ತನಕ ಸುಮ್ಮನೆ ಕುಳಿತುಕೊಳ್ಳಬೇಕು. ಜೆಡಿಎಸ್‌ಗೆ ಬೆಳಗಾವಿ, ಮಂಗಳೂರು ಭಾಗದಲ್ಲಿ ಬೆಲೆ ಇಲ್ಲ. ಹಳೆ ಮೈಸೂರು ಭಾಗದಲ್ಲೂ ಅಸ್ತಿತ್ವ ಕಳೆದುಕೊಳ್ಳುತ್ತಿದೆ. ಈ ಭಾಗದಲ್ಲಿ ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ವಿನಾಕಾರಣ ಸುಳ್ಳು ಆರೋಪ ಮಾಡುತ್ತಿದ್ದಾರೆ. ನಿಮ್ಮ ಮೂರು ಮಂದಿ ಶಾಸಕರನ್ನು ನಿಮ್ಮ ಬಳಿ ಹಿಡಿದಿಟ್ಟುಕೊಳ್ಳಲು ಆಗಲಿಲ್ಲ. 80 ಜನ ಶಾಸಕರು ಇರುವ ನಮ್ಮ ಬಗ್ಗೆ ಮಾತನಾಡುತ್ತೀರಾ ಎಂದು ತರಾಟೆಗೆ ತೆಗೆದುಕೊಂಡರು.

'ಸಿದ್ದು ಮೊದಲ ವೈರಿಯಾಗಿದ್ದರೆ ಎಚ್‌ಡಿಕೆ ಮೊದಲೇ ಹೇಳಬೇಕಿತ್ತು'

ದೇವೇಗೌಡ ಒಕ್ಕಲಿಗರನ್ನು ಬೆಳೆಸಿಲ್ಲ:

ಮಾಜಿ ಪ್ರಧಾನಮಂತ್ರಿ ಎಚ್‌.ಡಿ. ದೇವೇಗೌಡರು ಒಬ್ಬ ಒಕ್ಕಲಿಗ ಸಮುದಾಯದ ವ್ಯಕ್ತಿಯನ್ನೂ ಬೆಳೆಸಿಲ್ಲ. ತಮ್ಮ ಕುಟುಂಬದ ಸದಸ್ಯರ ಹೊರತಾಗಿ ಸಮುದಾಯದ ಬೇರೆ ಯಾವುದಾದರೂ ಒಬ್ಬ ವ್ಯಕ್ತಿಯನ್ನು ಬೆಳೆಸಿದ್ದರೆ ತೋರಿಸಿ. ಹೀಗಿದ್ದರೂ ಒಕ್ಕಲಿಗ ಸಮುದಾಯ ನಿಮಗೆ ಗೌರವ ಕೊಟ್ಟಿದೆ, ಅದನ್ನಾದರೂ ಉಳಿಸಿಕೊಳ್ಳಿ ಎಂದು ತೀಕ್ಷ$್ಣವಾಗಿ ಹೇಳಿದರು.

ಬಿಜೆಪಿಯನ್ನು ಈಗ ಜೆಡಿಎಸ್‌ ನೆನಪಿಸಿಕೊಳ್ಳುತ್ತಿದೆ. ಏಕೆಂದರೆ, ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದೆ ಎಂಬ ಭಯ. ಸರ್ಕಾರ ಪತನಕ್ಕೆ ಕುಮಾರಸ್ವಾಮಿ ಅವರ ನಡತೆ ಕಾರಣವೇ ಹೊರತು ಸಿದ್ದರಾಮಯ್ಯ ಅವರಲ್ಲ.