ವಿಶ್ವಸಂಸ್ಥೆಯ ಲೆಕ್ಕದ ಪ್ರಕಾರ ಮೊನ್ನೆಯ ಶನಿವಾರಕ್ಕೆ ಭಾರತದ ಜನಸಂಖ್ಯೆ 1,36,87,98,239. ಇದು ಜಗತ್ತಿನ ಒಟ್ಟು ಜನಸಂಖ್ಯೆಯ ಶೇ.17.71ರಷ್ಟು! ಜಗತ್ತಿನಲ್ಲೇ ಎರಡನೇ ಅತಿಹೆಚ್ಚು ಜನಸಂಖ್ಯೆ ಹೊಂದಿರುವ ದೇಶ ನಮ್ಮದು.

ಇದರಲ್ಲಿ ನಗರ ಪ್ರದೇಶಗಳ ಜನಸಂಖ್ಯೆ ಶೇ.34.50. ದೇಶದ ಒಟ್ಟು ಜನಸಂಖ್ಯೆಯಲ್ಲಿ ಕೆಲಸ ಮಾಡುವ ವಯೋಮಾನದ (15ರಿಂದ 64) ಜನರ ಸಂಖ್ಯೆ ಕೆಲಸ ಮಾಡದ ಜನರ (14 ವರ್ಷಕ್ಕಿಂತ ಕೆಳಗಿನವರು ಹಾಗೂ 65 ವರ್ಷಕ್ಕಿಂತ ಮೇಲಿನವರು) ಸಂಖ್ಯೆಗಿಂತ ಹೆಚ್ಚಿದೆ. ಸದ್ಯ ನಮ್ಮ ದೇಶದಲ್ಲಿ ಕೆಲಸ ಮಾಡುವ ಜನರ ಸರಾಸರಿ ವಯಸ್ಸು 27.1 ವರ್ಷ.

2016ರಲ್ಲಿ ನಮ್ಮ ದೇಶದಲ್ಲಿ 30 ಕೋಟಿಗಿಂತ ಹೆಚ್ಚು ಜನರು 15ಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದರು. 2030ರ ವರೆಗೆ ಪ್ರತಿ ತಿಂಗಳು ಹತ್ತು ಲಕ್ಷ ಭಾರತೀಯರು 18 ವರ್ಷ ದಾಟುತ್ತಾರೆ. ಹೀಗೆ ಬೃಹತ್‌ ಪ್ರಮಾಣದಲ್ಲಿ ಹೆಚ್ಚುತ್ತಿರುವ ಯುವಕರ ಸಂಖ್ಯೆಯಿಂದಾಗಿ ಮೊದಲೇ ಒತ್ತಡದಲ್ಲಿರುವ ದೇಶದ ಶಿಕ್ಷಣ ವ್ಯವಸ್ಥೆಯ ಮೇಲೆ ಇನ್ನಷ್ಟುಭಾರ ಬೀಳುತ್ತಿದೆ.

ಹೀಗಾಗಿ ತಕ್ಕಮಟ್ಟಿಗೆ ಹಣವುಳ್ಳವರು ಉತ್ತಮ ಶಿಕ್ಷಣಕ್ಕಾಗಿ ವಿದೇಶಕ್ಕೆ ಹೋಗುವುದು ಹೆಚ್ಚುತ್ತಿದೆ. ಪ್ರಾಥಮಿಕ ಅಥವಾ ಪ್ರೌಢಶಿಕ್ಷಣದ ಹಂತವನ್ನೇ ದಾಟದ ಅಥವಾ ವೃತ್ತಿಪರ ತರಬೇತಿಗಳಿಗೆ ಸೇರ್ಪಡೆಯಾಗುವ ಯುವಕರ ಸಂಖ್ಯೆ ಕೂಡ ನಮ್ಮಲ್ಲಿ ಹೆಚ್ಚೇ ಇದೆಯಾದರೂ ಉನ್ನತ ಶಿಕ್ಷಣಕ್ಕಾಗಿ ವಿದೇಶಕ್ಕೆ ಹೋಗುವವರಿಗೆ ಕೊರತೆಯೇನೂ ಇಲ್ಲ.

90 ದೇಶದಲ್ಲಿ ಭಾರತೀಯ ವಿದ್ಯಾರ್ಥಿಗಳು

ನಮ್ಮ ದೇಶದಲ್ಲೇ ವಿಶ್ವದರ್ಜೆಯ ಸಾಕಷ್ಟುವಿಶ್ವವಿದ್ಯಾಲಯಗಳಿವೆ. ಆದರೂ ಶಿಕ್ಷಣಕ್ಕಾಗಿ ವಿದೇಶಕ್ಕೆ ಹೋಗುವವರ ಲೆಕ್ಕದಲ್ಲಿ ಭಾರತವು ಸದ್ಯ ಜಗತ್ತಿನಲ್ಲೇ ಎರಡನೇ ಸ್ಥಾನದಲ್ಲಿದೆ. ದೇಶದಲ್ಲಿ ಮಧ್ಯಮ ವರ್ಗದ ಕುಟುಂಬಗಳ ಸಂಖ್ಯೆ ಹೆಚ್ಚುತ್ತಿರುವುದರಿಂದ ಹೀಗೆ ವ್ಯಾಸಂಗಕ್ಕಾಗಿ ವಿದೇಶಕ್ಕೆ ಹೋಗುವವರ ಸಂಖ್ಯೆಯೂ ಹೆಚ್ಚುತ್ತಾ ಹೋಗುತ್ತದೆ.

ವಿದೇಶಾಂಗ ಸಚಿವಾಲಯದ ಬಳಿಯಿರುವ ಅಂಕಿಅಂಶಗಳ ಪ್ರಕಾರ ಜಗತ್ತಿನ 90 ದೇಶಗಳಲ್ಲಿ 7,52,725 ಭಾರತೀಯ ಯುವಕರು ಸದ್ಯ ವ್ಯಾಸಂಗ ಮಾಡುತ್ತಿದ್ದಾರೆ. ವಿಜ್ಞಾನ ಮತ್ತು ತಂತ್ರಜ್ಞಾನ ಇವರ ಫೇವರಿಟ್‌ ಕೋರ್ಸುಗಳು. ಹೆಚ್ಚಿನ ಭಾರತೀಯರು ವಿದೇಶಿ ವ್ಯಾಸಂಗಕ್ಕಾಗಿ ಆಯ್ಕೆ ಮಾಡಿಕೊಳ್ಳುವುದು ಅಮೆರಿಕವನ್ನು.

ಕೆನಡಾ ಮತ್ತು ಆಸ್ಪ್ರೇಲಿಯಾ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲಿವೆ. ಆರ್‌ಬಿಐ ಪ್ರಕಾರ ಕಳೆದ ಮೂರು ಹಣಕಾಸು ವರ್ಷದ ಅವಧಿಯಲ್ಲಿ ವಿದೇಶಿ ವ್ಯಾಸಂಗಕ್ಕಾಗಿ ಭಾರತೀಯ ಯುವಕರು ಮಾಡುವ ಖರ್ಚು ಶೇ.44ರಷ್ಟುಹೆಚ್ಚಾಗಿದೆ. ಆದರೆ, ಭಾರತದಲ್ಲಿ ಓದುತ್ತಿರುವ ವಿದೇಶಿ ವಿದ್ಯಾರ್ಥಿಗಳು ಮಾಡುವ ಖರ್ಚು ಕಳೆದ ಎರಡು ಹಣಕಾಸು ವರ್ಷಗಳಲ್ಲಿ ಶೇ.14ರಷ್ಟುಕಡಿಮೆಯಾಗಿದೆ.

ಖಾಸಗಿ ಶಿಕ್ಷಣ ಸಂಸ್ಥೆಗಳ ಹೊಸ ತಂತ್ರ

ನಮ್ಮ ದೇಶದಲ್ಲೇ ಉನ್ನತ ಶಿಕ್ಷಣದ ಗುಣಮಟ್ಟಹೆಚ್ಚಿಸಲು ಭಾರತ ಸರ್ಕಾರ ಸಾಕಷ್ಟುಕ್ರಮ ಕೈಗೊಳ್ಳುತ್ತಿದ್ದರೂ ಹೆಚ್ಚೆಚ್ಚು ಭಾರತೀಯ ವಿದ್ಯಾರ್ಥಿಗಳು ವಿದೇಶದಲ್ಲಿ ಓದುವುದಕ್ಕೇ ಆದ್ಯತೆ ನೀಡುವಂತೆ ಕಾಣಿಸುತ್ತಿದೆ. ಇದಕ್ಕೆ ವ್ಯತಿರಿಕ್ತವಾಗಿ ಭಾರತ ಸರ್ಕಾರ ಇತ್ತೀಚೆಗೆ ಆರು ವಿಶ್ವವಿದ್ಯಾಲಯಗಳಿಗೆ Institute of Eminence ಮಾನ್ಯತೆ ನೀಡಿ, ಅಲ್ಲಿ ಶೇ.25ರಷ್ಟುವಿದೇಶಿ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲು ಅನುಮತಿ ನೀಡಿದೆ. ಆದರೂ ಭಾರತಕ್ಕೆ ವ್ಯಾಸಂಗಕ್ಕೆಂದು ಬರುವ ವಿದೇಶಿ ವಿದ್ಯಾರ್ಥಿಗಳ ಸಂಖ್ಯೆ ಇಳಿಕೆಯಾಗಿದೆ.

ಈ ವಿಷಯದಲ್ಲಿ ಖಾಸಗಿ ವಿಶ್ವವಿದ್ಯಾಲಯಗಳು ಹೊಸ ರೀತಿಯ ವ್ಯವಸ್ಥೆಯೊಂದನ್ನು ಮಾಡಿಕೊಂಡಿವೆ. ಅವು ಪ್ರತಿಷ್ಠಿತ ವಿದೇಶಿ ವಿಶ್ವವಿದ್ಯಾಲಯಗಳ ಜೊತೆ ಒಪ್ಪಂದ ಮಾಡಿಕೊಳ್ಳುತ್ತವೆ. ನಂತರ ತಮ್ಮ ವಿಶ್ವವಿದ್ಯಾಲಯದಲ್ಲಿ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ವಿದೇಶಿ ವಿಶ್ವವಿದ್ಯಾಲಯಕ್ಕೆ ಹೋಗಿ ಅಲ್ಪಾವಧಿ ಕೋರ್ಸ್‌ ಅಧ್ಯಯನ ಮಾಡಲು ಅವಕಾಶ ಮಾಡಿಕೊಡುತ್ತವೆ. ಹಾಗೆ ಅಧ್ಯಯನ ಮಾಡಿದ ವಿದ್ಯಾರ್ಥಿಗಳಿಗೆ ವಿದೇಶಿ ವಿಶ್ವವಿದ್ಯಾಲಯದ್ದೇ ಪದವಿಯನ್ನು ಕೊಡಿಸುತ್ತವೆ.

ಇದಕ್ಕೆ Best of Both worlds ಕಾನ್ಸೆಪ್ಟ್‌ ಎನ್ನುತ್ತಾರೆ. ನಮ್ಮ ದೇಶದಲ್ಲಿ ಇನ್ನೂ ಇದು ಶೈಶವಾವಸ್ಥೆಯಲ್ಲಿದ್ದರೂ ವಿದೇಶದಲ್ಲಿ ಓದಬೇಕು ಎಂಬ ಸಾಮಾನ್ಯ ಭಾರತೀಯನ ಮನಸ್ಥಿತಿಯನ್ನು ಇಲ್ಲಿನ ಸರ್ಕಾರ ಕೂಡ ಒಪ್ಪಿಕೊಳ್ಳುವುದು ಅಗತ್ಯವೆಂಬುದನ್ನು ಇದು ಸೂಚಿಸುತ್ತದೆ. ಅದಕ್ಕೆ ಒಳ್ಳೆಯ ಭವಿಷ್ಯವೂ ಇದ್ದಂತಿದೆ.

ಭಾರತದಲ್ಲಿ ವಿದೇಶಿ ವಿವಿ ಕ್ಯಾಂಪಸ್‌

ಈ ಹಂತದಲ್ಲಿ ಭಾರತ ಏನು ಮಾಡಬೇಕು? ನಾಲೆಡ್ಜ್‌ ಸಿಟಿ ಅಥವಾ ಜ್ಞಾನ ನಗರಿ ಎಂಬ ಕಾನ್ಸೆಪ್ಟನ್ನು ಉತ್ತೇಜಿಸಬೇಕು. ಇದಕ್ಕಾಗಿ ದೊಡ್ಡ ಸಂಖ್ಯೆಯಲ್ಲಿ ಅತ್ಯುತ್ತಮ ವಿದೇಶಿ ವಿಶ್ವವಿದ್ಯಾಲಯಗಳನ್ನು, ವೃತ್ತಿಪರ ತರಬೇತಿ ಕೇಂದ್ರಗಳನ್ನು, ಇ-ಕಲಿಕೆ ವ್ಯವಸ್ಥೆಯನ್ನು ಕಲ್ಪಿಸುವ ಸಂಸ್ಥೆಗಳನ್ನು ಹಾಗೂ ಜಗತ್ತಿನ ಬೇರೆ ಬೇರೆ ಕಡೆ ಇರುವ ಅತ್ಯುತ್ತಮ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರಗಳನ್ನು ಭಾರತಕ್ಕೆ ಆಹ್ವಾನಿಸಬೇಕು.

ಈ ಸಂಸ್ಥೆಗಳು ಭಾರತದ ಬೇರೆ ಬೇರೆ ನಗರಗಳಲ್ಲಿ ತಮ್ಮ ಕ್ಯಾಂಪಸ್‌ ತೆರೆಯಬೇಕು. ಅವುಗಳಿಗೆ ಆಯಾ ಶಿಕ್ಷಣ ಸಂಸ್ಥೆಗಳ ಶಾಖೆಯ ಮಾನ್ಯತೆಯಿರಬೇಕು. ಅಂದರೆ, ಭಾರತದಲ್ಲಿ ಸ್ಥಾಪನೆಯಾಗುವ ಈ ಕೇಂದ್ರಗಳು ತಮ್ಮ ದೇಶದ ಮಾತೃ ಸಂಸ್ಥೆಯಲ್ಲಿರುವ ಶೈಕ್ಷಣಿಕ ಕೋರ್ಸ್‌, ಸಿಲೆಬಸ್‌, ಶಿಕ್ಷಣ ವಿಧಾನ, ಪದವಿ, ಮಾನ್ಯತೆ ಮುಂತಾದವುಗಳನ್ನು ಇಲ್ಲೇ ಹೊಂದಿರಬೇಕು. ಒಟ್ಟಿನಲ್ಲಿ ಈ ಕೇಂದ್ರಗಳಲ್ಲಿ ಶಿಕ್ಷಣ ಪಡೆಯುವುದಕ್ಕೆ ಇವುಗಳ ಮಾತೃ ಸಂಸ್ಥೆಯಲ್ಲಿ ಓದುವುದಕ್ಕಿರುವಷ್ಟೇ ಬೆಲೆಯಿರಬೇಕು.

ಈ ಜ್ಞಾನ ನಗರಿಗಳು ಸ್ಥಳೀಯ ಮಟ್ಟದಲ್ಲಿ ಅತ್ಯುತ್ತಮ ಮಾನವ ಸಂಪನ್ಮೂಲ ಬಂಡವಾಳವನ್ನು ಸೃಷ್ಟಿಸುವ ತಾಣಗಳಾಗಬೇಕು. ಇಲ್ಲಿ ವಿಶ್ವ ದರ್ಜೆಯ ಮೂಲಸೌಕರ್ಯಗಳೂ, ಸೇವೆಗಳೂ ಲಭ್ಯವಿರಬೇಕು. ಭಾರತದಲ್ಲಿ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವ ವಿದೇಶಿ ಸಂಸ್ಥೆಗಳಿಗೆ ಇಲ್ಲಿನ ಕೇಂದ್ರಗಳ ಸಂಪೂರ್ಣ ಮಾಲಿಕತ್ವ ನೀಡಬೇಕು.

ಅವುಗಳಿಗೆ ಪೂರ್ಣ ಪ್ರಮಾಣದ ತೆರಿಗೆ ವಿನಾಯ್ತಿ ನೀಡಬೇಕು. ವಿದೇಶಿ ಶಿಕ್ಷಣ ಸಂಸ್ಥೆಗಳು ಇಲ್ಲಿ ಗಳಿಸುವ ಆದಾಯ ಹಾಗೂ ಲಾಭವನ್ನು ಪೂರ್ಣ ಪ್ರಮಾಣದಲ್ಲಿ ತಮ್ಮ ದೇಶಕ್ಕೆ ಕೊಂಡೊಯ್ಯಲು ಬಿಡಬೇಕು. ಅವುಗಳಿಗೆ ವೀಸಾ ನೀಡುವ ಪ್ರಕ್ರಿಯೆಯನ್ನು ಸರಳ ಹಾಗೂ ಸುಲಭಗೊಳಿಸಬೇಕು.

ಈ ಜ್ಞಾನ ನಗರಿಗಳು ಹೇಗಿರಬೇಕು ಅಂದರೆ, ಇವುಗಳಿಗೆ ಗುಣಮಟ್ಟದ ಸಾಮಾಜಿಕ ಬಂಡವಾಳ ಸಿಗುವಂತೆ ನೋಡಿಕೊಳ್ಳಬೇಕು. ಅಂದರೆ ಇಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಸುಲಭವಾಗಿ ವಸತಿ ಸೌಕರ್ಯಗಳು ಸಿಗಬೇಕು. ಇಲ್ಲಿ ಉತ್ತಮ ಶಾಲೆಗಳು, ಆರೋಗ್ಯ ಕೇಂದ್ರಗಳು, ಮನರಂಜನಾ ಸೌಕರ್ಯಗಳು ಹಾಗೂ ಇನ್ನೆಲ್ಲಾ ಅಗತ್ಯ ಮೂಲಸೌಕರ್ಯಗಳಿರಬೇಕು.

ಇವುಗಳನ್ನು ಕಲ್ಪಿಸಿದರೆ ಉತ್ತಮ ಶಿಕ್ಷಕರು ಈ ನಗರಗಳತ್ತ ಆಕರ್ಷಿತರಾಗುತ್ತಾರೆ. ಜ್ಞಾನ ನಗರಿಗಳು ಸೃಷ್ಟಿಯಾಗಲು ಗುಣಮಟ್ಟದ ಶಿಕ್ಷಕರು ಬಹುದೊಡ್ಡ ಅಗತ್ಯ. ಅವರು ಬಂದರೆ ಶಿಕ್ಷಣದಲ್ಲಿ ಗುಣಮಟ್ಟಬರುತ್ತದೆ. ಆಗ ಆ ಕ್ಷೇತ್ರಕ್ಕೆ ಬಂಡವಾಳವೂ ಹರಿದು ಬರುತ್ತದೆ.

ಬೆಂಗಳೂರಲ್ಲೇ ಏಕಾಗಬಾರದು?

ಭಾರತದಲ್ಲಿ ಇಂತಹ ಹಲವಾರು ಜ್ಞಾನ ನಗರಿಗಳನ್ನು ಸ್ಥಾಪಿಸಲು ಸಾಕಷ್ಟುಅವಕಾಶಗಳಿವೆ. ಅಂತಹ ನಗರಗಳಲ್ಲಿ ಬೆಂಗಳೂರು ಕೂಡ ಒಂದು. ಇಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಶಿಕ್ಷಣಕ್ಕೆ ಅತ್ಯುತ್ತಮ ಪರಿಸರವಿದೆ. ಹೀಗಾಗಿ ಈಗಾಗಲೇ ಇಲ್ಲಿ ಸಾಕಷ್ಟುಬಹುರಾಷ್ಟ್ರೀಯ ಕಂಪನಿಗಳು ಬಂಡವಾಳ ಹೂಡಿಕೆ ಮಾಡಿವೆ. ಇಲ್ಲಿ ಎಂಎನ್‌ಸಿಗಳ ಸಂಶೋಧನೆ ಮತ್ತು ಅಭಿವೃದ್ಧಿ ಘಟಕಗಳು ಸ್ಥಾಪನೆಯಾಗಿವೆ.

ಕೆಲ ಕಂಪನಿಗಳು ಇಲ್ಲೇ ಉತ್ಪಾದನಾ ಘಟಕ ಅಥವಾ ಸೇವಾ ಘಟಕಗಳನ್ನೂ ಹೊಂದಿವೆ. ಬೆಂಗಳೂರಿಗೆ ಭಾರತದ ‘ವಿಜ್ಞಾನ ರಾಜಧಾನಿ’ ‘ಸ್ಟಾರ್ಟಪ್‌ ಕ್ಯಾಪಿಟಲ್‌’ ‘ಮಾಹಿತಿ ತಂತ್ರಜ್ಞಾನ ನಗರಿ’ ‘ಜೈವಿಕ ತಂತ್ರಜ್ಞಾನ ರಾಜಧಾನಿ’ ಮುಂತಾದ ಹೆಗ್ಗಳಿಕೆಗಳಿವೆ. ಹೀಗಾಗಿ ಈ ನಗರಕ್ಕೆ ಭಾರತದ ‘ಜ್ಞಾನ ರಾಜಧಾನಿ’ಯಾಗುವ ಅರ್ಹತೆಯೂ ಸಹಜವಾಗಿಯೇ ಇದೆ. ತತ್ಪರಿಣಾಮವಾಗಿ, ದೇಶದ ಮೊದಲ ‘ಜ್ಞಾನ ನಗರಿ’ ಬೆಂಗಳೂರಿನಲ್ಲೇ ಸ್ಥಾಪನೆಯಾಗಬಹುದು.

ದೇಶದ ಬೇರೆ ಬೇರೆ ಭಾಗಗಳಲ್ಲಿ ಜ್ಞಾನ ನಗರಿಗಳನ್ನು ಅಭಿವೃದ್ಧಿಪಡಿಸಲು ದೂರದೃಷ್ಟಿಯ ಅಗತ್ಯವಿದೆ. ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಸಚಿವಾಲಯವು ಅದಕ್ಕೊಂದು ವಿಶೇಷೋದ್ದೇಶ ವಾಹಕ (ಎಸ್‌ಪಿವಿ) ಸ್ಥಾಪಿಸಬಹುದು. ಸಂಬಂಧಪಟ್ಟರಾಜ್ಯ ಸರ್ಕಾರಗಳ ಜೊತೆ ಸೇರಿ ಪಾಲುದಾರಿಕೆಯಲ್ಲಿ ಈ ಕೆಲಸ ಮಾಡಬಹುದು.

ರಾಷ್ಟ್ರೀಯ ಹೂಡಿಕೆ ಮತ್ತು ಉತ್ಪಾದನಾ ವಲಯಗಳ (ಎನ್‌ಐಎಂಝಡ್‌) ಜೊತೆ ಸೇರಿ ಇದನ್ನು ಮುನ್ನಡೆಸಿದರೆ ವಿದೇಶಿ ಶಿಕ್ಷಣ ಸಂಸ್ಥೆಗಳಲ್ಲಿ ಓದಬೇಕೆಂಬ ಭಾರತೀಯ ಯುವಕರ ಆಶೋತ್ತರಗಳನ್ನೂ ಈಡೇರಿಸಿದಂತಾಗುತ್ತದೆ. ಪ್ರಧಾನಿ ನರೇಂದ್ರ ಮೋದಿಯವರ ಅದ್ಭುತ ನಾಯಕತ್ವದಲ್ಲಿ ಇದು ಖಂಡಿತ ಸಾಧ್ಯ. ಏಕೆಂದರೆ ಅವರಿಗೆ ಬೇರೆ ಬೇರೆ ದೇಶಗಳ ನಾಯಕರ ಜೊತೆ ಉತ್ತಮ ಸಂಬಂಧವಿದೆ. ಅವರು ಮನಸ್ಸು ಮಾಡಿದರೆ ಈ ವರ್ಷವೇ ದೇಶದ ಮೊದಲ ಜ್ಞಾನ ನಗರಿ ಕರ್ನಾಟಕದಲ್ಲಿ ತಲೆಯೆತ್ತಬಹುದು.

- ಎಸ್ ಎಂ ಕೃಷ್ಣ, ಮಾಜಿ ವಿದೇಶಾಂಗ ಸಚಿವ