ಮಾಲ್ಡೀವ್ಸ್ ಮಾಜಿ ಉಪಾಧ್ಯಕ್ಷ ಭಾರತಕ್ಕೆ ಬಂದಿದ್ದು ರಾಜಕೀಯ ಆಶ್ರಯ ಕೋರಿ| ಕೋರಿಕೆ ತಿರಸ್ಕರಿಸಿ ಮರಳಿ ಕಳುಹಿಸಿದ ಭಾರತ
ತೂತ್ತುಕುಡಿ[ಆ.04]: ಯಾವುದೇ ಪೂರ್ವ ಮಾಹಿತಿ ನೀಡದೆ ಜಲ ಮಾರ್ಗವಾಗಿ ಗುರುವಾರ ಭಾರತಕ್ಕೆ ಬಂದಿದ್ದ, ಮಾಲ್ಡೀವ್ಸ್‌ನ ಮಾಜಿ ಉಪಾಧ್ಯಕ್ಷ ಅಹ್ಮದ್ ಅದೀಬ್ ಅಬ್ದುಲ್ ಗಫೂರ್‌ನನ್ನು ಭಾರತ ಮರಳಿ ಕಳುಹಿಸಿದೆ. ಅವರು ರಾಜಕೀಯ ಆಶ್ರಯ ಕೋರಿ ಭಾರತಕ್ಕೆ ಬಂದಿದ್ದರು, ಆದರೆ ಅವರ ಮನವಿಯನ್ನು ತಿರಸ್ಕರಿಸಿ ಮರಳಿ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಯಾವುದೇ ದಾಖಲೆಗಳು ಇಲ್ಲದೆ ಒಂಭತ್ತು ಸಿಬ್ಬಂದಿಗಳೊಂದಿಗೆ ಸರಕು ಹಡಗಿನಲ್ಲಿ ಅಕ್ರಮವಾಗಿ ಭಾರತಕ್ಕೆ ಪ್ರವೇಶ ಮಾಡಿದ್ದ ಅದೀಬ್ರನ್ನು ಹಡಗಿನಿಂದ ಇಳಿಯಲು ಅವಕಾಶ ಕೊಡದೇ ವಿಚಾರಣೆ ನಡೆಸಲಾಗಿತ್ತು. ವಿವಿಧ ಕೇಂದ್ರ ತನಿಖಾ ಸಂಸ್ಥೆಗಳೂ ಅದೀಬ್ರನ್ನು ತೀವ್ರ ವಿಚಾರಣೆಗೆ ಗುರಿಪಡಿಸಿತ್ತು.
ಅದೀಬ್ರನ್ನು ಅದೇ ಹಡಗಿನಲ್ಲಿ ಅವರನ್ನು ಹಿಂದುರುಗಿಸಲಾಗಿದ್ದು, ಶುಕ್ರವಾರ ಮಧ್ಯರಾತ್ರಿ ಅವರು ತೂತ್ತುಕುಡಿಯಿಂದ ಮಾಲ್ಡೀವ್ಸ್ಗೆ ಪ್ರಯಾಣ ಬೆಳೆಸಿದ್ದಾರೆ. ಕರಾವಳಿ ರಕ್ಷಣಾ ಪಡೆಗಳು ಭಾರತೀಯ ಜಲಸೀಮೆ ದಾಟುವವರೆಗೆ ನಿಗಾ ವಹಿಸಿತ್ತು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಅದೀಬ್ಗೆ ಮಾಲ್ಡೀವ್್ಸನಲ್ಲಿ ಜೀವಬೆದರಿಕೆ ಇರುವುದರಿಂದ ರಾಜಕೀಯ ಆಶ್ರಯ ಕೋರಿ ಭಾರತಕ್ಕೆ ಬಂದಿದ್ದರು ಎಂದು ಅದೀಬ್ ಪರ ವಕೀಲ ಹೇಳಿದ್ದಾನೆ.
