ಮೂರು ದಶಕಗಳ ಕಾಲ ಪಾಲಿಕೆ ಸದಸ್ಯ| ಎರಡು ಬಾರಿ ಕೋಲ್ಕತಾ ಮೇಯರ್, ಮಮತಾ ಸಂಪುಟದಲ್ಲಿ ಸಚಿವ ಸ್ಥಾನ| ಮಮತಾ ಆಪ್ತ, ಕೋಲ್ಕತಾ ಮಾಜಿ ಮೇಯರ್ ಸೋವನ್ ಚಟರ್ಜಿ ಬಿಜೆಪಿಗೆ ಸೇರ್ಪಡೆ|
ಕೋಲ್ಕತಾ[ಆ.15]: ಪಶ್ಚಿಮ ಬಂಗಾಳ ಹಲವು ಟಿಎಂಸಿ ಶಾಸಕರು ಹಾಗೂ ಕಾರ್ಯಕರ್ತರು ಬಿಜೆಪಿ ಸೇರಿದ ಬೆನ್ನಲ್ಲೇ ತೃಣಮೂಲ ಕಾಂಗ್ರೆಸ್‌ನ ಹಿರಿಯ ನಾಯಕ ಮಮತಾ ಆಪ್ತ ಸೋವನ್ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.
ಟಿಎಂಸಿಯಿಂದ ನಾಲ್ಕು ಬಾರಿ ಶಾಸಕರಾಗಿ, ಮೂರು ದಶಕಗಳ ಕಾಲ ಪಾಲಿಕೆ ಸದಸ್ಯರಾಗಿ, ಎರಡು ಬಾರಿ ಕೋಲ್ಕತಾ ಮೇಯರ್ ಆಗಿ, ಮಮತಾ ಸಂಪುಟದಲ್ಲಿ ಸಚಿವರಾಗಿಯೂ ಕೆಲಸ ಮಾಡಿದ್ದ ಸೋವನ್ ಚಟರ್ಜಿ, ತನ್ನ ಸಂಘಟನಾ ಸಾಮರ್ಥ್ಯ ಹಾಗೂ ಸಮರ್ಥ ಹಣಕಾಸು ನಿರ್ವಹಣೆಯಿಂದಾಗಿ ಮಮತಾ ಅತ್ಯಾಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದರು. 2016ರ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಅಭೂತಪೂರ್ವ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಚಟರ್ಜಿಗೆ ಮಮತಾ ನಾಲ್ಕು ಖಾತೆಗಳನ್ನು ನಿರ್ವಹಿಸುವ ಜವಾಬ್ದಾರಿ ನೀಡಿದ್ದರು.
ಬಳಿಕ 2018 ಕೌಟುಂಬಿಕ ಕಾರಣಗಳಿಂದಾಗಿ ಹುದ್ದೆ ತ್ಯಜಿಸುವಂತೆ ಮಮತಾ ಸೂಚಿಸಿದ್ದರು. ಇದಾದ ಬಳಿಕ ಪಕ್ಷದಿಂದ ದೂರವಾಗಿದ್ದ ಚಟರ್ಜಿ, ರಾಜಕೀಯವಾಗಿ ತೆರೆಮರೆಗೆ ಸರಿದಿದ್ದರು. ಬುಧವಾರ ಬಿಜೆಪಿ ಸೇರುವ ಮೂಲಕ ಮತ್ತೆ ರಾಜಕೀಯವಾಗಿ ಮುನ್ನಲೆಗೆ ಬರುವ ಪ್ರಯತ್ನ ಮಾಡಿದ್ದಾರೆ.
