ತಮ್ಮ ಹೆಸರಿನಲ್ಲಿ ಹಾಗೂ ಪತ್ನಿ, ಮಗಳು ಹಾಗೂ ಮಗನ ಹೆಸರಿನಲ್ಲಿ ಮೂವರು ಅನಾಮಧೇಯ ವ್ಯಕ್ತಿಗಳ ಪೋಟೋಗಳನ್ನು ಅಂಟಿಸಿ ಪಾಸ್‌ಪೋರ್ಟ್‌ ರೆಡಿ ಮಾಡಿ ಅಮೆರಿಕಕ್ಕೆ ಕಳ್ಳ ಸಾಗಣೆ ಮಾಡಿದ ಆರೋಪದ ಅಡಿಯಲ್ಲಿ  ಮಾಜಿ ಕಾಂಗ್ರೆಸ್ ಶಾಸಕರೋರ್ವರನ್ನು ಬಂಧಿಸಲಾಗಿದೆ. 

ಹೈದರಾಬಾದ್‌: ಶಾಸಕರಾಗಿದ್ದ ಅವಧಿಯಲ್ಲಿ ಮೂವರು ವ್ಯಕ್ತಿಗಳನ್ನು ಅಮೆರಿಕಕ್ಕೆ ಕಳ್ಳಸಾಗಣೆ ಮಾಡಿದ ಆರೋಪದ ಮೇಲೆ ಕಾಂಗ್ರೆಸ್‌ನ ಮಾಜಿ ಶಾಸಕ ಜಯಪ್ರಕಾಶ್‌ ರೆಡ್ಡಿ ಅಲಿಯಾಸ್‌ ಜಗ್ಗಾ ರೆಡ್ಡಿ ಅವರನ್ನು ಪೊಲೀಸರು ಬಂಧಿಸಿದ್ದಾರೆ. 

2004ರಲ್ಲಿ ಶಾಸಕರಾಗಿದ್ದ ವೇಳೆ ತಮ್ಮ ಹೆಸರಿನಲ್ಲಿ ಹಾಗೂ ಪತ್ನಿ, ಮಗಳು ಹಾಗೂ ಮಗನ ಹೆಸರಿನಲ್ಲಿ ಮೂವರು ಅನಾಮಧೇಯ ವ್ಯಕ್ತಿಗಳ ಪೋಟೋಗಳನ್ನು ಅಂಟಿಸಿ ಪಾಸ್‌ಪೋರ್ಟ್‌ ಅನ್ನು ರೆಡ್ಡಿ ಪಡೆದುಕೊಂಡಿದ್ದರು. 

ಅಮೆರಿಕ ವೀಸಾ ಮತ್ತು ಪಾಸ್‌ಪೋರ್ಟ್‌ ಪಡೆದುಕೊಂಡ ಬಳಿಕ ಮೂವರು ವ್ಯಕ್ತಿಗಳನ್ನು ತಮ್ಮ ಜೊತೆ ಅಮೆರಿಕಕ್ಕೆ ಕರೆದೊಯ್ದು ನ್ಯೂಯಾರ್ಕ್ನಲ್ಲಿ ಏಜೆಂಟ್‌ವೊಬ್ಬನಿಂದ 15 ಲಕ್ಷ ರು. ಪಡೆದುಕೊಂಡಿದ್ದರು. 

ಶಾಸಕ ಹುದ್ದೆಯನ್ನು ದುರ್ಬಳಕೆ ಮಾಡಿಕೊಂಡು ನಕಲಿ ದಾಖಲೆಗಳನ್ನು ಸಲ್ಲಿಸಿದ್ದ ಜಯಪ್ರಕಾಶ್‌ ರೆಡ್ಡಿ, ಪ್ರಾದೇಶಿಕ ಪಾಸ್‌ಪೋರ್ಟ್‌ ಕಚೇರಿ ಹಾಗೂ ಅಮೆರಿಕರ ದೂತಾವಾಸ ಕಚೇರಿ ಅಧಿಕಾರಿಗಳನ್ನು ವಂಚಿಸಿದ್ದರು. ಈ ಸಂಬಂಧ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು.