ಚಂಡೀಗಢ(ಡಿ.08): ಪಾಕ್ ನೆಲದಲ್ಲಿ ಭಾರತೀಯ ಸೇನೆ ನಡೆಸಿದ್ದ ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಅತಿಯಾದ ಪ್ರಚಾರ ಅಗತ್ಯವಿರಲಿಲ್ಲ ಎಂದು ನಿವೃತ್ತ ಸೇನಾಧಿಕಾರಿ ಡಿ.ಎಸ್.ಹೂಡಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಗಡಿ ನಿಯಂತ್ರಣ ರೇಖೆ ಬಳಿಯಿದ್ದ ಉಗ್ರರ ನೆಲೆಗಳ ಮೇಲೆ 2016ರಲ್ಲಿ ಸರ್ಜಿಕಲ್ ಸ್ಟ್ರೈಕ್ ನಡೆಸಿತ್ತು. ಆದರೆ ಇದನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತ್ತಿರುವುದು ನಿಜಕ್ಕೂ ಖೇದಕರ ಸಂಗತಿ ಎಂದು ಡಿ.ಎಸ್.ಹೂಡಾ ಅಭಿಪ್ರಾಯಪಟ್ಟಿದ್ದಾರೆ.

ನಿನ್ನೆ ನಡೆದ ಸೇನಾ ಸಾಹಿತ್ಯ ಉತ್ಸವ 2018ರಲ್ಲಿ ಮಾತನಾಡಿದ ಹೂಡಾ, ಸೇನೆ ನಡೆಸಿದ್ದ ಸೀಮಿತ ದಾಳಿ ಬಗ್ಗೆ ಅತಿಯಾದ ಪ್ರಚಾರ ನಡೆಸಲಾಯಿತು ಎಂಬುದು ತಮ್ಮ ಅಭಿಪ್ರಾಯ ಎಂದು ಹೇಳಿದ್ದಾರೆ.

ಸೇನಾ ಕಾರ್ಯಾಚರಣೆ ಅತ್ಯಂತ ಮುಖ್ಯವಾದದ್ದು. ಆದರೆ ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುವುದು ಸೇನೆಗೆ ಮಾಡಿದ ಅಪಮಾನ ಎಣದು ಹೂಡಾ ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ.

 ಈಗಲೂ ಅಗತ್ಯ ಬಿದ್ದರೆ ಮತ್ತೊಂದು ಸರ್ಜಿಕಲ್ ಸ್ಟ್ರೈಕ್ ನಡೆಸಲು ಭಾರತೀಯ ಸೇನೆ ಸಜ್ಜಾಗಿದೆ. ಆದರೆ ಅವರ ಧೀರ ಹೋರಾಟವನ್ನು ಮತ್ತೆ ರಾಜಕೀಯ ನಾಯಕರು ತಮ್ಮ ಲಾಭಕ್ಕಾಗಿ ಬಳಸಿಕೊಂಡರೆ ದು ನಿಜಕ್ಕೂ ಖೇದಕರ ಎಂದು ಡಿ.ಎಸ್.ಹೂಡಾ ಹೇಳಿದ್ದಾರೆ.