‘ಯುರೋಪಿಯನ್‌ ಟೈಮ್ಸ್‌ ಎಂಬ ದಿನಪತ್ರಿಕೆ ವಿಶ್ವದಲ್ಲಿಯೇ ಅತಿ ಮೂರ್ಖ ಮತದಾರರು ಭಾರತದಲ್ಲಿದ್ದಾರೆ’ ಎಂದು ವರದಿ ಮಾಡಿದೆ ಎಂಬ ಸಂದೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಯುರೋಪಿಯನ್‌ ಕಮಿಷನ್‌ ಅಧ್ಯಕ್ಷ ಜೀನ್‌-ಕ್ಲೂಡೆ ಜಂಕರ್‌ ಅವರ ಫೋಟೋದೊಂದಿಗೆ,‘ವಿಶ್ವದ ಅತಿ ಮೂರ್ಖ ಮತದಾರರು ಭಾರತದಲ್ಲಿದ್ದಾರೆ. ಅವರು ಅಕ್ರಮಗಳಿಗೆ ಲಾಭಿ ಮಾಡುವವರಿಗೆ ಮತ ಹಾಕುತ್ತಾರೆ-ಯುರೋಪಿಯನ್‌ ಟೈಮ್ಸ್‌’ ಎಂದು ಬರೆದು ಪೋಸ್ಟ್‌ ಮಾಡಲಾಗಿದೆ. ಇದನ್ನು ಸಾವಿರಾರು ಜನರು ಈ ಸಂದೇಶವನ್ನು ಶೇರ್‌ ಮಾಡಿದ್ದಾರೆ. ಫೋಟೋದಲ್ಲಿ ‘ಬಿಜೆಪಿ4 ಆಲ್‌’ ಎಂಬ ಲೋಗೋ ಕೂಡ ಇದೆ. ಮತ್ತೆ ಕೆಲವು ಪೋಸ್ಟ್‌ಗಳಲ್ಲಿ ಈ ಸಂದೇಶದ ಜೊತೆಗೆ ರೊಹಿಂಗ್ಯಾಗಳ ಹೆಸರನ್ನೂ ಸೇರಿಸಿ ಶೇರ್‌ ಮಾಡಲಾಗಿದೆ.

ಆದರೆ ನಿಜಕ್ಕೂ ಯುರೋಪಿಯನ್‌ ಟೈಮ್ಸ್‌ ಎಂಬ ಸುದ್ದಿಸಂಸ್ಥೆ ಭಾರತದ ಬಗ್ಗೆ ಈ ರೀತಿ ವರದಿ ಮಾಡಿತ್ತೇ ಎಂದು ಪರಿಶೀಲಿಸಿದಾಗ ‘ಯುರೋಪಿಯನ್‌ ಟೈಮ್ಸ್‌’ ಹೆಸರಿನ ಸುದ್ದಿ ಸಂಸ್ಥೆಯೇ ಇಲ್ಲ ಎಂಬುದು ಪತ್ತೆಯಾಗಿದೆ. ಅಲ್ಲಿ ಈತಿಯ ಯಾವುದೇ ಹೇಳಿಕೆಗಳೂ ಪ್ರಕಟವಾಗಿಲ್ಲ. ಬದಲಾಗಿ ‘ದ ಯುರೋಪಿಯನ್‌ ಟೈಮ್ಸ್‌’ ಎಂಬ ನಿಯತಕಾಲಿಕೆ ಇದ್ದು ಅದು ಯುರೋಪಿಯನ್‌ ದೇಶಗಳಲ್ಲಿ ಮಾತ್ರ ಪ್ರಕಟವಾಗುತ್ತದೆ. ಆಲ್ಟ್‌ನ್ಯೂಸ್‌ ಈ ಬಗ್ಗೆ ಗೂಗಲ್‌ನಲ್ಲಿ ಹುಡುಕಿದಾಗಲೂ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಇನ್ನು ಯುರೋಪಿಯನ್‌ ಕಮಿಷನ್‌ ಅಧ್ಯಕ್ಷರ ಫೋಟೋ ಹಿಡಿದು ಗೂಗಲ್‌ ರಿವರ್ಸ್‌ ಇಮೇಜ್‌ನಲ್ಲಿ ಪರಿಶೀಲಿಸಿದಾಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿರುವ ಫೋಟೋ 30 ಆಗಸ್ಟ್‌ 2018ರಂದು ಯುರೋಪಿಯನ್‌ ಕಮಿಷನ್‌ನ ವಾರ್ಷಿಕ ಸಭೆಯಲ್ಲಿ ಕ್ಲಿಕ್ಕಿಸಿದ ಫೋಟೋ ಎಂಬುದು ದೃಢವಾಗಿದೆ. ಹಾಗಾಗಿ ಈ ಸುದ್ದಿ ಸುಳ್ಳು ಎಂಬುದು ಸ್ಪಷ್ಟ.