ಬೆಂಗಳೂರು(ಅ. 07): ರಾಜ್ಯ ಸರ್ಕಾರದ ಬಹುವೆಚ್ಚದ ಮತ್ತು ಪ್ರತಿಷ್ಠಿತ ಯೋಜನೆಗಳಲ್ಲಿ ಒಂದಾದ ಎತ್ತಿನ ಹೊಳೆ ಯೋಜನೆ ಎತ್ತ ಸಾಗುತ್ತಿದೆ ಎನ್ನುವ ಪ್ರಶ್ನೆ ಬಲವಾಗಿ ಎದ್ದಿದೆ. ಕಾರಣ ಎತ್ತಿನ ಹೊಳೆ ಯೋಜನೆಯಿಂದ 24 ಟಿಎಂಸಿ ನೀರು ಸಿಗಲಿದೆ ಎಂದು ಸರ್ಕಾರ ಹೇಳ್ತಿದೆ. ಆದ್ರೆ ಪರಿಸರ ವಿಜ್ಞಾನಿಗಳು ಅಲ್ಲಿ ಅಷ್ಟು ನೀರಿಲ್ಲ ಎಂದು ಪ್ರೂವ್ ಮಾಡಿದ್ದಾರೆ. ರಾಜ್ಯ ಸರ್ಕಾರ ಸಾವಿರ ಸಾವಿರ ಕೋಟಿ ಹಣ ಈಗಾಗಲೇ ಖರ್ಚು ಮಾಡಿದ ಈ ಯೋಜನೆಯ ಭವಿಷ್ಯವೇನು?
ಬಯಲು ಸೀಮೆ ಭಾಗದ ಬಹು ನಿರೀಕ್ಷಿತ ಯೋಜನೆಗಳಲ್ಲಿ ಎತ್ತಿನ ಹೊಳೆ ಯೋಜನೆ ಪ್ರಮಖವಾದದ್ದು. ಈ ಯೋಜನೆಯಿಂದ ಕೋಲಾರ, ಚಿಕ್ಕ ಬಳ್ಳಾಪುರ ಸೇರಿದಂತೆ ಬರಡಾಗಿರುವ ಹಲವು ಭಾಗಗಳಿಗೆ ನೀರು ಹರಿಯತ್ತೊ ಬಿಡುತ್ತೋ ಗೊತ್ತಿಲ್ಲ. ಆದ್ರೆ ಎತ್ತಿನ ಹೊಳೆ ಯೋಜನೆ ಕಾಮಗಾರಿಗೆ ಹಣ ಮಾತ್ರ ನೀರಿನಂತೆ ಹರಿದಿದೆ. ಬರೋಬ್ಬರಿ 1758 ಕೋಟಿಗೂ ಹೆಚ್ಚು ಹಣ ಖರ್ಚಾಗಿದೆ.
ಎತ್ತನಹೊಳೆಯಿಂದ ನೀರು ಸಿಗಲ್ಲವಾ?
ಸರ್ಕಾರ ಅಂದುಕೊಂಡಂತೆ 24 ಟಿಎಂಸಿ ನೀರು ಎತ್ತಿನ ಹೊಳೆಯಿಂದ ಸಿಗೋದಿಲ್ಲ. ತಜ್ಞರು ನೀಡಿರುವ ವರದಿಯಂತೆ ಎತ್ತಿನಹೊಳೆಯಲ್ಲಿ 9.7 ಟಿಎಂಸಿ ನೀರು ಲಭ್ಯವಾಗಲಿದೆ. ಬಳಕೆ ಮತ್ತು ಹರಿದು ಹೋಗುವ ನೀರನ್ನು ಕಳೆದರೆ ಲಭ್ಯವಾಗುವುದು ಕೇವಲ 0.85 ಟಿಂಎಸಿ ನೀರು ಮಾತ್ರ ಅನ್ನೋ ಲೆಕ್ಕಾಚಾರ ಪರಿಸರ ತಜ್ಞರದ್ದು.
ಆದ್ರೆ, ಎತ್ತಿನಹೊಳೆಯಿಂದ ನೀರು ಸಿಗೋದಿಲ್ಲವೆಂದು ತಜ್ಞರು ಹೇಳಿರುವುದರ ಬಗ್ಗೆ ಸರಕಾರವನ್ನು ಕೇಳಿದ್ರೆ, ಇದು ದಾರಿ ತಪ್ಪಿಸುವ ಕೆಲಸ. ಎತ್ತಿನಹೊಳೆಯಲ್ಲಿ ಅಂದುಕೊಂಡಷ್ಟು ನೀರು ಸಿಗತ್ತೆ ಎಂದು ವಿಶ್ವಾಸ ತೋರುತ್ತದೆ.
ನೀರಿಗಾಗಿ ಕಾದಿರುವ ಕೋಲಾರ, ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ, ತುಮಕೂರು ಭಾಗದ ಜನತೆಯ ಆಸೆ ಕೈಗೂಡುತ್ತದಾ? ಅಥವಾ ಎತ್ತಿನಹೊಳೆ ಯೋಜನೆ ಇತಿಹಾಸ ನೆನೆಗುದಿಗೆ ಬೀಳುತ್ತದಾ?
- ರವಿ ಶಿವರಾಮ್, ಪೊಲಿಟಿಕಲ್ ಬ್ಯೂರೊ, ಸುವರ್ಣ ನ್ಯೂಸ್
