ಅವರು ಇನ್ನುಮುಂದೆ ಪಕ್ಷದ ಹಿಂದುಳಿದ ವರ್ಗಗಳ ಮೋರ್ಚಾದ ಉಸ್ತುವಾರಿ ಜವಾಬ್ದಾರಿಯನ್ನು ಗಂಭೀರವಾಗಿ ತೆಗೆದುಕೊಂಡು ಬ್ರಿಗೇಡ್‌ನ ಆಶೋತ್ತರಗಳನ್ನು ಈ ಮೋರ್ಚಾ ಮೂಲಕ ಪೂರೈಸಲಿದ್ದಾರೆ.
ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ಸಾಕಷ್ಟು ಕೋಲಾಹಲವನ್ನೇ ಸೃಷ್ಟಿಸಿದ್ದ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ನ ಅಧ್ಯಾಯ ಬಹುತೇಕ ಮುಗಿದಂತಾಗಿದ್ದು, ಅಂತಿಮವಾಗಿ ಈ ಹಗ್ಗಜಗ್ಗಾಟದಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ಕೈ ಮೇಲಾಗಿದೆ. ಬ್ರಿಗೇಡ್ ಸ್ಥಾಪಿಸಿದ್ದ ಪಕ್ಷದ ನಾಯಕ ಹಾಗೂ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಅವರು ಇನ್ನು ಮುಂದೆ ಬ್ರಿಗೇಡ್ನ ಯಾವುದೇ ಚಟುವಟಿಕೆಗಳಲ್ಲಿ ಪಾಲ್ಗೊಳ್ಳದೆ ದೂರ ಉಳಿಯಲಿದ್ದಾರೆ. ಅವರು ಇನ್ನುಮುಂದೆ ಪಕ್ಷದ ಹಿಂದುಳಿದ ವರ್ಗಗಳ ಮೋರ್ಚಾದ ಉಸ್ತುವಾರಿ ಜವಾಬ್ದಾರಿಯನ್ನು ಗಂಭೀರವಾಗಿ ತೆಗೆದುಕೊಂಡು ಬ್ರಿಗೇಡ್ನ ಆಶೋತ್ತರಗಳನ್ನು ಈ ಮೋರ್ಚಾ ಮೂಲಕ ಪೂರೈಸಲಿದ್ದಾರೆ. ಜತೆಗೆ ಬ್ರಿಗೇಡ್ನ ಹಲವು ಮುಖಂಡರಿಗೆ ಈ ಮೋರ್ಚಾದಲ್ಲಿ ವಿವಿಧ ಜವಾಬ್ದಾರಿಗಳನ್ನು ನೀಡುವ ಮೂಲಕ ಅವಕಾಶ ಕಲ್ಪಿಸಲು ತೀರ್ಮಾನಿಸಲಾಗಿದೆ.
ಭಾನುವಾರ ನಡೆದ ರಾಜ್ಯ ಕೋರ್ ಕಮಿಟಿ ಸಭೆಯಲ್ಲಿ ಉಸ್ತುವಾರಿ ಪಿ.ಮುರಳೀಧರರಾವ್ ಅವರು ಈ ಮಾಹಿತಿಯನ್ನು ಅಧಿಕೃತವಾಗಿ ಪ್ರಕಟಿಸಿದ್ದಾರೆ. ಇದರೊಂದಿಗೆ ಪಕ್ಷದ ಪದಾಧಿಕಾರಿಗಳ ನೇಮಕ ಸೇರಿದಂತೆ ಈಶ್ವರಪ್ಪ ಮತ್ತಿತರ ಕೆಲವು ಅತೃಪ್ತ ಮುಖಂಡರು ಪ್ರಸ್ತಾಪಿಸಿರುವ ಅಂಶಗಳನ್ನು ಪರಿಶೀಲಿಸಿ ಶೀಘ್ರ ನಿರ್ಧಾರ ಕೈಗೊಳ್ಳುವ ಭರವಸೆಯನ್ನೂ ರಾವ್ ನೀಡಿದ್ದಾರೆ ಎನ್ನಲಾಗಿದೆ. ಆದರೆ, ಬ್ರಿಗೇಡ್ ಪೂರ್ಣ ಪ್ರಮಾಣದಲ್ಲಿ ನಿಷ್ಕಿ್ರಯಗೊಳ್ಳುವುದೇ ಎಂಬುದನ್ನು ತಕ್ಷಣವೇ ಹೇಳಲು ಸಾಧ್ಯವಿಲ್ಲ. ಈಶ್ವರಪ್ಪ ಅವರು ದೂರ ಉಳಿಯುವುದು ಖಚಿತವಾಗಿದೆ. ಇನ್ನುಳಿದ ಮುಖಂಡರ ಪೈಕಿ ಯಾರಾದರೂ ಬ್ರಿಗೇಡ್ ಅನ್ನು ಮುಂದುವರೆಸಿಕೊಂಡು ಹೋಗುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಬ್ರಿಗೇಡ್ಗೆ ಜೀವ ಉಳಿದದ್ದೇ ಈಶ್ವರಪ್ಪ ಅವರಿಂದ. ಹೀಗಾಗಿ, ಈಶ್ವರಪ್ಪ ಅವರು ದೂರವಾದ ಮೇಲೆ ಬ್ರಿಗೇಡ್ಗೆ ಯಾವುದೇ ಶಕ್ತಿ ಉಳಿಯಲಿಕ್ಕಿಲ್ಲ ಎಂದು ಮೂಲಗಳು ತಿಳಿಸಿವೆ. ಪಕ್ಷದ ಪದಾಧಿಕಾರಿಗಳ ನೇಮಕಕ್ಕೆ ಸಂಬಂಧಿಸಿದಂತೆ ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ಧೋರಣೆ ವಿರೋಧಿಸಿ ಈಶ್ವರಪ್ಪ ಅವರು ಈ ಬ್ರಿಗೇಡ್ ಸಂಘಟನೆಯನ್ನು ಹುಟ್ಟು ಹಾಕಿದ್ದರು.
ಆರಂಭದಲ್ಲಿ ಈ ಸಂಘಟನೆಯನ್ನು ಹಗುರವಾಗಿ ಸ್ವೀಕರಿಸಿದ್ದ ಯಡಿಯೂರಪ್ಪ ಅವರಿಗೆ ನಂತರದ ದಿನಗಳಲ್ಲಿ ಇದು ನುಂಗಲಾರದ ತುತ್ತಾಗಿ ಪರಿಣಮಿಸಿತ್ತು. ಅಂತಿಮವಾಗಿ ಕಳೆದ ಜನವರಿಯಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸಮ್ಮುಖದಲ್ಲೇ ಯಡಿಯೂರಪ್ಪ ಮತ್ತು ಈಶ್ವರಪ್ಪ ಅವರ ಸಂಧಾನ ಸಭೆಯನ್ನೂ ನಡೆಸಲಾಗಿತ್ತು. ಆ ವೇಳೆ ಬ್ರಿಗೇಡ್ನ ರಾಜಕೀಯ ಚಟುವಟಿಕೆಗಳನ್ನು ನಿಲ್ಲಿಸುವಂತೆ ಶಾ ಸೂಚಿಸಿದ್ದರು. ಅದಕ್ಕೆ ಈಶ್ವರಪ್ಪ ಅವರೂ ಒಪ್ಪಿದ್ದರು. ಈಶ್ವರಪ್ಪ ಅವರು ರಾಜಕೀಯ ಚಟುವಟಿಕೆಗಳನ್ನು ಕೈಬಿಟ್ಟರೂ ಬ್ರಿಗೇಡ್ನ ಇತರ ಚಟುವಟಿಕೆಗಳನ್ನು ಚುರುಕುಗೊಳಿಸಿದ್ದರಿಂದ ಯಡಿಯೂರಪ್ಪ ಮತ್ತೆ ವರಿಷ್ಠರ ಮೊರೆ ಹೋಗಿದ್ದರು. ಈಶ್ವರಪ್ಪ ಅವರು ಸಂಪೂರ್ಣವಾಗಿ ಬ್ರಿಗೇಡ್ ಕೈಬಿಡಬೇಕು ಎಂಬ ಬೇಡಿಕೆಯನ್ನು ಬಲವಾಗಿಯೇ ಮಂಡಿಸಿದ್ದರು. ಅದರ ಪರಿಣಾಮ ಇದೇ ತಿಂಗಳ 8ರಂದು ರಾಯಚೂರಿನಲ್ಲಿ ನಿಗದಿಯಾಗಿದ್ದ ಬ್ರಿಗೇಡ್ನ ಒಂದು ದಿನದ ಅಭ್ಯಾಸ ವರ್ಗವನ್ನು ಮುಂದೂಡಿದ್ದರು. ನಂತರ ಆ ಸಭೆ 24ರಂದು ನಡೆದರೂ ಈಶ್ವರಪ್ಪ ಗೈರು ಹಾಜರಾಗಿದ್ದರು.
ಬಿಜೆಪಿ ಚುನಾವಣಾಸಭೆ ಜು.1, 2ಕ್ಕೆ
ಬೆಂಗಳೂರು: ರಾಜ್ಯದ ಆಡಳಿತಾರೂಢ ಕಾಂಗ್ರೆಸ್ ಪಕ್ಷದಲ್ಲಿನ ಬಿರುಸಿನ ಚಟುವಟಿಕೆಗಳಿಂದ ತುಸು ಆತಂಕಕ್ಕೀಡಾಗಿರುವ ಪ್ರಮುಖ ಪ್ರತಿಪಕ್ಷ ಬಿಜೆಪಿ ಕೂಡ ಮುಂಬರುವ ಚುನಾವಣೆಗೆ ಸಿದ್ಧತೆ ಕೈಗೆತ್ತಿಕೊಳ್ಳಲು ಮುಂದಾಗಿದೆ. ಬರುವ ಜುಲೈ 1 ಮತ್ತು 2ರಂದು ಪಕ್ಷದ ಚುನಾವಣಾ ಯೋಜನೆ ಮತ್ತು ನಿರ್ವಹಣಾ ಸಭೆ ನಡೆಸಲು ಭಾನುವಾರ ನಡೆದ ಪಕ್ಷದ ಹಿರಿಯ ನಾಯಕರನ್ನು ಒಳಗೊಂಡ ಕೋರ್ ಕಮಿಟಿ ಸಭೆಯಲ್ಲಿ ತೀರ್ಮಾನಿಸಲಾಗಿದೆ.
