Asianet Suvarna News Asianet Suvarna News

ರಾಯಣ್ಣ ಬ್ರಿಗೇಡ್‌: ಯೂ-ಟರ್ನ್ ಹೊಡೆದ ಈಶ್ವರಪ್ಪ?

ಬ್ರಿಗೇಡ್ ಸ್ಥಗಿತಕ್ಕೆ ಹೈಕಮಾಂಡ್​​ನಿಂದ ಸೂಚನೆ ಬಂದಿಲ್ಲ; ಈ ಸಂಘಟನೆಯನ್ನು ರಾಜಕಾರಣಕ್ಕೆ ಬಳಸಿಕೊಳ್ಳುವುದಿಲ್ಲ: ಈಶ್ವರಪ್ಪ ಹೇಳಿಕೆ

Eshwarappa Takes U turn in Rayanna Brigade

ದಾವಣಗೆರೆ (ಅ.12): ಬಿಜೆಪಿ ನಾಯಕ ಕೆಎಸ್ ಈಶ್ವರಪ್ಪ ರಾಯಣ್ಣ  ಬ್ರಿಗೇಡ್‌ನಿಂದ ಹಿಂದೆ ಸರಿದಿದ್ದಾರೆಯೇ? ಹೀಗೆ ಅನುಮಾನ ಮೂಡಲು ಕಾರಣವಾಗಿದ್ದು ಈಶ್ವರಪ್ಪ ನೀಡಿರುವ ಹೇಳಿಕೆ. ತಾನು ರಾಯಣ್ಣ ಬ್ರಿಗೇಡ್'ನ ನಾಯಕನೇ ಅಲ್ಲ ಎಂದು ಮಾಜಿ ಸಚಿವರು ಹೇಳಿದ್ದಾರೆ. ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಈಶ್ವರಪ್ಪ, ತಾನು ಈ ಸಂಘಟನೆಯನ್ನು ರಾಜಕಾರಣಕ್ಕೆ ಬಳಸಿಕೊಳ್ಳುವುದಿಲ್ಲ. ಬ್ರಿಗೇಡ್ ಸ್ಥಗಿತಕ್ಕೆ ಹೈಕಮಾಂಡ್'​​ನಿಂದ ಸೂಚನೆಯೂ ಬಂದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಬಿಜೆಪಿ ವರಿಷ್ಠ ರಾಮಲಾಲ್ ಅವರನ್ನ ಭೇಟಿ ಮಾಡಿದ ಬಳಿಕ ಈಶ್ವರಪ್ಪನವರು ಈ ಮಾತುಗಳನ್ನು ಹೇಳುತ್ತಿರುವುದು ಗಮನಾರ್ಹ. ಆದರೆ, ರಾಮಲಾಲ್ ತಮಗೆ ರಾಯಣ್ಣ ಬ್ರಿಗೇಡ್ ಸಂಘಟನೆಯನ್ನು ನಿಲ್ಲಿಸುವಂತೆ ಯಾವುದೇ ಸೂಚನೆ ನೀಡಿಲ್ಲವೆಂದೂ ಈಶ್ವರಪ್ಪ ಈ ವೇಳೆ ಸ್ಪಷ್ಟನೆ ನೀಡಿದ್ದಾರೆ. ಯಡಿಯೂರಪ್ಪನವರು ಬಿಜೆಪಿ ರಾಜ್ಯಾಧ್ಯಕ್ಷರಾದ ಬಳಿಕ ತೆಗೆದುಕೊಂಡ ಏಕಪಕ್ಷೀಯ ನಿರ್ಧಾರಗಳು ಹಾಗೂ ರಾಯಣ್ಣ ಬ್ರಿಗೇಡ್'ನ ಚಟುವಟಿಕೆಗಳ ಬಗ್ಗೆ ಈಶ್ವರಪ್ಪನವರು ರಾಮಲಾಲ್ ಅವರ ಬಳಿ ಚರ್ಚೆ ನಡೆಸಿದರೆನ್ನಲಾಗುತ್ತಿದೆ. ಆದರೆ, ಈ ವಿಚಾರದ ಬಗ್ಗೆ ಈಶ್ವರಪ್ಪ ಯಾವುದೇ ಸ್ಪಷ್ಟನೆ ನೀಡಿಲ್ಲ.

ಯಡಿಯೂರಪ್ಪನವರಿಗೇ ಲಾಭವಿದೆ:
ಯಡಿಯೂರಪ್ಪನವರನ್ನು ಸಿಎಂ ಆಗಿ ಮಾಡುವುದು; ಬಿಜೆಪಿಯನ್ನು ಅಧಿಕಾರಕ್ಕೆ ತರುವುದು ರಾಯಣ್ಣ ಬ್ರಿಗೇಡ್ ಸಂಘಟನೆಯ ಉದ್ದೇಶವಾಗಿದೆ. ರಾಯಣ್ಣ ಬ್ರಿಗೇಡ್ ಸಂಘಟನೆಗೆ ಹಿಂದುಳಿದ ಹಾಗೂ ದಲಿತ ಮಠಾಧೀಶರ ಒಕ್ಕೂಟ ಬೆಂಬಲ ಸೂಚಿಸಿದೆ. ಸಾಧು-ಸಂತರೇ  ಮುಂದೆ ಬಂದು ಸಹಕಾರ ಕೊಡುವಾಗ ನನ್ನದೇನೂ ಆಭ್ಯಂತರವಿಲ್ಲ ಎಂದು ಈಶ್ವರಪ್ಪ ತಿಳಿಸಿದ್ದಾರೆ.

ಸರಕಾರದ 'ಬರ' ನಿರ್ಲಕ್ಷ್ಯ:
ಬರಗಾಲಪೀಡಿತ ಪ್ರದೇಶಗಳನ್ನು ಘೋಷಣೆ ಮಾಡಿದ ಬಳಿಕ ರಾಜ್ಯ ಸರಕಾರ ಅತ್ತೆ ಕಡೆ ಎಲ್ಲೂ ಸುಳಿದೇ ಇಲ್ಲ. ರಾಜ್ಯದಲ್ಲಿ ಕುಡಿಯುವ ನೀರಿಗೆ ಭಂಗ ಬಂದಿದೆ. ಜನ ಉದ್ಯೋಗವಿಲ್ಲದೇ ಗುಳೇ ಹೋಗುತ್ತಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರುಗಳು ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡುತ್ತಿಲ್ಲ. ಬರಪೀಡಿತ ಪ್ರದೇಶ ಎಂದು ಘೋಷಣೆ ಮಾಡಿದ್ರೆ ಸಾಲದು, ಕೇಂದ್ರ ಸರ್ಕಾರಕ್ಕೆ ಸರ್ವೆ ರಿಪೋರ್ಟ್ ಕಳುಹಿಸಬೇಕು. ವಿಶೇಷ ಕೆಡಿಪಿ ಸಭೆ ನಡೆಸಿ ಜನತೆ ಸಂಕಷ್ಟ ಪರಿಹಾರ ಒದಗಿಸುವ ವಿಶ್ವಾಸವನ್ನು ಸಮರೋಪಾದಿಯಲ್ಲಿ ಮಾಡಬೇಕೆಂದು ಆಗ್ರಹಿಸಿದರು.

Follow Us:
Download App:
  • android
  • ios