ದಲಿತರು, ಹಿಂದುಳಿದವರು ಮತ್ತು ಶೋಷಿತರ ಉದ್ದಾರ ಯಾರು ಮಾಡುತ್ತಾರೋ ಅವರಿಗೆ ರಾಯಣ್ಣ ಬ್ರಿಗೇಡ್'ನ ಬೆಂಬಲವಿರುತ್ತದೆ ಎಂದೂ ಈಶ್ವರಪ್ಪ ಸ್ಪಷ್ಟಪಡಿಸಿದ್ದಾರೆ.

ಕಲ್ಬುರ್ಗಿ(ಜ. 10): ಯಡಿಯೂರಪ್ಪ ವರ್ಸಸ್ ಈಶ್ವರಪ್ಪ ಜಂಗೀ ಕುಸ್ತಿಗೆ ಈಗ ಸ್ಪಷ್ಟ ಚಿತ್ರಣ ಸಿಕ್ಕಿದೆ. ಯಡಿಯೂರಪ್ಪ ವಿರುದ್ಧ ಈಶ್ವರಪ್ಪ ಅಧಿಕೃತವಾಗಿ ತಿರುಗಿಬಿದ್ದಿದ್ದಾರೆ. ಯಡಿಯೂರಪ್ಪನವರನ್ನು ರಾಜ್ಯದ ಮುಖ್ಯಮಂತ್ರಿಯನ್ನಾಗಿ ಮಾಡುವುದು ರಾಯಣ್ಣ ಬ್ರಿಗೇಡ್ ಸಂಘಟನೆಯ ಉದ್ದೇಶ ಎಂದು ಆರಂಭದಿಂದಲೂ ಹೇಳಿಕೊಂಡು ಬಂದಿದ್ದ ಈಶ್ವರಪ್ಪ ಈಗ ಪಥ ಬದಲಿಸಿದ್ದಾರೆ. ಬಿಎಸ್'ವೈರನ್ನು ಸಿಎಂ ಮಾಡುವುದು ಬ್ರಿಗೇಡ್'ನ ಉದ್ದೇಶವಲ್ಲ ಎಂದು ಈಶ್ವರಪ್ಪ ಹೇಳಿದ್ದಾರೆ.

ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಈಶ್ವರಪ್ಪ, ತಮ್ಮ ಬದಲಾದ ಹೇಳಿಕೆಗೆ ಯಡಿಯೂರಪ್ಪನವರನ್ನೇ ದೂಷಿಸಿದ್ಧಾರೆ. ಜನರೇ ತಮ್ಮನ್ನು ಸಿಎಂ ಆಗಿ ಮಾಡುತ್ತಾರೆ. ಯಾವುದೇ ಬ್ರಿಗೇಡ್'ನ ಅಗತ್ಯವಿಲ್ಲವೆಂದು ಯಡಿಯೂರಪ್ಪನವರೇ ಹೇಳಿದಾಗ ತಾವು ಸಂಘಟನೆಯ ಉದ್ದೇಶವನ್ನು ಬದಲಿಸಬೇಕಾಯಿತು ಎಂದು ಕೆಎಸ್ ಈಶ್ವರಪ್ಪ ಸ್ಪಷ್ಟಪಡಿಸಿದ್ದಾರೆ.

"ರಾಯಣ್ಣ ಬ್ರಿಗೇಡ್'ಗೆ ಬೆಂಬಲ ನೀಡಿರುವ ಮಠ ಮಾನ್ಯರು, ಈ ಸಂಘಟನೆಯನ್ನು ಬಿಜೆಪಿಗೆ ಸೀಮಿತಗೊಳಿಸುವುದನ್ನು ವಿರೋಧಿಸಿದ್ದಾರೆ. ತಮ್ಮ ಭಕ್ತರು ಎಲ್ಲಾ ಪಕ್ಷಗಳಲ್ಲೂ ಇರುವುದರಿಂದ ರಾಯಣ್ಣ ಬ್ರಿಗೇಡನ್ನು ಒಂದು ರಾಜಕೀಯ ಸಂಘಟನೆಗೆ ಸೀಮಿತಗೊಳಿಸುವುದು ಸರಿಯಲ್ಲ ಎಂದು ಮಠದ ಸ್ವಾಮಿಗಳು ಹೇಳುತ್ತಾ ಬಂದಿದ್ದರು. ಯಡಿಯೂರಪ್ಪಗೂ ಕೂಡ ತಮಗೆ ಬ್ರಿಗೇಡ್'ನ ಅಗತ್ಯವಿಲ್ಲ ಎಂದು ಹೇಳಿದ್ದಾರೆ. ಹೀಗಾಗಿ, ನಾವು ಮಠಗಳು ತೋರಿದ ದಾರಿ ಹಿಡಿದಿದ್ದೇವೆ," ಎಂದು ಮಾಜಿ ಉಪ ಮುಖ್ಯಮಂತ್ರಿ ಕೆಎಸ್ ಈಶ್ವರಪ್ಪ ತಿಳಿಸಿದ್ದಾರೆ.

ದಲಿತರು, ಹಿಂದುಳಿದವರು ಮತ್ತು ಶೋಷಿತರ ಉದ್ದಾರ ಯಾರು ಮಾಡುತ್ತಾರೋ ಅವರಿಗೆ ರಾಯಣ್ಣ ಬ್ರಿಗೇಡ್'ನ ಬೆಂಬಲವಿರುತ್ತದೆ ಎಂದೂ ಈಶ್ವರಪ್ಪ ಸ್ಪಷ್ಟಪಡಿಸಿದ್ದಾರೆ.