ರಾಜ್ಯ ಬಿಜೆಪಿಯಲ್ಲಿ ಭಿನ್ನಮತದ ಬಿಸಿ ಕಾವೇರಿರುವ ಹೊತ್ತಲ್ಲೇ ನಾಳೆಯಿಂದ ಮೈಸೂರಿನಲ್ಲಿ ರಾಜ್ಯ ಬಿಜೆಪಿ ಕಾರ್ಯಕಾರಿಣಿ ಆರಂಭವಾಗಲಿದೆ. ಭಿನ್ನಮತದ ಬೇಗೆಯ ನಡುವೆ ನಡೆಯುತ್ತಿರುವ ಕಾರ್ಯಕಾರಿಣಿ ಕಮಲ ಪಾಳೆಯದಲ್ಲಿ ಸದ್ಯ ಎಲ್ಲರ ಕೇಂದ್ರಬಿಂದುವಾಗಿದೆ. ಈ ಕಾರ್ಯಕಾರಿಣಿಯ ಹಿನ್ನಲೆಯಲ್ಲಿ ಬಂಡಾಯದ ಕಹಳೆ ಮೊಳಗಿಸಿರುವ ಈಶ್ವರಪ್ಪ ಬಣ ಮಾಡಿರುವ ತಂತ್ರವೇನು? ಇದಕ್ಕೆ ಯಡಿಯೂರಪ್ಪ ಬಣದ ಪ್ರತಿತಂತ್ರವೇನು? ಎನ್ನೋದು ಕುತೂಹಲದ ವಿಚಾರವಾಗಿದೆ.
ಬೆಂಗಳೂರು (ಮೇ.05): ರಾಜ್ಯ ಬಿಜೆಪಿಯಲ್ಲಿ ಭಿನ್ನಮತದ ಬಿಸಿ ಕಾವೇರಿರುವ ಹೊತ್ತಲ್ಲೇ ನಾಳೆಯಿಂದ ಮೈಸೂರಿನಲ್ಲಿ ರಾಜ್ಯ ಬಿಜೆಪಿ ಕಾರ್ಯಕಾರಿಣಿ ಆರಂಭವಾಗಲಿದೆ. ಭಿನ್ನಮತದ ಬೇಗೆಯ ನಡುವೆ ನಡೆಯುತ್ತಿರುವ ಕಾರ್ಯಕಾರಿಣಿ ಕಮಲ ಪಾಳೆಯದಲ್ಲಿ ಸದ್ಯ ಎಲ್ಲರ ಕೇಂದ್ರಬಿಂದುವಾಗಿದೆ. ಈ ಕಾರ್ಯಕಾರಿಣಿಯ ಹಿನ್ನಲೆಯಲ್ಲಿ ಬಂಡಾಯದ ಕಹಳೆ ಮೊಳಗಿಸಿರುವ ಈಶ್ವರಪ್ಪ ಬಣ ಮಾಡಿರುವ ತಂತ್ರವೇನು? ಇದಕ್ಕೆ ಯಡಿಯೂರಪ್ಪ ಬಣದ ಪ್ರತಿತಂತ್ರವೇನು? ಎನ್ನೋದು ಕುತೂಹಲದ ವಿಚಾರವಾಗಿದೆ.
ಬಿಜೆಪಿಯಲ್ಲಿ ಭಿನ್ನಮತೀಯರ ನಡುವಣ ಸಮರ ಜೋರಾಗಿರುವ ಹೊತ್ತಲ್ಲೇ ಅತ್ತ ಮೈಸೂರಿನಲ್ಲಿ ನಾಳೆ ಕಮಲ ಪಾಳೆಯದ ರಾಜ್ಯ ಕಾರ್ಯಕಾರಿಣಿಗೆ ಆರಂಭವಾಗಲಿದೆ. ಬಿಜೆಪಿ ರಾಜ್ಯ ನಾಯಕತ್ವದ ವಿರುದ್ಧ ತೊಡೆತಟ್ಟಿರುವ ಈಶ್ವರಪ್ಪ ಬಣ ಕಾರ್ಯಕಾರಿಣಿ ಗೈರುಹಾಜರಾಗುವುದು ಬಹುತೇಕ ಖಚಿತ ಎನ್ನಲಾಗಿದೆ.
ರಾಜ್ಯ ಬಿಜೆಪಿ ನಾಯಕತ್ವದ ವಿರುದ್ಧ ಬಂಡಾಯದ ಬಾವುಟ ಹಾರಿಸಿರುವ ಈಶ್ವರಪ್ಪ ಬಣ ಕಾರ್ಯಕಾರಿಣಿಗೆ ಗೈರುಹಾಜರಾಗುವ ಮೂಲಕ ಖಡಕ್ ಸಂದೇಶ ನೀಡಲು ಸಿದ್ಧತೆ ನಡೆಸಿದೆ. ಈಶ್ವರಪ್ಪ ಬಣ ಗೈರುಹಾಜರಾದರೂ ಸಹ ಶತಾಯಗತಾಯ ಈ ಕಾರ್ಯಕಾರಿಣಿಯ ಯಶಸ್ವಿಗೊಳಿಸಲೇಬೇಕೆಂದು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ತೀರ್ಮಾನಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಇದೇ 8ರಂದು ರಾಯಚೂರಿನಲ್ಲಿ ರಾಯಣ್ಣ ಬ್ರಿಗೇಡ್ನ ಅಭ್ಯಾಸ ವರ್ಗ ನಡೆಸುವ ಮೂಲಕ ತೊಡೆತಟ್ಟಲು ಈಶ್ವರಪ್ಪ ಸಿದ್ಧತೆ ನಡೆಸಿದ್ದಾರೆ.
ಇನ್ನು ಕಾರ್ಯಕಾರಿಣಿಯಲ್ಲಿ ಯಡಿಯೂರಪ್ಪ ಬೆಂಬಲಿಗರು ಈಶ್ವರಪ್ಪ ವಿರುದ್ಧ ಕ್ರಮಕ್ಕೆ ಆಗ್ರಹಿಸುವ ಸಾಧ್ಯತೆ ನಿಚ್ಚಳವಾಗಿದೆ. ಈ ಮೂಲಕ ಭಿನ್ನಮತೀಯರ ಮಟ್ಟಹಾಕಬೇಕೆಂಬ ಸಂದೇಶವನ್ನ ಪಕ್ಷದ ವರಿಷ್ಟರಿಗೆ ರವಾನಿಸಲು ಸಿದ್ದತೆ ನಡೆಸಿದ್ದಾರೆ. ಹೀಗೆ ಉಭಯ ಬಣಗಳು ತಮ್ಮದೇ ರಾಜಕೀಯ ಲೆಕ್ಕಾಚಾರಗಳೊಂದಿಗೆ ಮುಂದುವರಿಯುತ್ತಿವೆ. ಆದರೆ ರಾಜ್ಯ ಬಿಜೆಪಿಯ ಬಿಕ್ಕಟ್ಟಿನ ಕುರಿತು ವರದಿ ಪಡೆದಿರುವ ರಾಷ್ಟ್ರೀಯ ಬಿಜೆಪಿ ಅಧ್ಯಕ್ಷ ಅಮಿತ್ ಶಾ ತಮ್ಮದೇ ಮೂಲಗಳ ಮೂಲಕ ಎಲ್ಲ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ. ಉಭಯ ಬಣಗಳ ಕಾರ್ಯಕಾರಿಣಿ ರಾಜಕಾರಣ ಮುಗಿಯುತ್ತಿದ್ದಂತೆ ಅಮಿತ್ ಷಾ ಇವರೆಲ್ಲರ ವೈಯಕ್ತಿಕ ಪ್ರತಿಷ್ಟೆಯ ರಾಜಕಾರಣದ ಲೆಕ್ಕಾಚಾರ ತಲೆಕೆಳಗಾಗಿಸುವ ತೀರ್ಮಾನ ನೀಡುವ ಸಾಧ್ಯತೆ ನಿಚ್ಚಳವಾಗಿದೆ.
