ಬೆಂಗಳೂರು (ಆ. 17): ಅದು ಭಾರತ-ಪಾಕಿಸ್ತಾನ ನಡುವೆ ಯುದ್ಧದ ಸಮಯ. ಇಂದಿರಾ ಗಾಂಧಿ ಪ್ರಧಾನಿಯಾಗಿದ್ದರು. ದೇಶವೇ ಒಂದಾಗಿದೆ ಎಂಬ ಸಂದೇಶ ಸಾರಲು ಪಕ್ಷಭೇದ ಮರೆತು ಜನರಿಗೆ ಅವರಿಗೆ ಬೆಂಬಲ ನೀಡಿದ್ದರು. ಆಗ ಇಂದಿರಾಗಾಂಧಿ ಅವರು ದುರ್ಗೆಗೆ ಸಮಾನ ಎಂದು ಬಣ್ಣಿಸಿ, ರಾಷ್ಟ್ರದ ಸಂಕಟ ಎದುರಿಸಲು ಅವರೊಂದಿಗೆ ಇದ್ದೇವೆ ಎಂದು ಹೇಳಿದ ಮಹಾ ಪುರುಷ ಭಾರತ ರತ್ನ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ. 

ಪ್ರಸ್ತುತ ರಾಜಕೀಯ ಪರಿಸ್ಥಿತಿಯಲ್ಲಿ ಆಡಳಿತ-ವಿರೋಧ ಪಕ್ಷ ಎಂದು ಕಿತ್ತಾಡಿಕೊಂಡು ಟೀಕೆ ಮಾಡುವಲ್ಲಿ ತೊಡಗುತ್ತೇವೆ. ರಾಜ್ಯ, ದೇಶಕ್ಕೆ ಕಷ್ಟ ಬಂದರೆ ಬೆಂಬಲ ನೀಡುವುದಕ್ಕಿಂತ ಹೆಚ್ಚಾಗಿ ಟೀಕಾಪ್ರಹಾರದಲ್ಲಿ ಮುಳುಗುತ್ತೇವೆ. ಆದರೆ, ವಾಜಪೇಯಿ ಅವರು ಅಂತಹ ಕೆಲಸ ಮಾಡಲಿಲ್ಲ. ಬದಲಿಗೆ ಪಕ್ಷಭೇದ, ಧರ್ಮಭೇದ ಮರೆತು ಬೆಂಬಲ ನೀಡಿದ ಮಹಾನ್ ವ್ಯಕ್ತಿಯಾಗಿದ್ದರು. ಪಕ್ಷವನ್ನು ನಾಯಕನಾಗಿ ಕಟ್ಟುವುದಕ್ಕಿಂತ ಸಾಮಾನ್ಯ ಕಾರ್ಯಕರ್ತನಾಗಿ ದುಡಿದು ಪಕ್ಷ ಕಟ್ಟಿದ ವಿಶೇಷ ವ್ಯಕ್ತಿ.

70 ರ ದಶಕದ ವೇಳೆ ನಾನು ಪಕ್ಷದ ಶಿವಮೊಗ್ಗ ನಗರ ಕಾರ್ಯದರ್ಶಿಯಾಗಿದ್ದ ಸಂದರ್ಭದಲ್ಲಿ ಪಕ್ಷದ ಕಾರ್ಯಕ್ರಮವೊಂದನ್ನು ಆಯೋಜಿಸಲಾಗಿತ್ತು. ಆ ಕಾರ್ಯಕ್ರಮಕ್ಕೆ ವಾಜಪೇಯಿ ಆಗಮಿಸಬೇಕಾಗಿತ್ತು. ಉಡುಪಿಯಿಂದ ಶಿವಮೊಗ್ಗಕ್ಕೆ ಬರಬೇಕಾದರೆ ಹೆಲಿಕಾಪ್ಟರ್‌ನಲ್ಲಿ ಬರುವ ಬದಲು ಕಾರ್‌ನಲ್ಲಿ ಆಗಮಿಸಿದ್ದರು. ಮಾರ್ಗ ಮಧ್ಯೆ ಅಲ್ಲಲ್ಲಿ ನಿಲ್ಲಿಸಿಕೊಂಡು ಪ್ರಕೃತಿ ಸೌಂದರ್ಯವನ್ನು ಸವಿಯುತ್ತಾ ಬಂದಿದ್ದರು.  ಎಂದಿಗೂ ಶ್ರೀಮಂತಿಕೆಯ ಜೀವನ ನಡೆಸದೆ ಸಾಮಾನ್ಯ ಜೀವನ ಅವರದ್ದಾಗಿತ್ತು. ಭಾರತ ಒಂದೇ ಎಂದು ತೋರಿಸಿದಿರಿ 1989-94 ರ ಅವಧಿಯಲ್ಲಿ ಪಕ್ಷದ ರಾಜ್ಯಾಧ್ಯಕ್ಷನಾಗಿದ್ದೆ. ಆಗ ವಾಜಪೇಯಿ ಅವರು ರಾಷ್ಟ್ರೀಯ ಅಧ್ಯಕ್ಷರಾಗಿದ್ದರು. ವಿಧಾನಸಭೆ ಚುನಾವಣೆ ನಡೆದಾಗ
ಕೇವಲ ೪ ಸ್ಥಾನ ಹೊಂದಿದ್ದ ಬಿಜೆಪಿ ೪೦ ಸ್ಥಾನಗಳನ್ನು ಗೆದ್ದಿತು.

ಪಕ್ಷದ ನಾಯಕರಾದ ಬಿ.ಎಸ್.ಯಡಿಯೂರಪ್ಪ, ಅನಂತಕುಮಾರ್ ಇತರರೊಂದಿಗೆ ರಾಷ್ಟ್ರೀಯ ಕಾರ್ಯಕಾರಿಣಿ ವೇಳೆ ಮಾತನಾಡುತ್ತಿದ್ದಾಗ ಹಿಂದಿನಿಂದ ಬಂದು ಯಾರೋ ಗುದ್ದಿದರು. ಯಾರು ಎಂದು ಹಿಂತಿರುಗಿ ನೋಡಿದಾಗ ವಾಜಪೇಯಿ ನಿಂತಿದ್ದರು. 40 ಸ್ಥಾನಗಳನ್ನು ಗೆಲ್ಲಿಸಿದ್ದಕ್ಕೆ ಶುಭಾಶಯ ಕೋರಿದರು. ಸಾಮಾನ್ಯ ಕಾರ್ಯಕರ್ತರಿಗೂ ಬೆನ್ನು ತಟ್ಟುವ ಸ್ಫೂರ್ತಿ ತುಂಬುವ ವ್ಯಕ್ತಿತ್ವ ಅವರದ್ದು. ಉತ್ತರ ಭಾರತ-ದಕ್ಷಿಣ ಭಾರತ ಒಂದೇ ಎಂಬುದನ್ನು ತೋರಿಸಲು ಕರ್ನಾಟಕ ಸಾಕ್ಷಿಯಾಗಿದೆ ಎಂದು ಬಣ್ಣಿಸಿದರು.

ಆಗ ದಕ್ಷಿಣ ಭಾರತದವರನ್ನು ಮದ್ರಾಸಿಗಳು ಎಂದು ಕರೆಯಲಾಗುತ್ತಿತ್ತು. ಅದನ್ನು ದೂರ ಮಾಡಿ ಭಾರತ ಒಂದೇ ಎಂದು ತೋರಿಸಿಕೊಟ್ಟಿರಿ ಎಂದು ರಾಜ್ಯದ ನಾಯಕರಿಗೆ ಬೆನ್ನು ತಟ್ಟಿದರು. ವಾಜಪೇಯಿ ಪ್ರಧಾನಿಯಾದ ಬಳಿಕ 1999 ರಲ್ಲಿ ನಡೆದ ರಾಜ್ಯದ ವಿಧಾನಸಭಾ ಚುನಾವಣೆಯಲ್ಲಿ ನಾನು ಮತ್ತು ಯಡಿಯೂರಪ್ಪ ಅವರು ಸೋಲು ಅನುಭವಿಸಿದೆವು. ಗೆಲ್ಲುತ್ತೇವೆ ಎಂಬ ಅತಿಯಾದ ವಿಶ್ವಾಸವೇ ಸೋಲಿಗೆ ಕಾರಣವಾಗಿತ್ತು. ಆಗ ಯಡಿಯೂರಪ್ಪ ಅವರನ್ನು ವಿಧಾನಪರಿಷತ್
ಸದಸ್ಯರನ್ನಾಗಿ ಮಾಡಿ, ನನ್ನನ್ನು ಕೇಂದ್ರ ರೇಷ್ಮೆ ಮಂಡಳಿ ಅಧ್ಯಕ್ಷರನ್ನಾಗಿ ಮಾಡಿದರು. ಆಗ ಚೀನಾ ರೇಷ್ಮೆ ನಮ್ಮ ದೇಶಕ್ಕೆ ಬಹಳ ಆಮದು ಆಗುತ್ತಿತ್ತು.

ಈ ಬಗ್ಗೆ ದೆಹಲಿಗೆ ತೆರಳಿ ವಾಜಪೇಯಿ ಅವರ ಗಮನಕ್ಕೆ ತಂದು ದೇಶದ ರೈತರ ಹಿತದೃಷ್ಟಿಯಿಂದ ಆಮದು ತೆರಿಗೆ ಹೆಚ್ಚಳ ಮಾಡುವಂತೆ ಮನವಿ ಮಾಡಿದೆ. ನಾನು ಮಾಡಿದ ಮನವಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ವಾಜಪೇಯಿ, ನಾನು ದೆಹಲಿಯಿಂದ ಬೆಂಗಳೂರಿಗೆ ವಾಪಸಾದ ಒಂದು ವಾರದಲ್ಲಿಯೇ ಆಮದು ತೆರಿಗೆ ಹೆಚ್ಚಳ ಮಾಡಿ ಆದೇಶ ಮಾಡಿದರು. ಹಿಂದಿ ಭಾಷಣ ಮಾಡಲು ಪರದಾಟ ರಾಜ್ಯದಲ್ಲಿ ಆಗಿನ್ನೂ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಿರಲಿಲ್ಲ. ದಕ್ಷಿಣ ಭಾರತದಲ್ಲಿ ಬಿಜೆಪಿಯನ್ನು ಬೆಳೆಸಬೇಕು ಎಂಬ ಹಂಬಲ ಹೊಂದಿದ್ದರು. ಈ ವೇಳೆ ಬೆಂಗಳೂರಲ್ಲಿ ಪಕ್ಷದ ಪದಾಧಿಕಾರಿಗಳ ಸಮಾವೇಶ ಆಯೋಜಿಸಲಾಗಿತ್ತು. ಉದ್ಘಾಟನೆಗಾಗಿ ವಾಜಪೇಯಿ ಬಂದಿದ್ದರು.

ಕಾರ್ಯಕ್ರಮಕ್ಕೆ ಹಿಂದಿನ ದಿನ ವಾಜಪೇಯಿ ಅವರು ನನಗೆ ಹಿಂದಿಯಲ್ಲಿ ಸ್ವಾಗತ ಮಾಡಬೇಕು ಎಂದು ಸೂಚಿಸಿದ್ದರು. ನನಗೆ ಹಿಂದಿ ಭಾಷೆಯೇ ಬರುವುದಿಲ್ಲ. ಏನು ಮಾಡಬೇಕು ಎಂದು ದಿಕ್ಕು ತೋಚದೆ ಯಾರದ್ದೋ ಬಳಿ ಬರೆಸಿಕೊಂಡು ರಾತ್ರಿಯಿಡೀ ಕಂಠಪಾಠ ಮಾಡಿದೆ. ಆದರೆ, ವೇದಿಕೆಗೆ ಬಂದು ಸ್ವಾಗತ ಭಾಷಣ ಮಾಡಲು ಆರಂಭಿಸುತ್ತಿದ್ದಂತೆ ಕಂಠಪಾಠ ಮಾಡಿದ್ದೆಲ್ಲ\ ಮರೆತು ಹೋಯಿತು. ಅರ್ಧಂಬರ್ಧ ಮಾತನಾಡುತ್ತಲೇ  ವೇದಿಕೆ ಮೇಲಿದ್ದ ವಾಜಪೇಯಿ ಅವರತ್ತ ನೋಡಿದೆ. ಆಗ ಅವರು ಭಯಪಡಬೇಡ ಮಾತನಾಡು ಎಂದು ಸ್ಫೂರ್ತಿ ನೀಡಿದರು. ಹೀಗೆ ಪ್ರತಿಯೊಬ್ಬರಿಗೂ ಸ್ಫೂರ್ತಿದಾಯಕ ಮಾತುಗಳನ್ನು ಆಡಿ ಹುರಿದುಂಬಿಸುತ್ತಿದ್ದರು.

ರಾಜ್ಯದಲ್ಲಿ ಜೆಡಿಎಸ್ -ಬಿಜೆಪಿ ನೇತೃತ್ವದ ಸಮ್ಮಿಶ್ರ ಸರ್ಕಾರ ರಚನೆಯಾದ ಬಳಿಕ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸೇರಿದಂತೆ ನಮ್ಮ ಪಕ್ಷದ ನಾಯಕರೆಲ್ಲ ದೆಹಲಿಗೆ ಹೋಗಿ ವಾಜಪೇಯಿ ಅವರನ್ನು ಭೇಟಿ ಮಾಡಿದ್ದೆವು. ಆಗ ರಾಷ್ಟ್ರದಲ್ಲಿ ಕಾಂಗ್ರೆಸ್ಸೇತರ ಸರ್ಕಾರ ರಚನೆ ಮಾಡಿದ್ದಕ್ಕೆ ಧನ್ಯವಾದ ಹೇಳಿ ಅಭಿನಂದಿಸಿದ್ದರು. ಅವರಿಗೆ ದೇಶದ ಅಭಿವೃದ್ಧಿ ಬಿಟ್ಟರೆ ಬೇರಾವ ಯೋಚನೆ ಇರಲಿಲ್ಲ. ಕರ್ನಾಟಕದ ಜತೆಯೂ ಉತ್ತಮ ಬಾಂಧವ್ಯವನ್ನು ಹೊಂದಿದ್ದರು. ಲೋಕಸಭೆ ಚುನಾವಣೆಯಲ್ಲಿ ಆಂಧ್ರಪ್ರದೇಶ, ಗುಜರಾತ್ ರಾಜ್ಯದಿಂದ ಒಬ್ಬೊಬ್ಬರು ಗೆದ್ದಿರುವುದು ಬಿಟ್ಟರೆ ಬೇರೆ ಯಾರೂ ಜಯಗಳಿಸಿರಲಿಲ್ಲ.

ಆಗ ಬೆಂಗಳೂರಿನ ಗಾಯನ ಸಮಾಜದ ಸಭಾಂಗಣದಲ್ಲಿ ಆಯೋಜಿಸಿದ್ದ ಪಕ್ಷದ ಸಭೆಗೆ ಆಗಮಿಸಿದ್ದ ಅವರು ಚುನಾವಣೆಯಲ್ಲಿ ಸೋತಿದ್ದೇವೆ ನಿಜ. ಮತ್ತೊಬ್ಬರ ಬಳಿ ಭಿಕ್ಷೆ ಬೇಡುವುದಿಲ್ಲ ಹಾಗೂ ರಾಜಕೀಯವಾಗಿ ಬೆನ್ನು ತೋರಿಸುವುದಿಲ್ಲ. ಪಕ್ಷ ಕಟ್ಟಿ ಅಧಿಕಾರಕ್ಕೆ ತರೋಣ ಎಂದು ಕಾರ್ಯಕರ್ತರಿಗೆ ಸ್ಫೂರ್ತಿ ನೀಡಿದರು. ಅವರಾಡುತ್ತಿದ್ದ ಸ್ಫೂರ್ತಿ ಮಾತುಗಳಿಂದಲೇ ಈಗ ನರೇಂದ್ರ ಮೋದಿಯಂತಹ ವ್ಯಕ್ತಿ ಪ್ರಧಾನಿಯಾಗಲು ಸಾಧ್ಯವಾಗಿದೆ.

ಪ್ಲೇಟ್‌ನಲ್ಲಿದ್ದ ಮೊಟ್ಟೆ ಎಗರಿಸಿದರು!

ಗೋವಾದಲ್ಲಿ ಪಕ್ಷದ ರಾಷ್ಟ್ರೀಯ ಕಾರ‌್ಯಕಾರಿಣಿ ನಡೆಯುತ್ತಿತ್ತು. ಅಲ್ಲಿ ದ್ವೀಪದಂತಿದ್ದ ಪ್ರದೇಶವೊಂದರಲ್ಲಿ ಸಾಂಸ್ಕೃತಿಕ ಕಾರ‌್ಯಕ್ರಮ ನಡೆಯಿತು. ವಾಜಪೇಯಿ ಸ್ವತಃ ಕವಿಯಾಗಿದ್ದು, ಶಾಯಿರಿಗಳನ್ನು ಹೇಳಿದರು. ಆಗ ಅನಂತ್ ಕುಮಾರ್ ಅವರು ಸುಮ್ಮನೆ ಇರಲಾದರೆ ಈಶ್ವರಪ್ಪ ಅವರು ಹಾಡು ಹೇಳುತ್ತಾರೆ ಎಂದುಬಿಟ್ಟರು. ಅವರೆಲ್ಲರ ಒತ್ತಾಯಕ್ಕೆ ದೇಶಭಕ್ತಿ ಗೀತೆ ಹೇಳಿದೆ. ವಾಜಪೇಯಿ ಮೆಚ್ಚುಗೆ ವ್ಯಕ್ತಪಡಿಸಿದರು. ಬಳಿಕ ಊಟ ಮಾಡುವ ವೇಳೆ ತಲೆತಗ್ಗಿಸಿಕೊಂಡು ತಿನ್ನುತ್ತಿದ್ದೆ.

ಆ ವೇಳೆ ನನ್ನ ತಟ್ಟೆಯಲ್ಲಿದ್ದ ಮೊಟ್ಟೆಯನ್ನು ಯಾರೋ ಕೈಹಾಕಿ ತೆಗೆದುಕೊಂಡರು. ಯಾರು ಎಂದು ತಲೆ ಎತ್ತಿ ನೋಡಿದರೆ ವಾಜಪೇಯಿ. ಹಾಗೆ ಸಾಮಾನ್ಯರಲ್ಲಿ ಸಾಮಾನ್ಯರು ಎಂಬಂತೆ ನಡೆದುಕೊಳ್ಳುತ್ತಿದ್ದರು. ಅಧಿಕಾರ ಇದೆ ಎಂದು ಎಂದಿಗೂ ಗರ್ವದಿಂದ ನಡೆದುಕೊಂಡೇ ಇಲ್ಲ. ವಾಜಪೇಯಿ ಅವರ ನಿಧನವು ಕೇವಲ ಬಿಜೆಪಿ, ಭಾರತಕ್ಕಷ್ಟೇ ನಷ್ಟವಲ್ಲ. ವಿಶ್ವಕ್ಕೇ ನಷ್ಟವಾಗಿದೆ. ದೊಡ್ಡ ಆಸ್ತಿ ದೂರವಾಗಿದೆ.