ಚಿತ್ರಕ್ಕೆ ಸರಿಯಾದ ರೀತಿಯಲ್ಲಿ ಪ್ರಚಾರ ಮಾಡಿಲ್ಲವಾದ್ದರಿಂದ "ಎರಡು ಕನಸು" ಸೋತಿತು ಎಂಬುದು ನಿರ್ದೇಶಕ ಮದನ್ ಅಸಮಾಧಾನ. ಈ ಕಾರಣಕ್ಕೆ ತನ್ನ ಸ್ನೇಹಿತರಾದ ಚಲಪತಿಮೂರ್ತಿ ಮತ್ತು ಮೋಹನ್ ಕಿರಣ್ ಅವರ ನೆರವಿನಿಂದ ಪರಮೇಶ್'ರನ್ನು ಅಪಹರಣ ಮಾಡಿಸಿದ ಆರೋಪ ಮದನ್ ಮೇಲಿದೆ.

ಬೆಂಗಳೂರು(ಮೇ 27): ಚಿತ್ರಕ್ಕೆ ಸರಿಯಾಗಿ ಪ್ರಚಾರ ಕೊಟ್ಟಿಲ್ಲವೆಂದು ಸಿಟ್ಟಿಗೆದ್ದು ಜಾಹೀರಾತು ಕಂಪನಿಯೊಂದರ ಮಾಲೀಕನನ್ನು ಅಪಹರಣ ಮಾಡಿದ ಆರೋಪದ ಮೇಲೆ ನಿರ್ದೇಶಕ ಮದನ್ ಸೇರಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಾದ ಮದನ್ ಅವರು ಇತ್ತೀಚೆಗೆ ತೆರೆ ಕಂಡ "ಎರಡು ಕನಸು" ಚಿತ್ರದ ನಿರ್ದೇಶಕರಾಗಿದ್ದಾರೆ. ವಿಜಯ್ ರಾಘವೇಂದ್ರ ಮತ್ತು ಕಾರುಣ್ಯ ರಾಮ್ ಅಭಿನಯದ ಎರಡು ಕನಸು ಚಿತ್ರ ಬಾಕ್ಸಾಫೀಸ್'ನಲ್ಲಿ ಮುಗ್ಗರಿಸಿದೆ. ಪರಮೇಶ್ ಎಂಬುವವರ ಸಂಸ್ಥೆಯೊಂದಿಗೆ ಈ ಚಿತ್ರದ ಪ್ರೊಮೋಷನ್'ಗೆ 8 ಲಕ್ಷ ರೂ. ಒಪ್ಪಂದ ಮಾಡಿಕೊಳ್ಳಲಾಗಿತ್ತೆನ್ನಲಾಗಿದೆ. ಚಿತ್ರಕ್ಕೆ ಸರಿಯಾದ ರೀತಿಯಲ್ಲಿ ಪ್ರಚಾರ ಮಾಡಿಲ್ಲವಾದ್ದರಿಂದ "ಎರಡು ಕನಸು" ಸೋತಿತು ಎಂಬುದು ನಿರ್ದೇಶಕ ಮದನ್ ಅಸಮಾಧಾನ. ಈ ಕಾರಣಕ್ಕೆ ತನ್ನ ಸ್ನೇಹಿತರಾದ ಚಲಪತಿಮೂರ್ತಿ ಮತ್ತು ಮೋಹನ್ ಕಿರಣ್ ಅವರ ನೆರವಿನಿಂದ ಪರಮೇಶ್'ರನ್ನು ಅಪಹರಣ ಮಾಡಿಸಿದ ಮದನ್ 8 ಲಕ್ಷ ವಾಪಸ್ ಕೊಡುವಂತೆ ತಾಕೀತು ಮಾಡಿದ್ದರೆಂಬ ಆರೋಪವಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಮಾಗಡಿ ರಸ್ತೆ ಠಾಣೆ ಪೊಲೀಸರು ಮದನ್, ಚಲಪತಿಮೂರ್ತಿ ಮತ್ತು ಮೋಹನ್ ಕಿರಣ್ ಈ ಮೂವರನ್ನೂ ಬಂಧಿಸಿ ಮುಂದಿನ ವಿಚಾರಣೆ ನಡೆಸುತ್ತಿದ್ದಾರೆ.