ಹರಿದ್ವಾರ(ಫೆ.06): ಕುಂಭಮೇಳದಲ್ಲಿ ಸುಮ್ನೇ ಏ.. ಅಂದ್ರೆ ಸಾಕು ಏನಿಲ್ಲವೆಂದರೂ ಸುಮಾರು 10 ಸಾವಿರ ನಾಗಾ ಸಾಧುಗಳು ನಿಮ್ಮತ್ತ ದುರುಗುಟ್ಟುತ್ತಾರೆ.

ಕುಂಭಮೇಳ ಮತ್ತು ನಾಗಾ ಸಾಧುಗಳ ನಡುವೆ ಬಿಡಿಸಲಾರದ ನಂಟು. ಕುಂಭಮೇಳದಲ್ಲಿ ಅಸಲಿಗೆ ನಾಗಾ ಸಾಧುಗಳದ್ದೇ ದರ್ಬಾರು. ಅದರಂತೆ ಪ್ರಸಕ್ತ ಕುಂಭಮೇಳ ಕೂಡ ಸಾವಿರಾರು ನಾಗಾ ಸಾಧುಗಳ ಬರುವಿಕೆಗೆ ಸಾಕ್ಷಿಯಾಯಿತು.

ಈ ಬಾರಿಯ ಕುಂಭಮೇಳದಲ್ಲಿ ಭಾಗವಹಿಸಿದ್ದ ನಾಗಾ ಸಾಧುಗಳೇನು ಸಾಮಾನ್ಯರಲ್ಲ. ಒಬ್ಬರ ಬಳಿ ಎಂಜಿಯರಿಂಗ್ ಪದವಿ ಇದ್ದರೆ ಮತ್ತೊಬ್ಬರ ಬಳಿ ಡಾಕ್ಟರ್ ಪದವಿ ಇದೆ. ಇನ್ನೊಬ್ಬರ ಬಳಿ ಎಂಬಿಎ ಪದವಿ ಇದ್ದರೆ ಮತ್ತೊಬ್ಬರು ದ್ವಿತೀಯ ಪಿಯುಸಿಯಲ್ಲಿ ರಾಜ್ಯಕ್ಕೇ ಪ್ರಥಮ ಬಂದವರಿದ್ದಾರೆ.

ಹೌದು, ಕಚ್ ನ ರಜತ್ ಕುಮಾರ್ ರಾಯ್ ಎಂಬ 27 ವರ್ಷದ ನಾಗಾ ಸಾಧು ಬಳಿ ಮರೈನ್ ಎಂಜಿನಿಯರಿಂಗ್ ಪದವಿ ಇದೆ. ಅದರಂತೆ ಶಂಭು ಗಿರಿ ಎಂಬ 29 ವರ್ಷದ ನಾಗಾ ಸಾಧು ಉಕ್ರೇನ್ ವಿವಿಯಿಂದ ಎಂಬಿಎ ಪದವಿ ಪಡೆದಿದ್ದಾರೆ.

ಉಜ್ಜಯನಿಯ ಘನ್ ಶಾಮ್ ಗಿರಿ ಎಂಬ 18 ವರ್ಷದ ನಾಗಾ ಸಾಧು ಪಿಯುಸಿ ದ್ವಿತೀಯ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಬಂದವರು. ಅಖಿಲ ಭಾರತ ಅಖರ ಪರಿಷದ್ (ABAP) ದಾಖಲೆಯ ಪ್ರಕಾರ ದೇಶದಲ್ಲಿ ಮಹಿಳೆಯರು ಮತ್ತು ಪುರುಷರು ಸೇರಿ ಸುಮಾರು 10 ಸಾವಿರ ನಾಗಾ ಸಾಧುಗಳಿದ್ದು, ಇವರೆಲ್ಲಾ ಕಠಿಣ ಧಾರ್ಮಿಕ ಪದ್ದತಿಗಳನ್ನು ಆಚರಿಸುತ್ತಿದ್ದಾರೆ.

ಇದೇ ವೇಳೆ ಕೇವಲ ಹಿಂದುಗಳಷ್ಟೇ ಅಲ್ಲದೇ ಕೆಲವು ಮುಸ್ಲಿಂ ಮತ್ತು ಕ್ರಿಶ್ಚಿಯನ್ ನಾಗಾ ಸಾಧುಗಳೂ ಕೂಡ ಇದ್ದಾರೆ ಎಂದು ಎಬಿಎಪಿ ಮಾಹಿತಿ ನೀಡಿದೆ. ಇವರಲ್ಲಿ ಬಹುತೇಕರು ಉನ್ನತ ಶಿಕ್ಷಣ ಪಡೆದವರಾಗಿದ್ದಾರೆ ಎಂಬುದು ವಿಶೇಷ.