ಇಂಜಿನಿಯರ್’ಗಳ ಭವಿಷ್ಯ ರೂಪಿಸುವ ವಿಟಿಯು ಕಚೇರಿ ಇಂದು ರಣರಂಗದಂತಾಗಿತ್ತು. ಎರಡು ವರ್ಷಗಳ ಸತತ ಆಕ್ರೋಶದ ಕಟ್ಟೆಯೊಡೆದ ವಿದ್ಯಾರ್ಥಿಗಳು ಇಂದು ಕಚೇರಿಯೊಳಗೆ ನುಗ್ಗಿ ವಿಟಿಯು ಮುಂಭಾಗದಲ್ಲಿ ಗದ್ದಲ ಗಲಾಟೆ ಎಬ್ಬಿಸಿದರು.
ಬೆಂಗಳೂರು (ಆ.30): ಇಂಜಿನಿಯರ್’ಗಳ ಭವಿಷ್ಯ ರೂಪಿಸುವ ವಿಟಿಯು ಕಚೇರಿ ಇಂದು ರಣರಂಗದಂತಾಗಿತ್ತು. ಎರಡು ವರ್ಷಗಳ ಸತತ ಆಕ್ರೋಶದ ಕಟ್ಟೆಯೊಡೆದ ವಿದ್ಯಾರ್ಥಿಗಳು ಇಂದು ಕಚೇರಿಯೊಳಗೆ ನುಗ್ಗಿ ವಿಟಿಯು ಮುಂಭಾಗದಲ್ಲಿ ಗದ್ದಲ ಗಲಾಟೆ ಎಬ್ಬಿಸಿದರು.
ಇಂದು ನಾಗರಬಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿವಿ ಪ್ರಾದೇಶಿಕ ಕಚೇರಿ ಅಕ್ಷರಶಃ ರಣರಂಗದಂತಾಗಿತ್ತು.ವಿದ್ಯಾರ್ಥಿಗಳು ಕಂಪೌಂಡ್ ಹಾರಿ ಕಚೇರಿಗೆ ನುಗ್ಗುತ್ತಿದ್ದರು.ವಿದ್ಯಾರ್ಥಿನಿಯರು ಜಪ್ಪಯ್ಯ ಅಂದ್ರೂ ಕುಳಿತಲ್ಲಿಂದ ಕದಲುತ್ತಿರಲಿಲ್ಲ. ಮತ್ತೊಂದು ಕಡೆಯಿಂದ ನುಗ್ಗುತ್ತಿದ್ದ ವಿದ್ಯಾರ್ಥಿಗಳು ವಿಟಿಯು ಕಚೇರಿಗೆ ಬೀಗ ಜಡಯುತ್ತೇವೆ ಅಂತ ಹೊರಟಿದ್ರು. ಇಷ್ಟೆಲ್ಲ ಗದ್ದಲ ಗಲಾಟೆ ಶುರುವಾಗಿದ್ದು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವ ವಿದ್ಯಾಲಯ ಇಂಜಿನಿಯರಿಂಗ್ ವಿದ್ಯಾರ್ಥಿಗಳ ಸಮಸ್ಯೆ ಬಗೆಹರಿಸದೇ ಇದ್ದದ್ದಕ್ಕೆ.
ವಿಟಿಯು ಗೊಂದಲಗಳ ಗೂಡಾಗುತ್ತಿದ್ದು ವಿಟಿಯು ಪರೀಕ್ಷಾ ಕ್ರಮ ಮತ್ತು ಇಯರ್ ಬ್ಯಾಕ್ ಪದ್ದತಿ ವಿರುದ್ದ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಬೀದಿಗಿಳಿಯುತ್ತಿದ್ದಾರೆ. ಇಂದು ವಿಟಿಯು ಕ್ರಮವನ್ನು ಖಂಡಿಸಿ ಎಬಿವಿಪಿ ಕಾರ್ಯಕರ್ತರು ಮತ್ತು ಇಂಜಿನಿಯರಿಂಗ್ ವಿದ್ಯಾರ್ಥಿಗಳು ವಿಟಿಯು ಪ್ರಾದೇಶಿಕ ಕಚೇರಿಗೆ ಮುತ್ತಿಗೆ ಹಾಕಿದರು. ಪೊಲೀಸರ ಒತ್ತಡಕ್ಕೂ ಮಣಿಯದೇ ಪ್ರಾದೇಶಿಕ ಕಚೇರಿಗೆ ಬೀಗ ಜಡಿಯುತ್ತೀವಿ ಅಂತ ಮುನ್ನುಗ್ಗಿದ್ದರು.
ಇಂಜಿನಿಯರಿಂಗ್ ವಿದ್ಯಾರ್ಥಿಗಳ ಸಮಸ್ಯೆಯನ್ನು ಬಗೆಹರಿಸುವಂತೆ ಆಗ್ರಹಿಸಿ ಸೆಪ್ಟೆಂಬರ್ 1 ರಂದು ರಾಜ್ಯಾದ್ಯಂತ ಇಂಜಿನಿಯರಿಂಗ್ ಕಾಲೇಜುಗಳಿಗೆ ಬಂದ್ ಕರೆ ನೀಡಲಾಗಿದೆ. ಸುಮಾರು 4ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ತಮ್ಮ ಕಾಲೇಜುಗಳನ್ನು ಬಹಿಷ್ಕರಿಸಿ ಬೀದಿಗಿಳಿಯಲಿದ್ದಾರೆ.
ಇಂಜಿನಿಯರಿಂಗ್ ವಿದ್ಯಾರ್ಥಿಗಳ ಬೇಡಿಕೆಗಳೇನು?
ಇಯರ್ ಬ್ಯಾಕ್ ಪದ್ದತಿಯನ್ನು ಕ್ಯಾನ್ಸಲ್ ಮಾಡಬೇಕು
ಸಿಬಿಸಿಎಸ್'ಯೇತರ ವಿದ್ಯಾರ್ಥಿಗಳಿಗೆ ಕ್ರಿಟಿಕಲ್ ಇಯರ್ ಬ್ಯಾಕ್ ರದ್ದುಗೊಳಿಸಿ
ಸಿಬಿಸಿಎಸ್ ವಿದ್ಯಾರ್ಥಿಗಳಿಗೆ ಸಪ್ಲಿಮೆಂಟರಿ ಪರೀಕ್ಷೆ ಜಾರಿಗೊಳಿಸಿ
ಪರೀಕ್ಷಾ ಶುಲ್ಕವನ್ನು ಕಡಿಮೆಗೊಳಿಸಲು ಆಗ್ರಹ
ಮೌಲ್ಯಮಾಪನ, ಮರು ಮೌಲ್ಯಮಾಪನ ಪ್ರಕ್ರಿಯೆ ಸರಿಪಡಿಸುವಂತೆ ಆಗ್ರಹ.
ಇವಿಷ್ಟು ಆಗ್ರಹಗಳನ್ನು ಇಟ್ಟುಕೊಂಡು ಇಂದು ಎಬಿವಿಪಿ ಕೂಡ ಬೃಹತ್ ಪ್ರತಿಭಟನೆ ನಡೆಸಿತು. ಪ್ರಾದೇಶಿಕ ಕಚೇರಿಯಲ್ಲಿದ್ದ ಅಧಿಕಾರಿಗಳು ವಿದ್ಯಾರ್ಥಿಗಳ ಸಮಸ್ಯೆಯನ್ನು ಕುಲಪತಿಗಳ ಗಮನಕ್ಕೆ ತರುವುದಾಗಿ ತಿಳಿಸಿದ್ದಾರೆ.
ಇಂಜಿನಿಯರಿಂಗ್ ವಿದ್ಯಾರ್ಥಿಗಳ ಸಮಸ್ಯೆಗೆ ಬೆದರಿರೋ ಆಡಳಿತ ವರ್ಗ ನಾಳೆ ಮತ್ತು ನಾಡಿದ್ದು ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿವಿಯಲ್ಲಿ ವಿಶೇಷ ಸಭೆ ಆಯೋಜಿಸಿದೆ. ಸಭೆಯಲ್ಲಿ ವಿದ್ಯಾರ್ಥಿಗಳ ಬೇಡಿಕೆಗಳು ಬಗೆಹರಿಸುವ ನಿಟ್ಟಿನಲ್ಲಿ ಚರ್ಚೆ ನಡೆಯಲಿದೆ. ಸಭೆ ವಿಫಲವಾದರೆ ವಿಟಿಯು ಇಂಜಿನಿಯರಿಂಗ್ ವಿದ್ಯಾರ್ಥಿಗಳು ಬೀದಿಗಿಳಿದು ರಣಕಹಳೆ ಮೊಳಗಿಸುವುದಂತೂ ಗ್ಯಾರಂಟಿ.
(ಸಾಂದರ್ಭಿಕ ಚಿತ್ರ)
