ಅಹಮದಾಬಾದ್‌: ಕೆಲವೇ ವರ್ಷಗಳ ಹಿಂದೆ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಸೀಟು ಸಿಗುವುದೇ ದೊಡ್ಡ ಸಂಗತಿಯಾಗಿತ್ತು. ಆದರೆ, ಇದೀಗ ಎಂಜಿನಿಯರಿಂಗ್‌ ಕಾಲೇಜುಗಳಿಗೂ ವಿದ್ಯಾರ್ಥಿಗಳ ಕೊರತೆ ಎದುರಾಗಿದೆ. ಹೀಗಾಗಿ ವಿದ್ಯಾರ್ಥಿಗಳನ್ನು ಆಕರ್ಷಿಸಲು 2,500 ರು. ಕನಿಷ್ಠ ಶುಲ್ಕದಿಂದ ಹಿಡಿದು, ಉಚಿತ ಲ್ಯಾಪ್‌ಟಾಪ್‌, ಬೈಕ್‌ಗಳನ್ನು ನೀಡುವ ಆಫರ್‌ ಅನ್ನು ಖಾಸಗಿ ಕಾಲೇಜುಗಳು ಪ್ರಕಟಿಸುತ್ತಿವೆ.

ಗುಜರಾತಿನಲ್ಲಿ ಮೊದಲ ಸುತ್ತಿನ ಸಿಇಟಿ ಕೌನ್ಸಿಲಿಂಗ್‌ ಬಳಿಕ 55,422 ಎಂಜಿನಿಯರಿಂಗ್‌ ಸೀಟುಗಳ ಪೈಕಿ 34,642 ಸೀಟುಗಳು ಖಾಲಿ ಉಳಿದಿವೆ. ಹೀಗಾಗಿ ಕೆಲವು ಕಾಲೇಜುಗಳನ್ನು ಮುಚ್ಚುವ ಪರಿಸ್ಥಿತಿ ಎದುರಾಗಿದೆ. 

ವಿದ್ಯಾರ್ಥಿಗಳನ್ನು ಆಕರ್ಷಿಸುವ ನಿಟ್ಟಿನಿಂದ ಖಾಸಗಿ ಶಾಲೆಗಳು ನಾನಾ ಆಫರ್‌ಗಳನ್ನು ಪ್ರಕಟಿಸುತ್ತಿವೆ. ಮೊದಲ ಸೆಮಿಸ್ಟರ್‌ ಶುಲ್ಕ ಮನ್ನಾ, ಉಚಿತ ಲ್ಯಾಪ್‌ಟಾಪ್‌, ಹಾಸ್ಟೆಲ್‌, ಸಂಚಾರ ಭತ್ಯೆ, ನಾಲ್ಕು ವರ್ಷದ ಕೋರ್ಸ್‌ ಮುಗಿಸಿದ ವಿದ್ಯಾರ್ಥಿಗಳಿಗೆ ಬೈಕ್‌ ನೀಡುವುದಾಗಿ ಆಫರ್‌ ನೀಡುತ್ತಿವೆ.

ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (ಎಐಸಿಟಿಇ) ಬಿಡುಗಡೆ ಮಾಡಿರುವ ದತ್ತಾಂಶವೊಂದರ ಪ್ರಕಾರ, ದೇಶದೆಲ್ಲೆಡೆ ಇರುವ 3,291 ಎಂಜಿನಿಯರಿಂಗ್‌ ಕಾಲೇಜುಗಳ 15.5 ಲಕ್ಷ ಎಂಜಿನಿಯರಿಂಗ್‌ ತರಗತಿಗಳ ಸೀಟುಗಳ ಪೈಕಿ 2016​17ನೇ ಸಾಲಿನಲ್ಲಿ ಶೇ.50ರಷ್ಟುಸೀಟುಗಳು ಖಾಲಿ ಉಳಿದಿವೆ. 2015​-16ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿಯೂ 14.76 ಲಕ್ಷ ಸೀಟುಗಳ ಪೈಕಿ ಅರ್ಧದಷ್ಟುಸೀಟುಗಳು ಖಾಲಿ ಉಳಿದಿದ್ದವು.