ಜಮ್ಮು : ಜಮ್ಮು-ಕಾಶ್ಮೀರ ಸರ್ಕಾರದಿಂದ ಹಿಂದೆ ಸರಿದ ಬಗ್ಗೆ ಇದೇ ಮೊದಲ ಬಾರಿ ಸವಿಸ್ತಾರವಾಗಿ ಮೌನ ಮುರಿದಿರುವ ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಅವರು, ಕೇಂದ್ರ ಸರ್ಕಾರ ನೀಡಿದ ಕೊಡುಗೆಗಳನ್ನು ಬಿಜೆಪಿ ಭದ್ರ ನೆಲೆಯಾದ ಜಮ್ಮು ಹಾಗೂ ಲಡಾಖ್‌ ಭಾಗಗಳಲ್ಲಿ ಅನುಷ್ಠಾನಗೊಳಿಸಲು ಮೆಹಬೂಬಾ ಮುಫ್ತಿ ಸರ್ಕಾರ ನಿರ್ಲಕ್ಷ್ಯ ತೋರಿತು. ಅದಕ್ಕೆಂದೇ ಸರ್ಕಾರದಿಂದ ನಾವು ಮುಫ್ತಿಗೆ ನೀಡಿದ್ದ ಬೆಂಬಲ ವಾಪಸು ಪಡೆದೆವು ಎಂದು ಹೇಳಿದರು.

ಬಿಜೆಪಿ ಮೂಲವಾದ ಜನಸಂಘದ ಸಂಸ್ಥಾಪಕ ಶ್ಯಾಮಪ್ರಸಾದ ಮುಖರ್ಜಿ ಅವರ ಪುಣ್ಯದಿನದ ನಿಮಿತ್ತ ಜಮ್ಮುವಿಲ್ಲಿ ಶನಿವಾರ ಸಂಜೆ ಏರ್ಪಡಿಸಿದ್ದ ಬೃಹತ್‌ ರಾರ‍ಯಲಿಯಲ್ಲಿ ಮಾತನಾಡಿದ ಶಾ, ರಾಜ್ಯದ ಅಭಿವೃದ್ಧಿಗೆ ಜಮ್ಮು ಸ್ಮಾರ್ಟ್‌ ಸಿಟಿ ಸೇರಿದಂತೆ ಸಾವಿರಾರು ಕೋಟಿ ರು.ಗಳ ಪ್ಯಾಕೇಜನ್ನು ಹಾಗೂ ವಿವಿಧ ಅವಕಾಶಗಳನ್ನು ಮೋದಿ ಸರ್ಕಾರ ನೀಡಿತು. ಆದರೆ ಇವುಗಳ ಜಾರಿಗೆ ಬಿಜೆಪಿ ಪಾಲುದಾರ ಪಕ್ಷವಾದ ಪಿಡಿಪಿ ಹಿಂದೇಟು ಹಾಕಿತು. ಸರ್ಕಾರದಲ್ಲಿದ್ದು ಗುದ್ದಾಡುವುದಕ್ಕಿಂತ ಹೊರಗೆ ಬಂದು ಇದರ ವಿರುದ್ಧ ಮಾತನಾಡಿದರೆ ಒಳ್ಳೆಯದೆಂದು ಸರ್ಕಾರದಿಂದ ಹೊರಬರಲು ತೀರ್ಮಾನಿಸಿದೆವು ಎಂದು ಶಾ ಹೇಳಿದರು. ವಿಶೇಷವಾಗಿ ಬಿಜೆಪಿ ಪ್ರಬಲವಾಗಿರುವ ಲಡಾಖ್‌ ಹಾಗೂ ಜಮ್ಮು ಭಾಗಕ್ಕೆ ಪಿಡಿಪಿ ಕೊಡುಗೆ ನೀಡಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದೇ ವೇಳೆ, ರಾಜ್ಯದಲ್ಲಿ ಶಾಂತಿ ಸ್ಥಾಪನೆಯಲ್ಲಿ ಮೆಹಬೂಬಾ ವಿಫಲರಾದರು. ಯೋಧನನ್ನು (ಯೋಧ ಔರಂಗಜೇಬ್‌) ಅಪಹರಿಸಿ ಹತ್ಯೆ ಮಾಡುವ ಮಟ್ಟಿಗೆ ಕಾನೂನು ಸುವ್ಯವಸ್ಥೆ ಹದಗೆಟ್ಟಿತು. ಇನ್ನು ಒಬ್ಬ ಪತ್ರಿಕಾ ಸಂಪಾದಕರನ್ನು ಹತ್ಯೆ ಮಾಡುವ ಮಟ್ಟಿಗೆ ವ್ಯವಸ್ಥೆ ಕುಸಿಯಿತು. ಪತ್ರಕರ್ತನೆಂದರೆ ಬರವಣಿಗೆ ಸ್ವಾತಂತ್ರ್ಯ ಇರುತ್ತದೆ. ಆದರೆ ಇಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೂ ಅಪಾಯ ಬಂತು. ಇಂಥ ಸಂದರ್ಭದಲ್ಲಿ ಸರ್ಕಾರದಲ್ಲಿರುವುದು ಹೇಗೆ ಎಂದು ನಾವು ಯೋಚಿಸಿದೆವು ಎಂದು 3 ವರ್ಷ ಪಿಡಿಪಿ ಜತೆ ಆಳ್ವಿಕೆ ನಡೆಸಿದ ಪಕ್ಷದ ಅಧ್ಯಕ್ಷರು ಹೇಳಿದರು. ಇನ್ನು ರಾಜ್ಯವನ್ನು ಬಹುಕಾಲ ಆಳ್ವಿಕೆ ನಡೆಸಿದ ಎರಡು ಕುಟುಂಬಗಳು ಜಮ್ಮು ಹಾಗೂ ಲಡಾಖನ್ನು ನಿರ್ಲಕ್ಷಿಸಿದವು ಎಂದು ಮುಫ್ತಿ ಹಾಗೂ ಅಬ್ದುಲ್ಲಾ ಕುಟುಂಬಗಳನ್ನು ಶಾ ತರಾಟೆಗೆ ತೆಗೆದುಕೊಂಡರು.

ಆಜಾದ್‌, ರಾಹುಲ್‌ ವಿರುದ್ಧ ವಾಗ್ದಾಳಿ:  ರಾಜ್ಯಸಭೆ ವಿಪಕ್ಷ ನಾಯಕ ಗುಲಾಂ ನಬಿ ಆಜಾದ್‌ ಅವರು ಸೇನೆಯ ವಿರುದ್ಧ ಹಾಗೂ ಉಗ್ರರ ಪರ ಮಾತನಾಡಿದ್ದಾರೆ. ಅದಕ್ಕೆ ಲಷ್ಕರ್‌ ಎ ತೊಯ್ಬಾ ಅನುಮೋದಿಸಿದೆ. ಕಾಂಗ್ರೆಸ್‌ ಹಾಗೂ ಲಷ್ಕರ್‌ ನಡುವೆ ಮ್ಯಾಚ್‌ ಫಿಕ್ಸಿಂಗ್‌ ಆಗಿದೆ ಎಂಬುದು ಇದರಿಂದ ಸಾಬೀತಾಗುತ್ತದೆ. ಇದೇ ವೇಳೆ ಕಾಂಗ್ರೆಸ್‌ ಇನ್ನೊಬ್ಬ ಮುಖಂಡ ಸೈಫುದ್ದೀನ್‌ ಸೋಜ್‌ ಅವರು ಕಾಶ್ಮೀರವನ್ನು ತುಂಡು ಮಾಡಬೇಕೆಂಬ ಮುಷರ್ರಫ್‌ ಹೇಳಿಕೆಯನ್ನು ಅನು ಮೋದಿಸುತ್ತಾರೆ. ಆದರೆ ಸೋಜ್‌ 100 ಜನ್ಮ ತಳೆದರೂ ಕಾಶ್ಮೀರವನ್ನು ಭಾರತದಿಂದ ಬೇರ್ಪಡಲು ಬಿಜೆಪಿ ಬಿಡಲ್ಲ. ಈ ಬಗ್ಗೆ ರಾಹುಲ್‌ ಗಾಂಧಿ ಏಕೆ ಸುಮ್ಮನಿದ್ದಾರೆ? ಅವರು ಕ್ಷಮೆಯಾಚಿಸಲಿ ಎಂದು ಶಾ ಸವಾಲೆಸೆದರು.