ಬೆಂಗಳೂರು [ಅ.22]:  ಉತ್ಪ್ರೇಕ್ಷಿತ ಅಂಕಿ-ಅಂಶಗಳನ್ನು ಉಲ್ಲೇಖಿಸುವ ಮೂಲಕ ಹೆಚ್ಚು ಲಾಭವನ್ನು ತೋರಿಸುವಂತೆ ‘ಹಣಕಾಸು ವಿಭಾಗ’ಕ್ಕೆ ಒತ್ತಡ ಹೇರುತ್ತಿದ್ದಾರೆಂದು ಇಸ್ಫೋಸಿಸ್‌ ಕಂಪನಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಯ ವಿರುದ್ಧ ಆ ಸಂಸ್ಥೆಯ ಉದ್ಯೋಗಿಗಳ ಗುಂಪೊಂದು ಆರೋಪಿಸಿದೆ.

ತಮ್ಮನ್ನು ‘ನೈತಿಕ ಉದ್ಯೋಗಿ’ಗಳು ಎಂದು ಗುರುತಿಸಿಕೊಂಡಿರುವ ಈ ಗುಂಪು ಇಸ್ಫೋಸಿಸ್‌ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸಲೀಲ್‌ ಪಾರೇಕ್‌ ಅವರ ವಿರುದ್ಧ ಈ ಆರೋಪ ಮಾಡಿ  ಕಂಪನಿಯ ಆಡಳಿತ ಮಂಡಳಿ ಮತ್ತು ಅಮೆರಿಕ ಸೆಕ್ಯೂರಿಟೀಸ್‌ ಎಕ್ಸ್‌ಚೆಂಜ್‌ ಕಮಿಷನ್‌ (ಎಸ್‌ಇಸಿ) ಸಂಸ್ಥೆಗೆ ಪತ್ರ ಬರೆದಿದೆ.

ಇತ್ತೀಚಿನ ತಿಂಗಳಲ್ಲಿ ಸಂಸ್ಥೆಗೆ ಉತ್ತಮ ಆದಾಯ ಮತ್ತು ಲಾಭ ಬರುತ್ತದೆಂದು ಹೇಳುವ ರೀತಿಯ ಲೆಕ್ಕವನ್ನು ತೋರಿಸುವಂತೆ ಸಂಸ್ಥೆ ಹೇಳುತ್ತಿದೆ. ವೀಸಾ ವೆಚ್ಚವನ್ನು ಮಾನ್ಯ ಮಾಡದೆ ಲಾಭವನ್ನು ಹೆಚ್ಚಿಸಬೇಕು ಎಂದು ಹೇಳುತ್ತಿದೆ. ಈ ಬಗ್ಗೆ ಆಡಿಟರ್‌ ಆಕ್ಷೇಪ ವ್ಯಕ್ತಪಡಿಸಿದಾಗ ವಿಷಯವನ್ನೇ ಮುಂದೂಡಲಾಯಿತು. ಅಷ್ಟೇ ಅಲ್ಲ, ತುಂಬಾ ಗಂಭೀರ ವಿಷಯಗಳನ್ನು ಆಡಿಟರ್‌ ಹಾಗೂ ಬೋರ್ಡ್‌ ಮುಂದೆ ಇಡದಂತೆ ಒತ್ತಡ ಹೇರಲಾಗುತ್ತಿದೆ ಎಂದು ಪತ್ರದಲ್ಲಿ ವಿವರಿಸಲಾಗಿದೆ.

ಬೃಹತ್‌ ವ್ಯವಹಾರಗಳಲ್ಲಿ ಅಕ್ರಮ ನಡೆದಿದೆ, ಬೃಹತ್‌ ವ್ಯವಹಾರಗಳ ಬಗ್ಗೆ ಆಡಳಿತ ಮಂಡಳಿಗೆ ವಿವರಿಸುವುದಕ್ಕೆ ತಡೆ ಮಾಡುತ್ತಾರೆ. ಅಷ್ಟೇ ಅಲ್ಲ, ‘ಬೋರ್ಡ್‌ಗೆ ಈ ವಿಷಯಗಳು ಅರ್ಥವಾಗುವುದಿಲ್ಲ. ಶೇರು ದರ ಹೆಚ್ಚಾಗುತ್ತಿದ್ದರೆ ಅವರು ಖುಷಿಯಾಗಿರುತ್ತಾರೆ. ಆ ಇಬ್ಬರು ಮದ್ರಾಸಿಗಳು (ಸುಂದರಂ ಮತ್ತು ಪ್ರಹ್ಲಾದ್‌) ಮತ್ತು ದಿವಾ (ಕಿರಣ್‌) ಕ್ಷುಲ್ಲಕ ಅಂಶಗಳನ್ನು ಪ್ರಸ್ತಾಪಿಸಿದರೆ ಅದನ್ನು ಸುಮ್ಮನೆ ನಿರ್ಲಕ್ಷ್ಯ ಮಾಡಿ’ ಎಂದು ಸಿಇಒ ಹೇಳುತ್ತಾರೆ ಎಂದು ಪತ್ರದಲ್ಲಿ ವಿವರಿಸಲಾಗಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಕಂಪನಿಯ ಸಿಎಒ ಮತ್ತು ಸಿಎಫ್‌ಒ ಅವರು ತೊಂದರೆ ತೆಗೆದುಕೊಂಡಾದರೂ ಹೆಚ್ಚು ಲಾಭ ತೋರಿಸಿ ಹಾಗೂ ಈಗಿರುವ ನೀತಿಯನ್ನು ಬದಲಾಯಿಸಿ ಎಂದು ಒತ್ತಡ ಹೇರುತ್ತಿದ್ದಾರೆ. ವಾರ್ಷಿಕ ವರದಿಯಲ್ಲಿ ಉತ್ತಮವಾಗಿರುವ, ಅಪೂರ್ಣವಾಗಿರುವ ಮಾಹಿತಿಯನ್ನು ಹೂಡಿಕೆದಾರರು ಹಾಗೂ ಆರ್ಥಿಕ ವಿಶ್ಲೇಷಕರಿಗೆ ನೀಡಿ ಎಂದು ಸೂಚಿಸುತ್ತಾರೆ. ಅವರ ಮಾತನ್ನು ಒಪ್ಪಿಕೊಳ್ಳದವರನ್ನು ಕಡೆಗಣನೆ ಮಾಡಲಾಗುತ್ತದೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ‘ನೈತಿಕ ಉದ್ಯೋಗಿ’ಗಳ ಹೆಸರಲ್ಲಿ ಬರೆದ ಪತ್ರದಲ್ಲಿ ಮನವಿ ಮಾಡಲಾಗಿದೆ.