ಬೆಂಗಳೂರು :  ಉದ್ಯೋಗದ ಸಮಯದಲ್ಲಿ ಅಪಘಾತದಿಂದ ಮಾತ್ರವಲ್ಲದೆ ಹೃದಯಘಾತ ಸಂಭವಿಸಿ ಸಾವನ್ನಪ್ಪಿದರೂ ಉದ್ಯೋಗಿಗೆ ಪರಿಹಾರವನ್ನು ವಿಮಾ ಕಂಪನಿಯೇ ನೀಡಬೇಕು ಎಂದು ಹೈಕೋರ್ಟ್‌ ಆದೇಶ ಹೊರಡಿಸಿದೆ.

ಅಂಜನ್‌ ಕುಮಾರ್‌ ಎಂಬ ಲಾರಿ ಚಾಲಕ ಉದ್ಯೋಗದ ಸಮಯದಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ವೇಳೆ ಹೃದಯಘಾತ ಸಂಭವಿಸಿ ಸಾವನ್ನಪ್ಪಿಸಿದ ಪ್ರಕರಣದಲ್ಲಿ ಆತನ ಕುಟುಂಬಕ್ಕೆ ಪರಿಹಾರ ಕಲ್ಪಿಸಲು ವಿಮಾ ಕಂಪನಿಯೊಂದು ನಿರಾಕರಿಸಿ ಹೈಕೋರ್ಟ್‌ ಮೆಟ್ಟಿಲೇರಿತ್ತು. ವಾಹನ ಅಪಘಾತ ಸಂಭವಿಸಿದರೆ ಮಾತ್ರ ಪರಿಹಾರ ಕಲ್ಪಿಸಲು ವಿಮಾ ಕಂಪನಿ ಹೊಣೆಯಾಗುತ್ತದೆ. ಹೃದಯಘಾತದಿಂದ ಸಾವನ್ನಪ್ಪಿದಾಗ ಚಾಲಕನ ಕುಟುಂಬಕ್ಕೆ ಪರಿಹಾರ ಕಲ್ಪಿಸಲು ತಾನು ಹೊಣೆಗಾರನಾಗುವುದಿಲ್ಲ ಎಂದು ವಿಮಾ ಕಂಪನಿ ಪ್ರತಿಪಾದಿಸಿತ್ತು.

ಈ ವಾದವನ್ನು ಸಾರಾಸಗಟಾಗಿ ತಿರಸ್ಕರಿಸಿದ ಹೈಕೋರ್ಟ್‌, ಡ್ರೈವರ್‌ ಕೆಲಸ ತುಂಬಾ ಒತ್ತಡದ ಉದ್ಯೋಗ. ಟಯರ್‌ ಪಂಕ್ಚರ್‌ ಆಗಿದ್ದರಿಂದ ಚಾಲಕ ಅಂಜನ್‌ ಕುಮಾರ್‌ ಲಾರಿಯನ್ನು ರಸ್ತೆ ಬದಿ ನಿಲ್ಲಿಸಿ ವಿಶ್ರಾಂತ ಪಡೆಯುತ್ತಿದ್ದಾಗ ಹೃದಯಘಾತ ಸಂಭವಿಸಿ ಸಾವನ್ನಪ್ಪಿದ್ದಾನೆ. ಆತನ ಆ ದಿನದ ಕೆಲಸ ಪೂರ್ಣಗೊಂಡಿರಲಿಲ್ಲ. ಆದ್ದರಿಂದ ಇದು ಉದ್ಯೋಗದ ಸಮಯದಲ್ಲಿಯೇ ಸಾವು ಸಂಭವಿಸಿದ ಪ್ರಕರಣ ಎಂಬುದಾಗಿ ಪರಿಗಣಿಸಬೇಕಿದೆ ಎಂದು ಹೈಕೋರ್ಟ್‌ ತೀರ್ಮಾನಿಸಿತು.

ಅಲ್ಲದೆ, ಅಂಜನ್‌ ಕುಮಾರ್‌ ಡ್ರೈವರ್‌ ಆಗಿ ಉದ್ಯೋಗ ಮಾಡುತ್ತಿದ್ದಾಗ ಅಪಘಾತ ನಡೆದು ಗಾಯಗೊಂಡು ಸಾವನ್ನಪ್ಪಿಲ್ಲ. ಹೃದಯಘಾತದಿಂದ ಸಾವನ್ನಪ್ಪಿದ್ದಾನೆ. ಹೃದಯಘಾತವು ಒಂದು ಸಹ ಪ್ರಕ್ರಿಯೆ. ಹೀಗಾಗಿ ಇದೊಂದು ಸಹಜ ಸಾವು ಎಂದು ವಿಮಾ ಕಂಪನಿ ಮಂಡಿಸಿದ ವಾದ ಒಪ್ಪಲಾಗದು ಎಂದು ಅಭಿಪ್ರಾಯಪಟ್ಟಹೈಕೋರ್ಟ್‌, ಕಾರ್ಮಿಕ ಆಯುಕ್ತರ ಆದೇಶದಲ್ಲಿ ಮಧ್ಯಪ್ರವೇಶಿಸಲು ಸಕಾರಣ ಕಂಡುಬರುತ್ತಿಲ್ಲ ಎಂದು ತಿಳಿಸಿ ವಿಮಾ ಕಂಪನಿಯ ಮೇಲ್ಮನವಿ ವಜಾಗೊಳಿಸಿತು. ಹಾಗೆಯೇ, ಅಂಜನ್‌ ಕುಮಾರ್‌ ಕುಟುಂಬ ಸದಸ್ಯರನ್ನು ಗುರುತಿಸಿ ಅವರ ಹೆಸರಿನಲ್ಲಿ ಕಾರ್ಮಿಕ ಆಯುಕ್ತರು ಘೋಷಿಸಿದ ಪರಿಹಾರ ಮೊತ್ತ ಠೇವಣಿ ಇರಿಸುವಂತೆ ವಿಮಾ ಕಂಪನಿಗೆ ಆದೇಶಿಸಿದೆ.

ವಿಶ್ರಾಂತಿ ವೇಳೆ ಹೃದಯಘಾತ:

ಮುಝೀಬ್‌ ಖಾನ್‌ ಎಂಬುವರ ಬಳಿ ಚಿತ್ರದುರ್ಗದ ಹೊಸ ಟೌನ್‌ ನಿವಾಸಿ ಅಂಜನ್‌ ಕುಮಾರ್‌ ಲಾರಿ ಚಾಲಕರಾಗಿದ್ದರು. 2007ರಲ್ಲಿ ಕಬ್ಬಿಣದ ಅದಿರು ಹೊತ್ತು ನುಗ್ಗೇನಹಳ್ಳಿಯಿಂದ ಮಂಗಳೂರಿಗೆ ಕೊಂಡೊಯ್ಯುತ್ತಿದ್ದ ವೇಳೆ ಬೈರಾಪುರ ಬಳಿ ಲಾರಿ ಪಂಕ್ಚರ್‌ ಆಗಿತ್ತು. ಇದರಿಂದ ಲಾರಿಯನ್ನು ರಸ್ತೆಬದಿ ನಿಲ್ಲಿಸಿದ್ದ ಅಂಜನ್‌ ಕುಮಾರ್‌, ಸಮೀಪದ ಹೋಟೆಲ್‌ನಲ್ಲಿ ಆಹಾರ ಸೇವಿಸಿ, ಅಲ್ಲಿನ ಮರವೊಂದರ ಬುಡದಲ್ಲಿ ಕುಳಿತು ವಿಶ್ರಾಂತ ಪಡೆಯುತ್ತಿದ್ದರು. ಈ ವೇಳೆ ಹೃದಯಘಾತ ಸಂಭವಿಸಿ ಮೃತಪಟ್ಟಿದ್ದರು.

ಪ್ರಕರಣದಲ್ಲಿ ಪರಿಹಾರ ಕಲ್ಪಿಸಲು ಲಾರಿ ಮಾಲಿಕ ಹಾಗೂ ವಿಮಾ ಕಂಪನಿಗೆ ಆದೇಶಿಸುವಂತೆ ಕೋರಿ ಮೃತನ ಪತ್ನಿ ರೇಣುಕಮ್ಮ ಕಾರ್ಮಿಕ ಆಯುಕ್ತರಿಗೆ ಅರ್ಜಿ ಸಲ್ಲಿಸಿದ್ದರು. ಅಂಜನ್‌ ಕುಮಾರ್‌ ಉದ್ಯೋಗದ ಸಮಯದಲ್ಲಿ ಹೃದಯಘಾತ ಸಂಭವಿಸಿ ಸಾವನ್ನಪ್ಪಿದ ಕಾರಣ ಆತನ ಕುಟುಂಬದವರಿಗೆ ವಾರ್ಷಿಕ ಶೇ.12ರಷ್ಟುಬಡ್ಡಿದರದಲ್ಲಿ ಒಟ್ಟು 3,84,280ರು. ಪರಿಹಾರ ನೀಡುವಂತೆ ಪ್ರಕರಣದಲ್ಲಿ ವಿಮಾ ಕಂಪನಿಯಾಗಿದ್ದ ನ್ಯಾಷನಲ್‌ ಇನ್ಷೂರೆನ್ಸ್‌ ಕಂಪನಿ ಲಿಮಿಟೆಡ್‌ಗೆ ಸೂಚಿಸಿ 2010ರ ಏ.13ರಂದು ಕಾರ್ಮಿಕ ಆಯುಕ್ತರು ಆದೇಶಿಸಿದ್ದರು. ಈ ಆದೇಶ ಪ್ರಶ್ನಿಸಿ ವಿಮಾ ಕಂಪನಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು.

ವಿಮಾ ಕಂಪನಿಯ ವಾದ ತಿರಸ್ಕೃತ

ಅಂಜನ್‌ ಕುಮಾರ್‌ ಅಪಘಾತದಿಂದಾಗಿ ಮೃತಪಟ್ಟಿಲ್ಲ. ಬದಲಿಗೆ ವಿಶ್ರಾಂತಿ ಪಡೆಯುತ್ತಿದ್ದಾಗ ಹೃದಯಘಾತ ಸಂಭವಿಸಿ ಮೃತಪಟ್ಟಿದ್ದಾರೆ. ಹೃದಯಘಾತವು ಒಂದು ಸಹಜ ಪ್ರಕ್ರಿಯೆ. ಮೋಟಾರು ವಾಹನ ಕಾಯ್ದೆಯ ಸೆಕ್ಷನ್‌ 140ರ ಪ್ರಕಾರ ಅಪಘಾತ ನಡೆದು ಗಾಯಗೊಂಡರೆ, ಅಂಗವೈಕಲ್ಯಕ್ಕೆ ಗುರಿಯಾದರೆ ಅಥವಾ ಉದ್ಯೋಗಿ ಸಾವನ್ನಪ್ಪಿದ್ದರೆ ಮಾತ್ರ ಸಂತ್ರಸ್ತರಿಗೆ ಪರಿಹಾರ ಒದಗಿಸಲು ವಿಮಾ ಕಂಪನಿ (ವಾಹನಕ್ಕೆ ವಿಮೆ ಮಾಡಿಸಿದ್ದರೆ) ಹೊಣೆಯಾಗಿರುತ್ತದೆ. ಉದ್ಯೋಗಿಗೆ ನಷ್ಟಉಂಟಾದ ಎಲ್ಲ ಸಂದರ್ಭದಲ್ಲೂ ವಾಹನ ವಿಮಾ ಪಾಲಿಸಿ ಪರಿಹಾರ ಕಲ್ಪಿಸುವುದಿಲ್ಲ. ಆದ್ದರಿಂದ ಅಂಜನ್‌ ಕುಮಾರ್‌ ಅವರದು ಸಹಜ ಸಾವು ಎಂದು ತೀರ್ಮಾನಿಸಿ ಆತನ ಕುಟುಂಬ ಸದಸ್ಯರಿಗೆ ಪರಿಹಾರ ಕಲ್ಪಿಸುವಂತೆ ಕಾರ್ಮಿಕ ಆಯುಕ್ತರು ಹೊರಡಿಸಿದ ಆದೇಶ ರದ್ದುಪಡಿಸಬೇಕು ಎಂದು ವಿಮಾ ಕಂಪನಿ ಕೋರಿತ್ತು. ಈ ವಾದ ತಿರಸ್ಕರಿಸಿದ ನ್ಯಾಯಮೂರ್ತಿ ಎಚ್‌.ಪಿ.ಸಂದೇಶ್‌ ಅವರಿದ್ದ ಏಕಸದಸ್ಯ ಪೀಠ, ಕಾರ್ಮಿಕ ಆಯುಕ್ತರ ಆದೇಶ ಎತ್ತಿಹಿಡಿಯಿತು.


ವರದಿ : ವೆಂಕಟೇಶ್‌ ಕಲಿಪಿ