ಮಾಹಿತಿ ತಂತ್ರಜ್ಞಾನ ಖಾತೆ ಸಚಿವ ಕೆ.ಜೆ.ಜಾರ್ಜ್ ನಂಟಿರುವ ಬೆಂಗಳೂರಿನ ಪ್ರತಿಷ್ಠಿತ ಎಂಬಸಿ ಗ್ರೂಪ್‌ನ ಮಾಲೀಕ ಜಿತೇಂದ್ರ ವೀರ್ವಾನಿ ಅವರಿಗೆ ಹೊಸ ಹಿರಿಮೆ ಸಿಕ್ಕಿದೆ.

ಮುಂಬೈ : ಕರ್ನಾಟಕದ ಮಾಹಿತಿ ತಂತ್ರಜ್ಞಾನ ಖಾತೆ ಸಚಿವ ಕೆ.ಜೆ.ಜಾರ್ಜ್ ನಂಟಿರುವ ಬೆಂಗಳೂರಿನ ಪ್ರತಿಷ್ಠಿತ ಎಂಬಸಿ ಗ್ರೂಪ್‌ನ ಮಾಲೀಕ ಜಿತೇಂದ್ರ ವೀರ್ವಾನಿ ಅವರಿಗೆ ಹೊಸ ಹಿರಿಮೆ ಸಿಕ್ಕಿದೆ. ಅವರೀಗ ಅವರು ದೇಶದ ಎರಡನೇ ಶ್ರೀಮಂತ ರಿಯಲ್‌ ಎಸ್ಟೇಟ್‌ ಉದ್ಯಮಿಯಾಗಿ ಹೊರಹೊಮ್ಮಿದ್ದಾರೆ. ಇದೇ ವೇಳೆ, ಹೆಚ್ಚು ರಿಯಲ್‌ ಎಸ್ಟೇಟ್‌ ಉದ್ಯಮಿಗಳು ವಾಸಿಸುತ್ತಿರುವ ನಗರಗಳ ಪೈಕಿ ಬೆಂಗಳೂರು ಎರಡನೇ ಸ್ಥಾನದಲ್ಲಿದೆ.

ಹುರೂನ್‌ ರಿಪೋರ್ಟ್‌ ಹಾಗೂ ಗ್ರೋಹೆ ಇಂಡಿಯಾ ಸಿದ್ಧಪಡಿಸಿರುವ ‘ರಿಯಲ್‌ ಎಸ್ಟೇಟ್‌ ಶ್ರೀಮಂತರ ಪಟ್ಟಿ2018’ರಲ್ಲಿ ಈ ಮಾಹಿತಿ ಇದೆ. ಬಿಜೆಪಿ ನಾಯಕರೂ ಆಗಿರುವ ಮುಂಬೈನ ಲೋಧಾ ಗ್ರೂಪ್‌ನ ಒಡೆಯ ಮಂಗಲ್‌ ಪ್ರಭಾತ್‌ ಲೋಧಾ ಅವರು ದೇಶದ ಶ್ರೀಮಂತ ರಿಯಲ್‌ ಎಸ್ಟೇಟ್‌ ಧನಿಕರಾಗಿ ಹೊರಹೊಮ್ಮಿದ್ದಾರೆ. 62 ವರ್ಷ ವಯಸ್ಸಿನ ಅವರ ಬಳಿ ಒಟ್ಟಾರೆ 27,150 ಕೋಟಿ ರು. ಆಸ್ತಿ ಇದೆ. ಕಳೆದ ವರ್ಷ ಅವರ ಬಳಿ 18610 ಕೋಟಿ ರು. ಸಂಪತ್ತು ಇತ್ತು ಎಂದು ವರದಿ ತಿಳಿಸಿದೆ.

ಇದೇ ವೇಳೆ, 23,160 ಕೋಟಿ ರು. ಆಸ್ತಿಯೊಂದಿಗೆ ಜಿತೇಂದ್ರ ವೀರ್ವಾನಿ ಎರಡನೇ ಸ್ಥಾನದಲ್ಲಿದ್ದರೆ, ಡಿಎಲ್‌ಎಫ್‌ನ ರಾಜೀವ್‌ ಸಿಂಗ್‌ ಅವರು 17,690 ಕೋಟಿ ರು. ಸಂಪತ್ತಿನೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ. 2017ರಲ್ಲಿ 23,460 ಕೋಟಿ ರು. ಆಸ್ತಿಯೊಂದಿಗೆ ದೇಶದಲ್ಲೇ ಪ್ರಥಮ ಸ್ಥಾನದಲ್ಲಿದ್ದ ಡಿಎಲ್‌ಎಫ್‌ ಕಂಪನಿ ಸಂಸ್ಥಾಪಕ ಕೆ.ಪಿ. ಸಿಂಗ್‌ ಈ ವರ್ಷ ಟಾಪ್‌ 10ರಲ್ಲಿ ಸ್ಥಾನ ಪಡೆಯಲೂ ವಿಫಲರಾಗಿದ್ದಾರೆ.

ಇದೇ ವೇಳೆ, ರಿಯಲ್‌ ಎಸ್ಟೇಟ್‌ ಧನಿಕರು ವಾಸಿಸಲು ಇಷ್ಟಪಡುವ ನಗರಗಳಲ್ಲಿ ಮುಂಬೈ ಪ್ರಥಮ ಸ್ಥಾನದಲ್ಲಿದೆ. ಅಲ್ಲಿ 35 ಶ್ರೀಮಂತ ರಿಯಲ್‌ ಎಸ್ಟೇಟ್‌ ಉದ್ಯಮಿಗಳು ವಾಸ ಮಾಡುತ್ತಿದ್ದರೆ, 22 ಉದ್ಯಮಿಗಳೊಂದಿಗೆ ದೆಹಲಿ ಹಾಗೂ 21 ಧನಿಕರೊಂದಿಗೆ ಬೆಂಗಳೂರು 3ನೇ ಸ್ಥಾನ ಪಡೆದಿವೆ.

ದೇಶದ 100 ಪ್ರಮುಖ ರಿಯಲ್‌ ಎಸ್ಟೇಟ್‌ ಉದ್ಯಮಿಗಳ ಒಟ್ಟಾರೆ ಆಸ್ತಿ 2.36 ಲಕ್ಷ ಕೋಟಿ ರು.ನಷ್ಟಿದೆ. ಕಳೆದ ವರ್ಷಕ್ಕೆ (1.86 ಲಕ್ಷ ಕೋಟಿ ರು.)ಗೆ ಹೋಲಿಸಿದರೆ ಶೇ.27ರಷ್ಟುಹೆಚ್ಚಳವಾಗಿದೆ ಎಂದು ವರದಿ ತಿಳಿಸಿದೆ.