ನವದೆಹಲಿ[ಸೆ:19] ಹುಲಿ, ಸಿಂಹ, ಚಿರತೆ, ಆನೆ ಸೇರಿದಂತೆ ಇನ್ನಿತರ ಕಾಡು ಪ್ರಾಣಿಗಳು ಅರಣ್ಯಗಳಿಂದ ತಪ್ಪಿಸಿಕೊಂಡಿದ್ದನ್ನು ಕೇಳಿಯೇ ಇರುತ್ತೇವೆ. ಆದರೆ, ರಾಷ್ಟ್ರ ರಾಜಧಾನಿ ದೆಹಲಿ ನಗರದಲ್ಲಿ ಕಳೆದ ಎರಡು ತಿಂಗಳ ಹಿಂದೆ ಹಾಡಹಗಲೇ ಆನೆಯೊಂದು ಕಾಣೆಯಾಗಿದ್ದ ವಿಚಾರ ತಡವಾಗಿ ಬೆಳಕಿಗೆ ಬಂದಿದೆ. ಅಲ್ಲದೆ, ಕಳೆದೆರಡು ತಿಂಗಳ ನಿರಂತರ ಕಾರಾರ‍ಯಚರಣೆ ನಡೆಸಿದ ಅರಣ್ಯಾಧಿಕಾರಿಗಳು ಕೊನೆಗೂ ನಾಪತ್ತೆಯಾಗಿದ್ದ 47 ವರ್ಷದ ಆನೆಯನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.

ಮನೆಯಲ್ಲಿ ದಾಸ್ತಾನಿರಿಸಿದ್ದ 51 ಕೆ.ಜಿ. ಆನೆ ದಂತ ಪತ್ತೆ

ಅಷ್ಟಕ್ಕೂ ಆಗಿದ್ದೇನು?:

ದೆಹಲಿಯ ಶಕಾರ್‌ಪುರ ಎಂಬಲ್ಲಿ ಮಾವುತ ವೃತ್ತಿ ನಡೆಸುವ ಕುಟುಂಬವೊಂದು ಆನೆಯೊಂದನ್ನು ಸಾಕಿತ್ತು. ಈ ಆನೆಗೆ ಪ್ರೀತಿಯಿಂದ ಲಕ್ಷ್ಮಿ ಎಂದು ಹೆಸರಿಡಲಾಗಿತ್ತು. ಆದರೆ, ಜು.6ರಂದು ಹರಾರ‍ಯಣದ ಪುನರ್ವಸತಿ ಕೇಂದ್ರಕ್ಕೆ ಕರೆದೊಯ್ಯುವ ಸಲುವಾಗಿ ಅರಣ್ಯಾಧಿಕಾರಿಗಳು ಬಂದಿದ್ದರು. ಈ ವೇಳೆ ಮಾವುತನ ಕುಟುಂಬ ಹಾಗೂ ಅರಣ್ಯಾಧಿಕಾರಿಗಳ ನಡುವೆ ಮಾರಾಮಾರಿಯೇ ಏರ್ಪಟ್ಟಿತ್ತು. ಏತನ್ಮದ್ಯೆ, ಲಕ್ಷ್ಮೇ(47) ಆನೆಯನ್ನು ಅದರ ಮಾವುತ ಸದ್ದಾಂ ಯಮುನಾ ನದಿ ದಂಡೆಗೆ ಕರೆದೊಯ್ದು, ಯಾರಿಗೂ ತಿಳಿಯದಂತೆ ಅಡಗಿಸಿಕೊಂಡಿದ್ದ.

ಏಕಾಂಗಿಯಾಗಿ ಬಂದ ಬಲರಾಮ ಆನೆ!

ಈ ಆನೆ ಮತ್ತು ಮಾವುತನ ಹುಡುಕಾಟಕ್ಕಾಗಿ ದೆಹಲಿ ಪೊಲೀಸರು ಹಾಗೂ ಅರಣ್ಯಾಧಿಕಾರಿಗಳ ತಂಡಗಳು ಹಗಲು-ರಾತ್ರಿ ಎನ್ನದೆ ನಿರಂತರ ಕಾರ್ಯಾಚರಣೆ ನಡೆಸಿದ್ದರು. ಕೊನೆಗೆ ಮಂಗಳವಾರ ಬೆಳಗಿನ ಜಾವ 3.30ರ ವೇಳೆಗೆ ಉತ್ತರ ಪ್ರದೇಶದ ಗಡಿ ಭಾಗದ ಯಮುನಾ ನದಿಯ ತೀರದಲ್ಲಿ ಆನೆಯನ್ನು ಪತ್ತೆ ಹಚ್ಚಿದ್ದಾರೆ. ಇನ್ನು ಆನೆಯನ್ನು ಕದ್ದೊಯ್ದಿದ್ದ ಆರೋಪಿ ಸದ್ದಾಂನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಆನೆಯ ಮಾಲೀಕ ಯೂಸಫ್‌ ಅಲಿ ಹಾಗೂ ಆತನ ಹಿರಿಯ ಪುತ್ರ ತಲೆಮರೆಸಿಕೊಂಡಿದ್ದಾರೆ.