ಬೆಂಗಳೂರು : ನೀಲಗಿರಿ ಹಾಗೂ ಸರ್ವೆ ಮರಗಳು ಪರಿಸರಕ್ಕೆ ಮಾರಕವಾಗಿವೆ. ನೀಲಗಿರಿ ಬೆಳೆಯುವುದನ್ನು ಈಗಾಗಲೇ ಸರ್ಕಾರ ನಿಷೇಧಿಸಿದೆ. ಹೀಗಾಗಿ ರೈತರಿಗೆ ಇಂತಹ ಜಾಗದಲ್ಲಿ ಆರ್ಥಿಕವಾಗಿ ಹೆಚ್ಚು ಲಾಭದಾಯಕವಾದ ‘ಎಲಿಫೆಂಟ್ ಬ್ಯಾಂಬೂ’ ಬೆಳೆಯಲು ಪ್ರೋತ್ಸಾಹ ನೀಡಲು ಚಿಂತನೆ ನಡೆಸಲಾಗಿದೆ ಎಂದು ಕೃಷಿ ಸಚಿವ ಶಿವಶಂಕರ್ ರೆಡ್ಡಿ ತಿಳಿಸಿದ್ದಾರೆ.

ಬುಧವಾರ ವಿಕಾಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋಲಾರ, ಚಿಕ್ಕಬಳ್ಳಾಪುರ ಸೇರಿದಂತೆ ರಾಜ್ಯದ ಅನೇಕ ಕಡೆ ನೀಲಗಿರಿ, ಸರ್ವೆ ಮರವನ್ನು ಬೆಳೆಯಲಾಗುತ್ತಿದೆ. ನೀಲಗಿರಿ ಮರದಿಂದ ಪರಿಸರದ ತೇವಾಂಶ ಕಡಿಮೆ ಆಗುತ್ತದೆ. ಆ ಜಾಗದಲ್ಲಿ ಇತರೆ ಯಾವುದೇ ಬೆಳೆ ಬೆಳೆಯಲು ಬರುವುದಿಲ್ಲ. 

ಹಾಗಾಗಿ ಇದಕ್ಕೆ ಪರ್ಯಾಯವಾಗಿ ಬೇಗ ಇಳುವರಿ ಬರುವ, ಮುಳ್ಳು ಇಲ್ಲದ ‘ಎಲಿಫೆಂಟ್ ಬ್ಯಾಂಬೂ’ (ಆನೆ ಬಿದಿರು) ಬೆಳೆಸಲು ಯೋಚಿಸಲಾಗಿದೆ ಎಂದರು. ಮೊದಲ ಎರಡು ವರ್ಷಗಳಲ್ಲಿ ಹನಿ ನೀರಾವರಿ ಮೂಲಕ ಬೆಳೆಸಬೇಕಾಗುತ್ತದೆ. ಮೂರು ವರ್ಷಗಳಲ್ಲಿ ಬೆಳೆಯುವ ಈ ಬಿದಿರು ಸುಮಾರು 25 - 30 ವರ್ಷ  ಇಳುವರಿ ಕೊಡಲಿದೆ. ಒಂದು ಎಕರೆ ಭೂಮಿಯಲ್ಲಿ ಬೆಳೆಯುವ ಬಿದಿರಿನಿಂದ ವರ್ಷಕ್ಕೆ ಮೂರರಿಂದ ಮೂರೂವರೆ ಲಕ್ಷ ರು. ಆದಾಯ ಬರಬಹುದೆಂದು ಅಂದಾಜಿಸಲಾಗಿದೆ. ಕೇಂದ್ರ ಸರ್ಕಾರದ ಈ ಯೋಜನೆಯನ್ನು ಹಂತ ಹಂತವಾಗಿ ರಾಜ್ಯದಲ್ಲಿ ಜಾರಿಗೆ ತರಲಾಗುವುದು ಎಂದರು.